More

    ಬೇಕಿಲ್ಲ ವರಿ, ಲಾಭದ ಬೇಕರಿ!; ಲಾಭ ತರುವ ಉದ್ಯಮ ಜಿಕೆವಿಕೆಯಲ್ಲಿ ತರಬೇತಿ

    | ಸತೀಶ್ ಕಂದಗಲ್​ಪುರ ಬೆಂಗಳೂರು

    ಉದ್ಯಮ ಆರಂಭಿಸಿದ ದಿನದಿಂದಲೇ ದುಡ್ಡು ಮಾಡಬಹುದಾದ ಉದ್ಯಮಗಳಲ್ಲಿ ಹೋಟೆಲ್, ಬೇಕರಿಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ವೈವಿಧ್ಯಮಯ ರುಚಿ, ನೋಡಲು ಶುಚಿಯಾಗಿದ್ದರಂತೂ ಜನ ಎಷ್ಟೇ ದೂರವಿದ್ದರು ಹುಡುಕಿಕೊಂಡು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಬೇಕರಿ ಉದ್ಯಮಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಸೂಕ್ತ ತರಬೇತಿ ಪಡೆದು ಉದ್ಯಮ ಆರಂಭಿಸಿದಲ್ಲಿ ಮಾಸಿಕ ಲಕ್ಷಾಂತರ ರೂ. ಆದಾಯ ಗಳಿಸಬಹುದು. ನವೋದ್ಯಮ ಸ್ಥಾಪನೆಗೆ (ಸ್ಟಾರ್ಟ್ ಅಪ್) ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಭಾರಿ ಪ್ರೋತ್ಸಾಹ ದೊರೆಯುತ್ತಿದೆ. ಆದರೆ, ದೇಶದಲ್ಲಿ ಶೇ.50ಕ್ಕೂ ಅಧಿಕ ದುಡಿಯಲು ಅರ್ಹರಾಗಿರುವ ಯುವಜನತೆ ಲಭ್ಯವಿದ್ದರೂ ಸೂಕ್ತ ಉದ್ಯೋಗ ಕೌಶಲ ಹೊಂದಿರುವವರ ಸಂಖ್ಯೆ ತುಂಬಾ ಗಣನೀಯವಾಗಿದೆ. ಹೀಗಾಗಿ, ಕೌಶಲಗಳನ್ನು ಕಲಿಸುವ ತರಬೇತಿ ಕೇಂದ್ರಗಳಿಗೆ ಇತ್ತೀಚೆಗೆ ಭಾರಿ ಬೇಡಿಕೆ ಬಂದಿದೆ. ಅದರಲ್ಲಿ ಸಾವಿರಾರು ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಕೌಶಲ ತರಬೇತಿ ಕೊಡುವ ನಿಟ್ಟಿನಲ್ಲಿ ಲಕ್ಷಾಂತರ ರೂ. ಶುಲ್ಕ ಪಡೆದು ಅಭ್ಯರ್ಥಿಗಳ ಅಭ್ಯುದಯದ ಬದಲು ಸ್ವಯಂ ಅಭಿವೃದ್ಧಿಗೆ ಆದ್ಯತೆ ನೀಡುತ್ತಿವೆ. ಆದರೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಆಹಾರ ಉದ್ಯಮಕ್ಕೆ ಬೆಂಬಲ ನೀಡುವ ಉದ್ದೇಶದಿಂದ 1968ರಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಲ್ಲಿ (ಜಿಕೆವಿಕೆ) ಬೇಕರಿ ತರಬೇತಿ ನೀಡುತ್ತಿದೆ. ಇದಕ್ಕೆ ಕಳೆದ 15 ವರ್ಷಗಳಿಂದ ಹೆಚ್ಚಿನ ಬೇಡಿಕೆ ಬಂದಿದೆ.

    ಕೃಷಿ ಮೇಳದಲ್ಲಿ ಸ್ಥಳದಲ್ಲಿಯೇ ತರಬೇತಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 2022ನೇ ಕೃಷಿ ಮೇಳದಲ್ಲಿ ಮಕ್ಕಳು, ಗೃಹಿಣಿಯರಿಗೆ ನಿಂತ ಸ್ಥಳದಲ್ಲಿಯೇ ಬೇಕರಿ ಉತ್ನನಗಳ ತಯಾರಿಸುವ ತರಬೇತಿ ನೀಡಲಾಗಿದೆ. ನಾಲ್ಕು ದಿನ ಪ್ರತಿ ಗಂಟೆಗೆ ಕನಿಷ್ಠ 40 ಜನರಂತೆ ಎರಡು ಯುನಿಟ್​ಗಳಿಂದ 1600 ರಿಂದ 2 ಸಾವಿರ ಜನರಿಗೆ ತರಬೇತಿ ಕೊಡಲಾಗಿದೆ. ಜತೆಗೆ ಬೇಕರಿ ಉದ್ಯಮ ಬೇಕಾದ ಗಾಜಿನ ಶೋಕೇಷ್​ಗಳು, ಲೈಟಿಂಗ್ಸ್, ಫ್ರಿಡ್ಜ್​ಗಳನ್ನು ಒದಗಿಸುವ ಬಗ್ಗೆ ಮಾಹಿತಿ ನೀಡಲಾಯಿತು.

    ಯಾರ್ಯಾರಿಗೆ ಅನುಕೂಲ?: ಕೃಷಿ ವಿಶ್ವವಿದ್ಯಾಲಯದ ಬೇಕರಿ ಉದ್ಯಮ ತರಬೇತಿಗೆ ಯುಎಸ್​ಎ ನೇತೃತ್ವದ ಯುಎಸ್ ವೀಟ್ ಅಸೋಸಿಯೇಷನ್ ವತಿಯಿಂದ ಆರ್ಥಿಕ ನೆರವು ಲಭಿಸುತ್ತಿದೆ. ಉದ್ಯಮ ಶೀಲತೆ ಅಭಿವೃದ್ಧಿ ಮಾಡುವುದು ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ಮೂಲ ಉದ್ದೇಶವಾಗಿದೆ. ಇಲ್ಲಿ ಕಲಿಕೆ ಮೂಲಕ ಬೇಕರಿ ತರಬೇತಿ ನೀಡಲಾಗುತ್ತಿದ್ದು, ಅರೆ ಸ್ವಯಂ ಚಾಲಿತ ಯಂತ್ರೋಪಕರಣಗಳ ಬಳಕೆಯನ್ನೂ ಮಾಡಲಾಗುತ್ತದೆ. ಒಟ್ಟಾರೆ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿಯನ್ನು 16 ವರ್ಷ ಮೇಲ್ಪಟ್ಟವರು ಪಡೆಯಬಹುದು. ಮುಖ್ಯವಾಗಿ ಬೇಕರಿ ಉದ್ಯಮಿಗಳು, ಗೃಹಿಣಿಯರು, ಬೇಕರಿ ಮಾಲೀಕರು, ಯುವಕರು, ಮಹಿಳಾ ಸ್ವಯಂ ಸಂಘದ ಸದಸ್ಯರು, ಸಂಘ-ಸಂಸ್ಥೆಗಳ ಸದಸ್ಯರು ಈ ತರಬೇತಿ ಪಡೆದಲ್ಲಿ ಉದ್ಯಮ ಆರಂಭಕ್ಕೆ ಅನುಕೂಲ ಆಗಲಿದೆ.

    ಯಾವ್ಯಾವ ಉತ್ಪನ್ನ ತಯಾರಿಸಬಹುದು?: ಬ್ರೆಡ್, ಬಿಸ್ಕತ್, ಕುಕೀಸ್, ಬನ್ಸ್, ಕೇಕ್​ಗಳು, ಹಲ್ವಾ, ರಸ್ಕ್, ದಿಲ್​ಪಸಂದ್, ಪಪ್ಸ್, ಚಾಕೋಲೇಟ್ ಉತ್ಪನ್ನಗಳು, ಕೇಕ್​ಗಳ ಮೇಲೆ ಡಿಸೈನ್ ಮಾಡುವುದು, ಮೌಲ್ಯವರ್ಧಿತ ಆಹಾರ ತಯಾರಿಕೆಯಲ್ಲಿ ರಾಗಿ ಮಾಲ್ಟ್, ಚಕ್ಕುಲಿ, ಹುರಿಹಿಟ್ಟು, ಲಡ್ಡು, ಸಿರಿಧಾನ್ಯದ ಲಡ್ಡು, ಪಾಲಕ್ ಟೇಸ್ಟಿ ಬೈಟ್ಸ್, ಚಟ್ನಿಪುಡಿ, ಸಿರಧಾನ್ಯ ದೋಸೆ ಮಿಶ್ರಣ, ಅಂಬಲಿ ಮಿಶ್ರಣ, ವೀನಿಂಗ್, ಸಿರಿಧಾನ್ಯ ಮತ್ತು ರಾಗಿ ಸ್ಟ್ರಿಪ್ಸ್ ಬಗ್ಗೆ ಕಲಿಸಲಾಗುತ್ತದೆ.

    ವರ್ಷದ ಎಲ್ಲ ತಿಂಗಳ ಮೊದಲ ವಾರದಲ್ಲಿ 4 ವಾರದ ದೀರ್ಘಾವಧಿ ಬೇಕರಿ ಉತ್ಪನ್ನ ತರಬೇತಿ ಕೋರ್ಸ್ ಆರಂಭಿಸಿ, ವಾರ್ಷಿಕ 1200ಕ್ಕೂ ಅಧಿಕ ಜನರಿಗೆ ತರಬೇತಿ ನೀಡಲಾಗುತ್ತದೆ. ಈವರೆಗೆ 10 ಸಾವಿರಕ್ಕೂ ಅಧಿಕ ಜನರು ಬೇಕರು ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ.

    | ಡಾ. ಸವಿತಾ ಎಸ್. ಮಂಗಾನವರ ಪ್ರಾಧ್ಯಾಪಕಿ

    10 ಸಾವಿರ ಉದ್ಯಮಗಳು ಆರಂಭ

    ಕೃಷಿ ವಿಶ್ವವಿದ್ಯಾಲಯದಿಂದ 2006ರಲ್ಲಿ ಉತ್ಪನ್ನಗಳ ತಯಾರಿಕೆ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ತಬೇತಿ ಆರಂಭಿಸಲಾಗಿದ್ದು, ಈ ತರಬೇತಿ ಕೇಂದ್ರ ಹೊಸ ರೂಪ ಪಡೆದಿದೆ. ಅಂದಿನಿಂದ ವಾರ್ಷಿಕ 1,200 ರಿಂದ 1,500 ಜನ ಬೇಕರಿ ಮತ್ತು ಮೌಲ್ಯವರ್ಧನೆ ತರಬೇತಿ ಪಡೆದುಕೊಂಡಿದ್ದಾರೆ. ಅವರಲ್ಲಿ ಈವರೆಗೆ 10 ಸಾವಿರಕ್ಕೂ ಅಧಿಕ ಜನ ಸ್ವಂತ ಉದ್ಯಮ ಆರಂಭಿಸಿ ಮಾಸಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಾ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ. ಇದರಲ್ಲಿ ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳ ಜನರು ಹಾಗೂ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಬಿಹಾರ ಸೇರಿ ವಿವಿಧ ರಾಜ್ಯಗಳಿಂದ ಅಭ್ಯರ್ಥಿಗಳು ವಿಶ್ವವಿದ್ಯಾಲಯ ಜಾಲತಾಣದ ಮೂಲಕ ಸಂಪರ್ಕ ಸಾಧಿಸಿ, ತರಬೇತಿ ಪಡೆದು ಉದ್ಯಮ ಆರಂಭಿಸಿದ್ದಾರೆ. ಯಾವುದೇ ಚಿಕ್ಕ ಉದ್ಯಮದಲ್ಲಿ ಕಾರ್ವಿುಕರ ಮೇಲೆ ಅವಲಂಬನೆ ಆಗದೇ ಸ್ವತಃ ಉತ್ಪನ್ನಗಳನ್ನು ತಯಾರಿಸುವುರಿಂದ ಲಾಭದ ಪ್ರಮಾಣವೂ ಹೆಚ್ಚಾಗಿರುತ್ತದೆ ಎಂದು ತರಬೇತಿ ಕೇಂದ್ರದ ಸಹ ಪ್ರಾಧ್ಯಾಪಕಿ ಮಮತಾ ಮಾಹಿತಿ ನೀಡುತ್ತಾರೆ.

    ಅತ್ಯಂತ ಕಡಿಮೆ ದರದಲ್ಲಿ ತರಬೇತಿ

    ದೇಶದಲ್ಲಿ ಬೇಕರಿ ಉದ್ಯಮ ತರಬೇತಿ ಎಂದಾಕ್ಷಣ 3 ತಿಂಗಳ ಕೋರ್ಸ್​ಗೆ ಕನಿಷ್ಠ 40 ಸಾವಿರ ರೂ.ನಿಂದ 1 ಲಕ್ಷ ರೂ. ಶುಲ್ಕ ಪಾವತಿಸಿಕೊಳ್ಳಲಾಗುತ್ತದೆ. ಆದರೆ, ಕೃಷಿ ವಿಶ್ವವಿದ್ಯಾಲಯದಿಂದ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿಯ ಅತ್ಯಂತ ದೀರ್ಘಾವಧಿ ಕೋರ್ಸ್​ಗೆ (14 ವಾರ) ಕೇವಲ 7,500 ರೂ. ಶುಲ್ಕ ಪಡೆಯುತ್ತದೆ. ಈ ತರಬೇತಿ ಪಡೆದವರಿಗೆ ವಾಣಿಜ್ಯ ಉತ್ಪಾದನೆಗಾಗಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ. ಇನ್ನು ಗೃಹಬಳಕೆ ಮತ್ತು ಸಣ್ಣ ಪ್ರಮಾಣದ ಉದ್ಯಮ ನಡೆಸಲು ಅನುಕೂಲ ಆಗುವಂತೆ ನೀಡಲಾಗುವ 4 ವಾರಗಳ ತರಬೇತಿಗೆ 2,000 ರೂ. ಶುಲ್ಕ ಪಡೆಯಲಾಗುತ್ತದೆ. ಇದಕ್ಕೂ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಉಳಿದಂತೆ 5 ದಿನ-750 ರೂ., 3 ದಿನ- 400 ರೂ. ಹಾಗೂ 2 ದಿನ-300 ರೂ. ಶುಲ್ಕ ಪಾವತಿಸಿಕೊಂಡು, ಕೇಕ್​ಗಳು, ಹಾಲು-ಮೊಟ್ಟೆ ಉತ್ಪನ್ನಗಳು, ಮೌಲ್ಯವರ್ಧಿತ ರಾಗಿ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನ, ಹಣ್ಣು- ತರಕಾರಿಗಳ ಸಂಸ್ಕರಣೆ, ಆಹಾರ ಪೋಷಣೆ, ನೆಲ್ಲಿಕಾಯಿ ಮೌಲ್ಯವರ್ಧನೆ, ಚಾಟ್ಸ್ ತಯಾರಿಕೆ, ಡಬ್ಬಿ ತಿನಿಸುಗಳ ತಯಾರಿಕೆ, ಜ್ಯೂಸ್ ಮಾಡುವುದು, ಬೆಂಕಿರಹಿತ ತಿನಿಸುಗಳನ್ನು ತಯಾರಿಸಲು ತರಬೇತಿ ನಿಡಲಾಗುತ್ತದೆ.

    ಹೆಚ್ಚಿನ ಮಾಹಿತಿಗೆ: ಬೇಕರಿ ಮತ್ತು ಮೌಲ್ಯವರ್ಧನೆ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ, ಬೆಂಗಳೂರು- 560024 ಇಲ್ಲಿ ನೇರವಾಗಿ ಭೇಟಿ ನೀಡಬಹುದು. ದೂ.080-23513370 ಕರೆ ಮಾಡಬಹುದು. ಅಥವಾ http://www.bakerytrainingunituasb.com/ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

    ‘ಕೆಜಿಎಫ್’​, ‘ಕಾಂತಾರ’ದಂತೆ ‘ವಿಜಯಾನಂದ’ ಕೂಡ ಪ್ಯಾನ್​ ಇಂಡಿಯಾ ಸದ್ದು ಮಾಡಲಿ: ಹರ್ಷಿಕಾ ಪೂಣಚ್ಚ

    ‘ಗಂಧದಗುಡಿ’ಯಿಂದ ಸಿಹಿಸುದ್ದಿ: ಪುನೀತ್ ಮಹತ್ವಾಕಾಂಕ್ಷೆಯ ಸಿನಿಮಾ ಟಿಕೆಟ್​ ದರದಲ್ಲಿ ಭಾರಿ ಇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts