Pahalgam Terrorists Attack : ಏಪ್ರಿಲ್ 22 ರಂದು 28 ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. 2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ. ಆಗ ಸೈನಿಕರನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಇಂದು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆ ಸುರಿಸಿದ್ದಾರೆ.
ಇಬ್ಬರು ಸ್ಥಳೀಯರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಉತ್ತರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ರಾಜ್ಯಗಳ ಮತ್ತು ನೇಪಾಳ, ಯುಎಇಯ ತಲಾ ಒಬ್ಬರಂತೆ 26 ಪ್ರವಾಸಿಗರನ್ನು ಭಯೋತ್ಪಾದಕರು ಹೆಸರು ಮತ್ತು ಧರ್ಮವನ್ನು ಕೇಳಿ ಕೊಂದು ಹಾಕಿದ್ದಾರೆ. ಮೃತಪಟ್ಟವರೆಲ್ಲರೂ ಅಮಾಯಕರು ಹಾಗೂ ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕತೆ ಹೇಳುತ್ತದೆ. ಅದರಲ್ಲಿ ಸೈಯದ್ ಆದಿಲ್ ಹುಸೇನ್ ಷಾ ಕತೆಯೂ ಒಂದು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ದಾಳಿಕೋರರಿಂದ ಬಂದೂಕನ್ನು ಕಸಿದುಕೊಂಡು ಪ್ರತಿದಾಳಿ ನಡೆಸಲು ಯತ್ನಿಸಿ, ಗುಂಡೇಟಿಗೆ ಪ್ರಾಣ ಬಿಟ್ಟ ಯುವ ಕುದುರೆ ಸವಾರನೇ ಸೈಯದ್ ಆದಿಲ್ ಹುಸೇನ್ ಷಾ. ಭಯೋತ್ಪಾದಕರು ದಾಳಿ ಮಾಡಲು ಬಂದಾಗ ತನ್ನನ್ನು ತಾನು ಧೈರ್ಯದಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಆತನಿಗೂ ಗುಂಡು ಹಾರಿಸಲಾಯಿತು. ಪಹಲ್ಗಾಮ್‌ನ ಕಾರು ಪಾರ್ಕಿಂಗ್ ಸ್ಥಳದಿಂದ ಕಾಲ್ನಡಿಗೆಯಲ್ಲಿ ಮಾತ್ರ ತಲುಪಬಹುದಾದ ಬೈಸರನ್ ಹುಲ್ಲುಗಾವಲಿಗೆ ಪ್ರವಾಸಿಗರನ್ನು ತನ್ನ ಕುದುರೆಯ ಮೇಲೆ ಕರೆದೊಯ್ಯುವ ಕೆಲಸವನ್ನು ಸೈಯದ್ ಆದಿಲ್ ಹುಸೇನ್ ಮಾಡುತ್ತಿದ್ದರು.
ಭಯೋತ್ಪಾದಕರಲ್ಲಿ ಒಬ್ಬನ ಜೊತೆ ಹೋರಾಡುತ್ತಿದ್ದಾಗ ಆದಿಲ್ ಮೇಲೆ ಗುಂಡು ಹಾರಿಸಲಾಯಿತು. ಉಗ್ರರು ಅನಿರೀಕ್ಷಿತವಾಗಿ ಆತನ ಮೇಲೂ ದಾಳಿ ಮಾಡಿದರು. ಆದಿಲ್ ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದ. ಪತ್ನಿ, ಮಕ್ಕಳು ಮತ್ತು ಪಾಲಕರಿಗೆ ಆತನೇ ಆಧಾರವಾಗಿದ್ದ.
ಆದಿಲ್ ಅವರ ತಂದೆ ಸೈಯದ್ ಹೈದರ್ ಮಾತನಾಡಿ, ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಮಗ ಕೆಲಸಕ್ಕಾಗಿ ಪಹಲ್ಗಾಮ್‌ಗೆ ಹೋಗಿದ್ದ. ದಾಳಿಯ ಬಗ್ಗೆ ನಮಗೆ ತಿಳಿದಾಗ, ನಾವು ಆತನಿಗೆ ಕರೆ ಮಾಡಿದೆವು. ಆದರೆ, ಫೋನ್ ಸ್ವಿಚ್ ಆಫ್ ಆಗಿತ್ತು. ಸಂಜೆ 4.40 ರ ಹೊತ್ತಿಗೆ ಫೋನ್ ಸ್ವಿಚ್ ಆನ್ ಆಗಿತ್ತು ಆದರೆ, ಯಾರೂ ಅದನ್ನು ಎತ್ತಲಿಲ್ಲ. ನಾವು ಪೊಲೀಸ್ ಠಾಣೆಯನ್ನು ತಲುಪಿದಾಗ ಮಾತ್ರ ನಮ್ಮ ಮಗ ದಾಳಿಯಲ್ಲಿ ಗಾಯಗೊಂಡಿದ್ದಾನೆಂದು ನಮಗೆ ತಿಳಿಯಿತು ಎಂದು ಹೇಳಿದರು.
ಏಪ್ರಿಲ್ 22ರ ಮಂಗಳವಾರದಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಒಬ್ಬರು ಸೇರಿದಂತೆ ಒಟ್ಟು 26 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)