ಕೋಲ್ಕತ್ತ: ಶಾಲಾ- ಕಾಲೇಜುಗಳು ಶುರುವಾಗಿಲ್ಲ. ಆದರೆ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕಾದ ಅನಿವಾರ್ಯತೆಯಿಂದಾಗಿ ಆನ್ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಈ ತರಗತಿಯೇ ವಿದ್ಯಾರ್ಥಿಗಳಿಗೆ ದುಸ್ವಪ್ನವಾಗಿ ಪರಿಣಮಿಸಿದೆ.
ಕೋಲ್ಕತ್ತದ ಶಾಲೆಯೊಂದರ ಆರನೇ ತರಗತಿ ಮಕ್ಕಳು ಮಂಗಳವಾರ ಆನ್ಲೈನ್ ತರಗತಿಗೆಂದು ಸಜ್ಜಾಗಿದ್ದರು. ಆದರೆ ಅತ್ತ ಕಡೆಯಿಮದ ಪಾಠ ಶುರುವಾಗುವ ಬದಲು, ಚಿತ್ರ-ವಿಚಿತ್ರ ಶಬ್ಧಗಳು ಕೇಳಿ ಬಂದಿವೆ. ಇದರಿಂದ ಮಕ್ಕಳಿಗೆ ಭೀತಿಯಾದರೂ ಸರಿಯಾಗಬಹುದು ಎಂದು ಕಾದಿದ್ದಾರೆ.
ಶಿಕ್ಷಕರ ಬದಲು ಇನ್ಯಾರೋ ಅವರ ಆನ್ಲೈನ್ ತರಗತಿಯನ್ನು ಅಕ್ರಮಿಸಿದ್ದರು. ಅಂದರೆ ಆನ್ಲೈನ್ ತರಗತಿಯನ್ನು ಹ್ಯಾಕ್ ಮಾಡಲಾಗಿತ್ತು. ಪಾಠವನ್ನು ಕೇಳಬೇಕೆಂದು ಕೂತಿದ್ದ ವಿದ್ಯಾರ್ಥಿನಿಯರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ. ಜೀವ ಬೆದರಿಕೆಯನ್ನು ಒಡ್ಡಿದ್ದಾರೆ.
ಇದಾಗುತ್ತಿದ್ದಂತೆ ಮಕ್ಕಳು ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಹ್ಯಾಕರ್ಗಳೊಂದಿಗೆ ಪಾಲಕರು ಮಾತನಾಡಲು ಶುರು ಮಾಡುತ್ತಿದ್ದಂತೆ ಸಂಪರ್ಕ ಕಡಿತಗೊಂಡಿದೆ.
ಇದಾದ ಬಳಿಕ ಹ್ಯಾಕರ್ಗಳು ಚಾಟ್ ಬಾಕ್ಸ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ್ದಾರೆ. ಕೂಡಲೇ ತರಗತಿಯನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು.
ತನಿಖೆ ಕಂಡುಬಂದ ಅಂಶವೆಂದರೆ ವಿದ್ಯಾರ್ಥಿಯೊಬ್ಬನ ಹೆಸರಿನಲ್ಲಿ ಎರಡು ಲಾಗಿನ್ಗಳು ಸೃಷ್ಟಿಯಾಗಿವೆ. ಜತೆಗೆ, ತತರಗತಿಯ ಪಾಸ್ವರ್ಡ್ ಯಾರಿಗೆಲ್ಲ ಶೇರ್ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲಾಗುತ್ತಿದೆ. ಈ ಘಟನೆಯಿಂದ ಆನ್ಲೈನ್ ತರಗತಿಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ಪ್ರಶ್ನೆಗಳೆದ್ದಿವೆ.