ನವದೆಹಲಿ: ಪಬ್ಜಿ ಪ್ರಿಯಕರನನ್ನು ಮದುವೆಯಾಗಲು ಭಾರತಕ್ಕೆ ಅನಧಿಕೃತವಾಗಿ ಪ್ರವೇಶ ಮಾಡಿರುವ ಸೀಮಾ ಹೈದರ್ಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಟ್ಟಿರುವ ಆರೋಪದ ಮೇಲೆ ನೋಯ್ಡಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪುಷ್ಪೇಂದ್ರ ಮತ್ತು ಪವನ್ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಉತ್ತರ ಪ್ರದೇಶದ ಬುಲಂದ್ಶಹರ್ ಮೂಲದವರು. ಬಂಧನದ ವೇಳೆ 15 ನಕಲಿ ಆಧಾರ್ ಕಾರ್ಡ್ಸ್ ಸಹ ವಶಕ್ಕೆ ಪಡೆಯಲಾಗಿದೆ. ಕಳೆದ ಮೂರು ದಿನಗಳಿಂದ ಇಬ್ಬರನ್ನು ನಿರಂತರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಅವರು ದೊಡ್ಡ ಮಟ್ಟದ ನಕಲಿ ದಾಖಲಾತಿ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಪುಷ್ಟೇಂದ್ರ ಮತ್ತು ಪವನ್, ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಅಹಮದಗಢದಲ್ಲಿ ಜನಾ ಸೇವಾ ಕೇಂದ್ರ ನಡೆಸುತ್ತಿದ್ದರು. ಕಾನೂನುಬಾಹಿರ ಚಟುವಟಿಕೆಗಳನ್ನೇ ಮುಖ್ಯವಾಗಿಸಿಕೊಂಡು ದಂಧೆಯಲ್ಲಿ ತೊಡಗಿದ್ದರು. ಇದನ್ನು ಅರಿತ ಸಚಿನ್ ಮೀನಾ ಮತ್ತು ಸೀಮಾ ಹೈದರ್ ತಮ್ಮ ಮದುವೆಗೆ ಬೇಕಾದ ಅಗತ್ಯ ದಾಖಲೆಗಳನ್ನು ಪಡೆಯಲು ಇಬ್ಬರ ನೆರವು ಕೋರಿದರು. ಪೊಲೀಸರ ತನಿಖೆಯ ಸಮಯದಲ್ಲಿ, ಆರೋಪಿಗಳಿಬ್ಬರು ನಕಲಿ ಆಧಾರ್ ಕಾರ್ಡ್‌ಗಳನ್ನು ರಚಿಸುತ್ತಿದ್ದರು ಎನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ. ಅಲ್ಲದೆ, ಇದಕ್ಕೆ ಬಳಸುತ್ತಿದ್ದ ಸಾಧನವನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
30 ವರ್ಷದ ಸೀಮಾ ಮತ್ತು 22 ವರ್ಷದ ಸಚಿನ್ ಮೀನಾ 2019ರಲ್ಲಿ ಕರೊನಾ ಸಂದರ್ಭದಲ್ಲಿ ಆನ್ಲೈನ್ ಗೇಮ್ ಪಬ್ಜಿ ಮುಖಾಂತರ ಪರಿಚಯವಾಗಿದ್ದಾಗಿ ಮತ್ತು ಈ ವರ್ಷದಲ್ಲಿ ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಸೀಮಾಳನ್ನು ಮತ್ತು ಆಕೆಗೆ ಆಶ್ರಯ ಕೊಟ್ಟ ಆರೋಪದ ಮೇಲೆ ಸಚಿನ್ ಮತ್ತು ಆತನ ತಂದೆಯನ್ನು ಜುಲೈ 4ರಂದು ಬಂಧಿಸಲಾಗಿತ್ತು. ಮೂವರಿಗೂ ಜಾಮೀನು ದೊರೆತ ಹಿನ್ನೆಲೆ ಜುಲೈ 7ರಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಪಾಕಿಸ್ತಾನಕ್ಕೆ ಮರಳಲು ಸೀಮಾ ಹಿಂದೇಟು ಹಾಕುತ್ತಿದ್ದಾರೆ. ಸಚಿನ್ ಜತೆಯೇ ಮುಂದಿನ ಜೀವನ ಕಳೆಯುವುದಾಗಿ ಹೇಳುತ್ತಿದ್ದಾಳೆ. ಆದರೆ, ಇದಕ್ಕೆ ಕೆಲವು ಹಿಂದು ಸಂಘಟನೆಗಳು ವಿರುದ್ಧವಾಗಿವೆ. ಆಕೆ ಪಾಕ್ನ ಏಜೆಂಟ್ ಎಂದು ಆರೋಪಿಸಿದ್ದಾರೆ. ಆಕೆ ಇಲ್ಲಿಯೇ ಇದ್ದರೆ ದೇಶದ ರಕ್ಷಣೆಗೆ ಅಪಾಯವಿದೆ. ಕೂಡಲೇ ಆಕೆಯನ್ನು ಪಾಕ್ಗೆ ಕಳುಹಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಅತ್ತ ಪಾಕ್ನಲ್ಲೂ ಸೀಮಾ ವಾಪಸಾತಿಗೆ ಆಗ್ರಹಗಳು ಕೇಳಿಬರುತ್ತಿವೆ. ಒಂದು ವೇಳೆ ಬರದಿದ್ದರೆ ಭಾರತದಲ್ಲಿ ದಾಳಿಗಳು ನಡೆಯಲಿವೆ ಎಂಬ ಬೆದರಿಕೆ ಸಹ ಹಾಕುತ್ತಿದ್ದಾರೆ.
ಇಷ್ಟೆಲ್ಲ ಬೆಳವಣಿಗೆ ನಡುವೆ ಸೀಮಾ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)