

ತುಮಕೂರು: ಮತ್ತೊಮ್ಮೆ ಬಡ ವ್ಯಕ್ತಿಗೆ ಉಚಿತವಾಗಿ ಆಪರೇಷನ್ ಮಾಡುವ ಮೂಲಕ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರು ಜನರ ಮನ ಗೆದ್ದಿದ್ದಾರೆ.
ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ ಎಂಬವರು ಹಲವು ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದರು. ಹೀಗಾಗಿ ತಮ್ಮ ಕ್ಷೇತ್ರದ ಶಾಸಕರಾಗಿರುವ ರಂಗನಾಥ್ ಅವರ ಬಳಿ ಹಣ ಸಹಾಯ ಕೋರಿದ್ದರು.
ಸ್ವತಃ ವೈದ್ಯರಾಗಿರುವ ಡಾ. ರಂಗನಾಥ್, ಬಡ ವ್ಯಕ್ತಿಯ ಮನವಿಗೆ ತಕ್ಷಣವೇ ಸ್ಪಂದಿಸಿದರು. ತಾವೇ ಖುದ್ದಾಗಿ ಆಪರೇಷನ್ ಮಾಡಲು ಮುಂದಾದರು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಶಿವನಂಜಯ್ಯ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.
ಈ ಹಿಂದೆ ರಂಗನಾಥ್ ಅವರು ಬಡ ಮಹಿಳೆಯೊಬ್ಬಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮನೆ ಮಾತಾಗಿದ್ದರು. (ದಿಗ್ವಿಜಯ ನ್ಯೂಸ್)