More

    ಅವಿಶ್ವಾಸ ನೋಟಿಸ್ ಸ್ವೀಕಾರ; ಸದನ ಮುಂದುವರಿಕೆ

    ನವದೆಹಲಿ: ಮಣಿಪುರದ ಹಿಂಸಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಲ್ಲಿಸಿದ ಅವಿಶ್ವಾಸ ಗೊತ್ತುವಳಿ ನೋಟಿಸ್ ಅನ್ನು ಸ್ಪೀಕರ್ ಓಂ ಬಿರ್ಲಾ ಸ್ವೀಕರಿಸಿದ್ದು, ಎಲ್ಲ ಪಕ್ಷಗಳ ಜತೆ ಸಮಾಲೋಚನೆ ನಡೆಸಿ ಮಂಡನೆಗೆ ದಿನಾಂಕ ಮತ್ತು ಸಮಯ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಮಧ್ಯೆ, ಸಂಸತ್​ನ ಉಭಯ ಸದನಗಳಲ್ಲಿ ಬುಧವಾರ ಕೂಡ ಮಣಿಪುರ ಹಿಂಸಾಚಾರ ಕುರಿತ ಗದ್ದಲ ಮುಂದುವರಿಯಿತು.

    ಅವಿಶ್ವಾಸ ಗೊತ್ತುವಳಿ ನೋಟಿಸ್​ಗೆ ಅಗತ್ಯವಾದ 50 ಸಂಸದರ ಬೆಂಬಲವನ್ನು ಕಾಂಗ್ರೆಸ್ ಮಾತ್ರವಲ್ಲದೆ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದಲ್ಲಿ ಗುರುತಿಸಿಕೊಂಡವರಿಂದಲೂ ಪಡೆಯಲಾಗಿದ್ದು. ಇದನ್ನು ಕಾಂಗ್ರೆಸ್​ನ ಗೌರವ್ ಗೊಗೊಯಿ ಸ್ಪೀಕರ್​ಗೆ ಸಲ್ಲಿಸಿದರು. ಕಾಂಗ್ರೆಸ್​ನ ಸೋನಿಯಾ ಗಾಂಧಿ, ನ್ಯಾಷನಲ್ ಕಾಂಗ್ರೆಸ್​ನ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಟಿ.ಆರ್.ಬಾಲು, ಎನ್​ಸಿಪಿ (ಶರದ್ ಬಣ) ಸುಪ್ರಿಯಾ ಸುಳೆ ಮತ್ತಿತರರು ಅವಿಶ್ವಾಸ ಗೊತ್ತುವಳಿ ನೋಟಿಸ್​ಗೆ ಸಹಿ ಮಾಡಿದ್ದಾರೆ.

    ಕಾಂಗ್ರೆಸ್ ಅಲ್ಲದೆ ಬಿಆರ್​ಎಸ್ ಪಕ್ಷದಿಂದಲೂ ಅವಿಶ್ವಾಸ ಗೊತ್ತುವಳಿಯ ಇನ್ನೊಂದು ನೋಟಿಸ್ ಸಲ್ಲಿಕೆಯಾಗಿದೆ. ಆದರೆ, ಈ ನೋಟಿಸ್​ಗೆ ಕನಿಷ್ಠ ಅಗತ್ಯವಾದ 50 ಸಂಸದರ ಬೆಂಬಲ ಇಲ್ಲ.

    ಲೋಕಸಭೆಯಲ್ಲಿ ಎನ್​ಡಿಎ 331 ಸದಸ್ಯರ ಬೆಂಬಲವನ್ನು ಹೊಂದಿದ್ದು, ‘ಇಂಡಿಯಾ’ಗೆ 144 ಸದಸ್ಯರ ಬಲ ಇದೆ. ಎನ್​ಡಿಎ ಮತ್ತು ’ಇಂಡಿಯಾ’ಯೇತರವಾದ ಬಿಆರ್​ಎಸ್, ವೈಎಸ್​ಆರ್​ಸಿಪಿ, ಬಿಜೆಡಿ ಸೇರಿ 70 ಸದಸ್ಯರು ಇದ್ದಾರೆ. ಆದರೆ, ಮಣಿಪುರದ ವಿಷಯದಲ್ಲಿ ಎನ್​ಡಿಎನಲ್ಲಿ ಗುರುತಿಸಿಕೊಂಡಿರುವ ಹಲವು ಅಂಗ ಪಕ್ಷಗಳು ಕೂಡ ಚರ್ಚೆಗೆ ಒತ್ತಾಯಿಸುತ್ತಿರುವ ಕಾರಣ ಈ ಅವಿಶ್ವಾಸ ಗೊತ್ತುವಳಿಗೆ ಜಯಸಿಗಲಿದೆ ಎಂಬ ವಿಶ್ವಾಸವನ್ನು ’ಇಂಡಿಯಾ’ ಹೊಂದಿದೆ. ಜೊತೆಗೆ ಈ ಅವಿಶ್ವಾಸ ಗೊತ್ತುವಳಿಯ ಮೂಲಕವಾದರೂ ಪ್ರಧಾನಿ ನರೇಂದ್ರ ಮೋದಿ ಮಣಿಪುರದ ವಿಷಯದಲ್ಲಿ ಸದನದಲ್ಲಿ ಹೇಳಿಕೆ ನೀಡುವಂತೆ ಮಾಡಬೇಕು ಎಂಬುದು ‘ಇಂಡಿಯಾ’ದ ಪ್ರಮುಖ ಉದ್ದೇಶ ಎನ್ನಲಾಗಿದೆ.

    ಅವಿಶ್ವಾಸ ನೋಟಿಸ್ ಸ್ವೀಕಾರ; ಸದನ ಮುಂದುವರಿಕೆ

    ಮುಂಗಾರು ಅಧಿವೇಶನ ಆರಂಭವಾದ ಜುಲೈ 20ರಿಂದ ಮಣಿಪುರದ ವಿಷಯ ಕಗ್ಗಂಟಾಗಿದ್ದು, ಪ್ರತಿಸಾರಿ ಸದನ ಸಮಾವೇಶ ಆದಾಗಲೂ ಪ್ರತಿಪಕ್ಷಗಳು ಪ್ರತಿಭಟನೆಗಳಿಯುತ್ತಿರುವ ಕಾರಣ ಕಲಾಪ ಭಂಗವಾಗುತ್ತಿದೆ. ಈ ವಿಷಯವಾಗಿ ಚರ್ಚೆ ನಡೆಸಲು ಸಿದ್ಧವೆಂದು ಸರ್ಕಾರ ಹೇಳಿದ್ದರೂ, ಚರ್ಚೆಯ ಕಡೆಯಲ್ಲಿ ಮತದಾನಕ್ಕೆ ಅವಕಾಶ ಇರುವ ನಿಯಮ 267ರ ಅಡಿಯಲ್ಲಿ ಚರ್ಚೆಗೆ ಒಪು್ಪತ್ತಿಲ್ಲ. ಆದರೆ, ಪ್ರತಿಪಕ್ಷಗಳು ಈ ನಿಯಮದಡಿಯಲೇ ಚರ್ಚೆ ನಡೆಸಬೇಕು ಮತ್ತು ಪ್ರಧಾನಿ ಮೋದಿಯೇ ಸದನದಲ್ಲಿ ಹೇಳಿಕೆ ನೀಡಬೇಕು ಎಂದು ಬಿಗಿ ಪಟ್ಟು ಹಿಡಿದಿವೆ.

    ಮೋದಿ ಹಿಂದಿನ ಹೇಳಿಕೆ ವೈರಲ್

    ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿಗೆ ನೋಟಿಸ್ ನೀಡಿದ ಬೆನ್ನಿಗೆ ಪ್ರಧಾನಿ ಮೋದಿ 2019ರ ಫೆ. 7ರಂದು ಬಜೆಟ್ ಅಧಿವೇಶನದ ವೇಳೆ ಇಂಥದ್ದೇ ಅವಿಶ್ವಾಸ ಗೊತ್ತುವಳಿ ನೋಟಿಸ್ ಕುರಿತು ನೀಡಿದ್ದ ಹೇಳಿಕೆಯೊಂದು ವೈರಲ್ ಆಗಿದೆ. ‘2023ರಲ್ಲಿ ಮತ್ತೊಂದು ಅವಿಶ್ವಾಸ ಗೊತ್ತುವಳಿ ಸಿದ್ಧ ಮಾಡಿಕೊಳ್ಳಿ. ಅದರಲ್ಲಿ ನಿಮಗೆ (ಪ್ರತಿಪಕ್ಷಗಳು) ಯಶಸ್ಸು ಸಿಗಲೆಂದು ಹಾರೈಸುವೆ. ಕೇವಲ ಇಬ್ಬರು ಸಂಸದರಿಂದ ಇಲ್ಲಿಗೆ (ಲೋಕಸಭೆಗೆ) ಪ್ರವೇಶ ಪಡೆದ ನಾವು. ಇಂದು ಸ್ಪಷ್ಟ ಬಹುಮತದಿಂದ ಅಧಿಕಾರದಲ್ಲಿ ಇದ್ದೇವೆ. ಆದರೆ, ಅಹಂಕಾರ ವರ್ತನೆ ತೋರುತ್ತಿರುವ ನೀವು (ಕಾಂಗ್ರೆಸ್) 400ರಿಂದ 40 ಸ್ಥಾನಕ್ಕೆ ಇಳಿದಿದ್ದೀರಿ. ಈಗ ನೀವು ಎಲ್ಲಿದ್ದೀರಿ ಎಂಬುದನ್ನು ನೋಡಿಕೊಳ್ಳಿ’ ಎಂದು ಮೋದಿ ಹೇಳಿದ್ದರು. ಈ ವಿಡಿಯೋವನ್ನು ‘ಪಿಎಂ ಮೋದಿ ಪ್ರಿಡಿಕ್ಷನ್’ ಶೀರ್ಷಿಕೆಯಲ್ಲಿ ಬಿಜೆಪಿ ವೈರಲ್ ಮಾಡಿದೆ.

    ಈ ಹಿಂದೆ ಯಾವಾಗ?

    2018ರಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಮಂಡಿಸಿದ್ದ ಮತ್ತು ವಿರೋಧ ಪಕ್ಷಗಳು ಬೆಂಬಲಿಸಿದ್ದ ಅವಿಶ್ವಾಸ ಗೊತ್ತುವಳಿಗೆ 199 ಮತಗಳ ಅಂತರದಲ್ಲಿ ಸೋಲುಂಟಾಗಿತ್ತು. ಇದಕ್ಕೂ ಹಿಂದೆ ಮೊರಾರ್ಜಿ ದೇಸಾಯಿ, ಚೌಧರಿ ಚರಣ್​ಸಿಂಗ್, ವಿ.ಪಿ.ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರಗಳು ಅವಿಶ್ವಾಸ ಗೊತ್ತುವಳಿಯಿಂದ ಅಧಿಕಾರ ಕಳೆದುಕೊಂಡಿದ್ದವು.

    ಆತ್ಮಗೌರವಕ್ಕೆ ಸವಾಲು

    ಇದು ನನ್ನ ಹಕ್ಕುಚ್ಯುತಿ ಮತ್ತು ಪ್ರತಿಪಕ್ಷದ ನಾಯಕನಿಗೆ ಮಾಡಿದ ಅವಮಾನ. ಇದು ನನ್ನ ಆತ್ಮಗೌರವಕ್ಕೆ ಎಸೆದ ಸವಾಲು. ಈ ಸದನ ಸರ್ಕಾರದ ಸೂಚನೆಯಂತೆ ನಡೆಯುವುದಾದರೆ, ಇದು ಪ್ರಜಾತಂತ್ರ ವ್ಯವಸ್ಥೆ ಎನಿಸಿಕೊಳ್ಳುವುದಿಲ್ಲ ಎಂದು ಮಂಗಳವಾರ ಕಲಾಪದ ವೇಳೆ ಮೈಕ್ ಆಫ್ ಆದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಭಾಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಖರ್ಗೆ ಅವರ ಮೈಕ್ ಆಫ್ ಮಾಡಲಾಗಿರಲಿಲ್ಲ. ಇಂಥದಕ್ಕೆ ಈ ಸದನದಲ್ಲಿ ಅವಕಾಶವೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

    ಜೂಟ್ ಬೋಲೆ…

    ಆಮ್ ಆದ್ಮಿ ಪಕ್ಷದ (ಆಪ್) ಸಂಸದ ರಾಘವ್ ಛಡ್ಡಾ ಮಂಗಳವಾರ ಸಂಸತ್ ಭವನದಿಂದ ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೊರ ಬರುತ್ತಿರುವಾಗ ಅವರ ತಲೆಗೆ ಕಾಗೆ ಕುಕ್ಕಿತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಜೂಟ್ ಬೋಲೆ ಕೌವಾ ಕಾಟೆ’ (ಸುಳ್ಳು ಹೇಳುವರಿಗೆ ಕಾಗೆ ಕುಕ್ಕುತ್ತದೆ) ಎಂದು ಛಡ್ಡಾ ಅವರ ಕಾಲೆಳೆದಿದೆ. ಇಷ್ಟು ದಿವಸ ಅವರ ಸುಳ್ಳುಗಳನ್ನು ನಾವು ಕೇಳುತ್ತಿದ್ದವು. ಈಗ ಕಾಗೆ ಅವರನ್ನು ಕುಕ್ಕಿ ಅವರ ಮಾತು ಸುಳ್ಳ ಎಂಬುದನ್ನು ಸಾರಿ ಹೇಳಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಇದನ್ನು ನಾಲ್ಕು ಸಾವಿರ ಮಂದಿ ಲೈಕ್ ಮಾಡಿದ್ದಾರೆ. 1.400 ಬಾರಿ ಇದು ರಿಟ್ವೀಟ್ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts