ನ್ಯೂಸ್

ಈ 3 ಮಿಸ್ಟೇಕ್ ಮಾಡಿದ್ರೆ ಕೂದಲು ಉದುರಿ ಹೋಗುತ್ತೆ ಎಚ್ಚರ! ನೀತಾ ಅಂಬಾನಿ ಹೇರ್​​ಸ್ಟೈಲಿಸ್ಟ್​ ಕೊಟ್ಟ ಸಲಹೆ ಇದು

ನವದೆಹಲಿ: ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ರಿಲಯನ್ಸ್ ಸಂಸ್ಥೆಯ​ ಮುಖ್ಯಸ್ಥ ಮುಕೇಶ್ ಅಂಬಾನಿ (Mukhesh Ambani) ಪತ್ನಿ ನೀತಾ ಅಂಬಾನಿ (Nita Ambani) ಅವರ ವಯಸ್ಸು 60. ಆದ್ರೆ, ಅವರ ಸೌಂದರ್ಯ ಇಂದಿನ ಯುವತಿಯರನ್ನೇ ನಾಚಿಸುವಂತಿದೆ. ದಿನೇ ದಿನೇ ತಮ್ಮ ವರ್ಚಸನ್ನು ಹೆಚ್ಚಿಸಿಕೊಳ್ಳುತ್ತಿರುವ ನೀತಾ, ಇತ್ತೀಚೆಗಷ್ಟೇ ಮಗ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್​​ ಮದುವೆ ಸಮಾರಂಭದಲ್ಲಿ ಅದ್ಧೂರಿಯಾಗಿ ಕಂಗೊಳಿಸಿದರು. ನೀತಾ ಅಂಬಾನಿ ಅವರ ಉಡುಗೆ-ತೊಡುಗೆ, ಚಿನ್ನಾಭರಣಗಳನ್ನು ಸೂಕ್ಷ್ಮವಾಗಿ ಗಮನಿಸುವ ಅನೇಕರು, ಅವರ ಹೇರ್​ಸ್ಟೈಲ್​ಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಕೇಶರಾಶಿಯ ಅಂದ ಹೆಚ್ಚಲು ಹೇರ್ ​ಸ್ಟೈಲಿಸ್ಟ್ (Hairstylist)​ ಕೂಡ ಮುಖ್ಯ ಕಾರಣ ಎಂದೇ ಹೇಳಬಹುದು.

ನೀತಾ ಅಂಬಾನಿ ಹೇರ್​ಸ್ಟೈಲ್​ಗೆ ಫಿದಾ ಆಗುವ ಅದೆಷ್ಟೋ ಸಂಖ್ಯೆಯ ಮಹಿಳೆಯರು, ಅವರು ಮಾಡಿಕೊಳ್ಳುವ ಹೊಸ ಶೈಲಿಗಳನ್ನು ಜಾಲತಾಣಗಳಲ್ಲಿ ಅನುಸರಿಸುತ್ತಿರುತ್ತಾರೆ. ಸಾರ್ವಜನಿಕ ಕಾರ್ಯಕ್ರಮಗಳು, ದೊಡ್ಡ ವ್ಯಕ್ತಿಗಳು ಸೇರುವ ಸಮಾರಂಭಗಳಲ್ಲಿ ಅದ್ಧೂರಿ ಉಡುಗೆಯಲ್ಲಿ, ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುವ ನೀತಾ ಅಂಬಾನಿ ಅವರ ಕೂದಲಿಗೆ ಹೊಸ ಟಚ್​ ಕೊಡುವುದು ಹೇರ್​ಸ್ಟೈಲಿಸ್ಟ್​ ಅಮಿತ್​ ಥಾಕೂರ್​. ನೀತಾ ಅವರಿಗೆ ಖುದ್ದಾಗಿ ಕೇಶವಿನ್ಯಾಸ ಮಾಡುವ ಅಮಿತ್​, ಬಾಲಿವುಡ್​ ನಟಿಯರಾದ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವರಿಗೆ ಹೇರ್​ಸ್ಟೈಲ್ ಮಾಡಿದ್ದಾರೆ.

ಕೂದಲಿನ ಬಗ್ಗೆ ಇಂಚಿಂಚೂ ವಿಷಯಗಳನ್ನು ಅರಿತಿರುವ ಅಮಿತ್​, ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಲವು ವಿಷಯಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಈ ಮೂರು ಅಭ್ಯಾಸವನ್ನು ಇಂದೇ ಕೈಬಿಡಿ ಎಂದು ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಅಮಿತ್​ ಹೇಳಿದ ಆ ಮೂರು ತಪ್ಪುಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

ಮಿಸ್ಟೇಕ್​ 1: ಕೂದಲು ಒಣಗಿಸಿ

ಸಾಮಾನ್ಯವಾಗಿ ಎಲ್ಲರೂ ಬೆಳಗ್ಗಿನ ಸಮಯದಲ್ಲಿ ಸ್ನಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ, ಒಂದಷ್ಟು ಜನ ಮಾತ್ರ ಪ್ರತಿನಿತ್ಯ ರಾತ್ರಿ ವೇಳೆ ಜಳಕ ಮಾಡುವ ಅಭ್ಯಾಸ ರೂಡಿಸಿಕೊಂಡಿರುತ್ತಾರೆ. ಅಮಿತ್ ಹೇಳುವ ಪ್ರಕಾರ, ರಾತ್ರಿಯಲ್ಲಿ ತಲೆ ಸ್ನಾನ ಮಾಡುವವರು ಕೂದಲನ್ನು ಸಂಪೂರ್ಣವಾಗಿ ಒಣಗಿಸಿಕೊಳ್ಳಬೇಕು. ಸಾಕಷ್ಟು ಮಂದಿ ಹೇರ್​ ಡ್ರೈ ಮಾಡದೆ ನಿದ್ರಿಸುತ್ತಾರೆ. ಇದು ಕೂದಲ ಡ್ಯಾಮೇಜ್​ಗೆ ಕಾರಣವಾಗುತ್ತದೆ. ಕೂದಲು ಒದ್ದೆ ಇದ್ದಾಗ ಬಲಿಷ್ಠವಾಗಿರುವುದಿಲ್ಲ. ಹೀಗಾಗಿ ಕೂದಲನ್ನು ಹೇರ್ ​ಡ್ರೈಯರ್ ಸಹಾಯದಿಂದ ಒಣಗಿಸಿಕೊಳ್ಳುವುದು ಒಳಿತು ಎನ್ನುತ್ತಾರೆ ಅಮಿತ್​.

ಮಿಸ್ಟೇಕ್​ 2: ಕೂದಲಿಗೆ ಹೇರ್​ಸ್ಟ್ರೈಟ್ನರ್ಸ್​ ಬಳಕೆ

ಇಂದು ಬಹುಜನರು ಕೂದಲಿಗೆ ಹೇರ್​​ಸ್ಟ್ರೈಟ್ನರ್​ ವಸ್ತುಗಳನ್ನು ಬಳಕೆ ಮಾಡ್ತಾರೆ. ಪೂರ್ತಿ ಒದ್ದೆ ಅಥವಾ ಅರ್ಧ ಒದ್ದೆಯಾಗಿರುವ ಕೂದಲಿಗೆ ಇಂತಹ ವಸ್ತುಗಳನ್ನು ತಾಕಿಸುವುದು ಸರಿಯಲ್ಲ. ಇದು ಹೇರ್​ ಡ್ಯಾಮೇಜ್​ಗೆ ಕಾರಣವಾಗುತ್ತದೆ. ಕೂದಲ ಆರೈಕೆ ಮಾಡುವವರು ಈ ಕೂಡಲೇ ಇಂತಹ ಅಭ್ಯಾಸವನ್ನು ಬಿಟ್ಟುಬಿಡಿ ಎಂದಿದ್ದಾರೆ.

ಮಿಸ್ಟೇಕ್​ 3: ಕೂದಲು ಹರಡಿಸಿಕೊಂಡು ನಿದ್ರಿಸುವುದು

ನಿದ್ರಿಸುವ ಸಮಯದಲ್ಲಿ ಕೂದಲನ್ನು ಕಟ್ಟಿಕೊಳ್ಳದೆ ಹಾಗೆಯೇ ಮಲಗುವುದರಿಂದ ಹೇರ್​ ಬ್ರೇಕೇಜ್​ ಉಂಟಾಗುತ್ತದೆ. ದಿಂಬಿನ ಮೇಲೆ ಕೂದಲನ್ನು ಹರಡಿಸಿಕೊಂಡು ನಿದ್ರೆಗೆ ಜಾರಿದಾಗ ನಾವು ಅತ್ತ-ಇತ್ತ ತಲೆಯನ್ನು ಬದಲಾಯಿಸುತ್ತಲೇ ಇರುತ್ತೀವಿ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದನ್ನು ತಡೆಗಟ್ಟಲು ಕೂದಲನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಅಮಿತ್ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).