ರಸ್ತೆ ತೆರಿಗೆ, ದಂಡ ಕಟ್ಟದವರಿಗೆ ಕಾದಿದೆ ಸಂಕಷ್ಟ!; 4.12 ಲಕ್ಷಕ್ಕೂ ಅಧಿಕ ಡಿಎಸ್​ಎ ಕೇಸ್ ದಾಖಲು

tax
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕೋಟ್ಯಂತರ ರೂ. ರಸ್ತೆ ತೆರಿಗೆ ಹಾಗೂ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಿಧಿಸಿರುವ ದಂಡ ವಸೂಲಿಗೆ ಆರ್​ಟಿಒ ಅಧಿಕಾರಿಗಳು ನಿರಾಸಕ್ತಿ ತೋರಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕೂಡಲೇ ವಾಹನ ಮಾಲೀಕರಿಗೆ ತಗಾದೆ ನೋಟಿಸ್ ಜಾರಿ ಮಾಡುವ ಮೂಲಕ ವಸೂಲಿ ಮಾಡುವಂತೆ ಸಾರಿಗೆ ಇಲಾಖೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ಜಪ್ತಿ ಸಂಕಷ್ಟ ಎದುರಾಗುವುದು ನಿಶ್ಚಿತವಾಗಿದೆ.

ಸಾರಿಗೆ ಇಲಾಖೆ ಮಾಹಿತಿ ಪ್ರಕಾರ, 2010-11ನೇ ಸಾಲಿನಿಂದ 2023-24ನೇ ಸಾಲಿನವರೆಗೆ 4,12,346 ಡಿಎಸ್​ಎ ಪ್ರಕರಣಗಳು ಬಾಕಿ ಇವೆ. ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಕೋರಮಂಗಲ (ಕೆಎ-01) ಆರ್​ಟಿಒ ಕಚೇರಿಯೊಂದರಲ್ಲೇ 100 ಕೋಟಿ ರೂ. ತೆರಿಗೆ ವಂಚನೆ ಪ್ರಕರಣ ನಡೆದಿದ್ದು, ಸಂಬಂಧಪಟ್ಟ ವಾಹನಗಳಿಗೆ ನೋಟಿಸ್ ಕೊಟ್ಟು ತೆರಿಗೆ ವಸೂಲಿ ಮಾಡುವಂತೆ ಇಲಾಖೆ ಸೂಚಿಸಿದ್ದರೂ ಈವರೆಗೆ ಕಾರ್ಯಾರಂಭಿಸಿಲ್ಲ. ಇದೇ ಪ್ರಕರಣದಲ್ಲಿ ಸಾರಿಗೆ ಇಲಾಖೆ ವತಿಯಿಂದಲೇ ಪೊಲೀಸ್ ಠಾಣೆಗೆ ದೂರು ನೀಡಿ, ಪ್ರತ್ಯೇಕ ಎಫ್​ಐಆರ್ ದಾಖಲಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

2024ರ ಏಪ್ರಿಲ್ ಅಂತ್ಯದವರೆಗೆ ರಸ್ತೆ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಒಪ್ಪಂದ ವಾಹನಗಳು, ಮಜಲು ವಾಹನಗಳು, ಸಾರ್ವಜನಿಕ ಸೇವಾ ವಾಹನಗಳು ಸೇರಿ ಎಲ್ಲ ವಾಹನಗಳ ಪಟ್ಟಿ ಸಿದ್ಧಪಡಿಸಬೇಕು. ಅದರನ್ವಯ ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳ ಮೋಟಾರು ವಾಹನ ನಿರೀಕ್ಷಕರು ತಗಾದೆ ನೋಟಿಸ್​ಗಳು ವಾಹನ ಮಾಲೀಕರಿಗೆ ಜಾರಿಗೊಳಿಸಿ, ರಸ್ತೆ ತೆರಿಗೆ ಹಾಗೂ ದಂಡ ವಸೂಲಿ ಮಾಡಬೇಕು. ವಸೂಲಿ ಮಾಡಿರುವ ಬಗ್ಗೆ ಬ್ರೇಕ್ ಇನ್​ಸ್ಪೆಕ್ಟರ್​ಗಳಿಂದ ಆಯಾ ಆರ್​ಟಿಒಗಳು ಪ್ರತಿ ವಾರ ಕಡ್ಡಾಯವಾಗಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೆಚ್ಚುವರಿ ಸಾರಿಗೆ ಆಯುಕ್ತರು ಹಾಗೂ ಸಾರಿಗೆ ಇಲಾಖೆ ಕಾರ್ಯದರ್ಶಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದಾರೆ.

ತಾಂತ್ರಿಕ ಸಮಸ್ಯೆ

ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಹನಗಳ ಪಟ್ಟಿ ತಯಾರಿಸಲು ಕಂಪ್ಯೂಟರ್​ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವ ಕುರಿತು ಆರ್​ಟಿಒ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ತೆರಿಗೆ ತಗಾದೆ ನೋಟಿಸ್​ಗಳನ್ನು ಆನ್​ಲೈನ್ ಮೂಲಕ ಜಾರಿಗೊಳಿಸುವ ಹಾಗೂ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಕುರಿತು ಪ್ರತ್ಯೇಕವಾಗಿ ಸಭೆ ನಡೆಸಿ ರ್ಚಚಿಸಲು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟರಲ್ಲೇ ವಾಹನಗಳ ಪಟ್ಟಿ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಎಲ್ಲ ಆರ್​ಟಿಒಗಳಿಗೆ ಸೂಚನೆ ಕೊಡಲಾಗಿದೆ.

12 ಸಾವಿರ ರೂ. ಕೋಟಿ ರಾಜಸ್ವ ಸಂಗ್ರಹ ಗುರಿ

2023-24ನೇ ಸಾಲಿಗೆ ಇಲಾಖೆಗೆ ನಿಗದಿಪಡಿಸಿದ್ದ ವಾರ್ಷಿಕ ರಾಜಸ್ವ ಸಂಗ್ರಹಣ ಗುರಿ ಶೇ.100 ತಲುಪಿಲ್ಲ. ಶೇ.86.44 ಮಾತ್ರ ಸಾಧಿಸಿದೆ., 2024-25ನೇ ಸಾಲಿನಲ್ಲಿ ಇಲಾಖೆಗೆ 12,524.32 ಕೋಟಿ ರೂ. ರಾಜಸ್ವ ಸಂಗ್ರಹಿಸಬೇಕೆಂದು ಸರ್ಕಾರ ನಿಗದಿಪಡಿಸಿದೆ. 2024 ಏಪ್ರಿಲ್​ನಲ್ಲಿ ಶೇ. 86.90 ರಾಜಸ್ವ ಸಂಗ್ರಹವಾಗಿದೆ. ಇದರಲ್ಲಿ ಬೆಂಗಳೂರು (ನಗರ) ವಿಭಾಗ ಶೇ.76.05, ಬೆಂಗಳೂರು ಗ್ರಾಮಾಂತರ ವಿಭಾಗ ಶೇ.79.16, ಮೈಸೂರು ವಿಭಾಗ ಶೇ.84.02, ಶಿವಮೊಗ್ಗ ವಿಭಾಗ ಶೇ.82.17, ಬೆಳಗಾವಿ ವಿಭಾಗ ಶೇ.89.13, ಕಲಬುರಗಿ ವಿಭಾಗ ಶೇ.94.28 ರಾಜಸ್ವ ಸಂಗ್ರಹಣೆಯಾಗಿದೆ.

650 ಕಾರುಗಳ ತೆರಿಗೆ ವಂಚನೆ

ಕೋರಮಂಗಲ ಕಚೇರಿಯಲ್ಲೇ 650ಕ್ಕೂ ಅಧಿಕ ಕಾರುಗಳ ಟ್ಯಾಕ್ಸ್ ವಂಚನೆ ಆಗಿದೆ. ಎಆರ್​ಟಿಒ ಎ.ವಿ. ಪ್ರಸಾದ್ ನೇತೃತ್ವದ ಸಮಿತಿ ಈ ಹಿಂದೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರು, ಆದರೆ ಪ್ರಕ್ರಿಯೆ ಪ್ರಗತಿ ಕಂಡಿಲ್ಲ. 3ರಿಂದ 5 ಕೋಟಿ ರೂ. ಬೆಲೆಯ ಲ್ಯಾಂಬೋರ್ಗಿನಿ, 40 ಲಕ್ಷ ರೂ.ನಿಂದ 2 ಕೋಟಿ ರೂ. ಮೌಲ್ಯದ ಬಿಎಂಡಬ್ಲು ್ಯ 2 ಕೋಟಿ ರೂ.ಗಿಂತ ಹೆಚ್ಚಿನ ಬೆಲೆಯ ಪೋರ್ಶೆ ಹೀಗೆ ಐಷಾರಾಮಿ ಕಾರು ಮಾಲೀಕರಿಂದ ತೆರಿಗೆ ವಸೂಲಿ ಮಾಡಬೇಕಿದೆ.

ನಾಲ್ಕು ಲಕ್ಷ ನಿಯಮ ಉಲ್ಲಂಘನೆ ಕೇಸ್

ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಗೆ ಸಂಬಂಧಿಸಿ ರಾಜ್ಯಾದ್ಯಂತ 4,12,346 ಕೇಸ್​ಗಳು ಬಾಕಿ ಇವೆ. ಅದರಲ್ಲಿ ಬೆಂಗಳೂರು ನಗರ ವಿಭಾಗದಲ್ಲೇ ಅತಿಹೆಚ್ಚು 1,49,338 ಪ್ರಕರಣ ಬಾಕಿ ಇರುವುದು ಗೊತ್ತಾಗಿದೆ. ಬೆಂ. ಗ್ರಾಮಾಂತರ ವಿಭಾಗದಲ್ಲಿ 1,37,795, ಮೈಸೂರು ವಿಭಾಗದಲ್ಲಿ 26,169, ಬೆಳಗಾವಿ ವಿಭಾಗದಲ್ಲಿ 49,522 ಮತ್ತು ಕಲಬುರಗಿ ವಿಭಾಗದಲ್ಲಿ 49,522 ಪ್ರಕರಣಗಳು ಬಾಕಿ ಉಳಿದಿವೆ. ಈ ಎಲ್ಲ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ಕೊಡಲಾಗಿದೆ.

ಸೂಪರಿಂಟೆಂಡೆಂಟ್​ಗೆ ಪವರ್

ಎಲೆಕ್ಟ್ರಾನಿಕ್ಸ್ ಸಿಟಿ ಆರ್​ಟಿಒದಿಂದ ಕೋರಮಂಗಲ ಕಚೇರಿಗೆ ವರ್ಗಾವಣೆಯಾಗಿ ಬಂದಿರುವ ಸೂಪರಿಂಟೆಂಡೆಂಟ್ ವಿರುದ್ಧ ತೆರಿಗೆ ವಂಚನೆ ಅಕ್ರಮದ ಆರೋಪಗಳು ಕೇಳಿಬಂದಿವೆ. ಕಡತ ಪರಿಶೀಲನೆ ಜವಾಬ್ದಾರಿ ಮಾತ್ರವೇ ಸೂಪರಿಂಟೆಂಡೆಂಟ್​ಗಿದ್ದು, ಆರ್​ಟಿಒ ಅಧಿಕಾರಿಗೆ ಅನುಮೋದನೆ ಅಧಿಕಾರ ಇದೆ. ಆದರೆ, ಆರ್​ಟಿಒ ಅಧಿಕಾರವನ್ನೂ ನಿಯಮಬಾಹಿರವಾಗಿ ಸೂಪರಿಂಟೆಂಡೆಂಟ್ ನಿಭಾಯಿಸುತ್ತಿದ್ದು, ಅಕ್ರಮಕ್ಕೆ ಬಳಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಕಚೇರಿಯೊಂದರಲ್ಲೇ 20 ವರ್ಷ ಕೆಲಸ ಮಾಡಿ, ಇದೀಗ ಪ್ರಭಾವ ಬಳಸಿ ಹೆಚ್ಚು ವಹಿವಾಟು ನಡೆಯುವ ಕೋರಮಂಗಲ ಕಚೇರಿಗೆ ವರ್ಗಾವಣೆ ಮಾಡಿಕೊಂಡಿರುವ ಆರೋಪವೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net