ನ್ಯೂಸ್

ನನ್ನ ಪ್ರಕಾರ ಪ್ರಜ್ವಲ್​ ತನಿಖೆ ಎದುರಿಸುವುದು ಸೂಕ್ತ: ನಿಖಿಲ್​ ಕುಮಾರಸ್ವಾಮಿ

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲೇ ತೀವ್ರ ಗದ್ದಲ ಎಬ್ಬಿಸಿರುವ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದಯ ತಿರುವು ಪಡೆದುಕೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಿಖಿಲ್​ ಕುಮಾರಸ್ವಾಮಿ ಪ್ರಜ್ವಲ್​ ತನಿಖೆ ಎದುರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ನಿಖಿಲ್, ಘಟನೆ ಆದ ದಿನವೇ ಕುಮಾರಣ್ಣ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದಿದ್ದರು. ಸಂಸದರು ಎಸ್‍ಐಟಿ ತನಿಖೆ ಎದರಿಸುವುದು ಸೂಕ್ತ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.

ಮಾಜಿ ಸಂಸದ ಶಿವರಾಮೇಗೌಡರದ್ದು ಎನ್ನಲಾದ ಆಡಿಯೋದಲ್ಲಿ ವಿಚಾರವಾಗಿ, ಶಿವರಾಮೇಗೌಡ ಸರ್ಕಾರದಲ್ಲಿರುವ ಒಬ್ಬ ವ್ಯಕ್ತಿಯ ಹೆಸರು ಉಲ್ಲೇಖಿಸಿದ್ದಾರೆ. ಇಡೀ ರಾಜ್ಯದ ಜನ ಶಿವರಾಮೇಗೌಡರ ಆಡಿಯೋ ಕೇಳಿದ್ದಾರೆ. ಕೆಂಪುಕೋಟೆ ಮೇಲೆ ಭಾವುಟ ಹಾರಿಸಿದ ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿಗಳ ವಿರುದ್ಧ ಅವರ ಹೇಳಿಕೆ, ಅವರ ಸಂಸ್ಕೃತಿ, ಮನಸ್ಥಿತಿ ಹೇಗಿದೆ ಎನ್ನುವುದನ್ನು ತೋರಿಸುತ್ತದೆ. ರಾಜಕೀಯ ಮಾಡಿ, ಆದರೆ ಇನ್ನೊಬ್ಬರ ಸಾವನ್ನು ಬಯಸಿ ರಾಜಕೀಯ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಪೆನ್​ಡ್ರೈವ್​ ಬಡುಗಡೆ ಮಾಡಿದ ಬಳಿಕ ಸಂತ್ರಸ್ತೆಯರ ಮುಖವನ್ನು ಬ್ಲರ್​ ಮಾಡಬೇಕಿತ್ತು. ವಿಡಿಯೋ ಬಿಡುಗಡೆ ಮಾಡಿ ಸಂತ್ರಸ್ತೆಯರ ಮಾನ ಹರಾಜು ಹಾಕಿದ್ದು, ಯಾಕೆ ವಿಡಿಯೋ ರಿಲೀಸ್ ಮಾಡಿದವರ ವಿರುದ್ಧ ಯಾಕೆ ಕ್ರಮ ಜರುಗಿಸಿಲ್ಲ ಎಂದು ನಿಖಿಲ್​ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.