ನ್ಯೂಸ್

ಡಿಎಆರ್​​ಪಿಜಿಗೆ ಕೇಂದ್ರ ನೀಡಿದ ಹೊಸ ರಕ್ಷಣಾ ಮಾರ್ಗಸೂಚಿಯಲ್ಲಿ ಏನೇನಿವೆ.?

sspmiracle1982

ನವದೆಹಲಿ: ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆಯಲ್ಲಿನ (ಡಿಎಆರ್‌ಪಿಜಿ) ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೇಂದ್ರ ಸರ್ಕಾರ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಸುತ್ತೋಲೆಯಲ್ಲಿ, ರೋಗಲಕ್ಷಣವಿಲ್ಲದ ಸಿಬ್ಬಂದಿ ಮಾತ್ರ ಕಚೇರಿಗೆ ಬರುವಂತೆ ಹಾಗೂ ಲಘು ಶೀತ, ಜ್ವರ ಕೆಮ್ಮು ಇರುವವರೆಲ್ಲರೂ ಮನೆಯಲ್ಲೇ ಇರಬೇಕು ಎಂದು ತಿಳಿಸಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿರುವ ಸಿಬ್ಬಂದಿ ಕಡ್ಡಾಯವಾಗಿ ಮನೆಯಿಂದಲೇ ಕೆಲಸ ಮಾಡಬೇಕು. ಒಂದು ದಿನಕ್ಕೆ ಡಿಎಆರ್​ಪಿಯ ಕನಿಷ್ಠ 20 ಅಧಿಕಾರಿಗಳು ಮತ್ತು ಸಿಬ್ಬಂದಿ ಸದಸ್ಯರು ಮಾತ್ರ ಕಚೇರಿಗೆ ಹಾಜರಾಗಬೇಕು. ಅದಕ್ಕೆ ಅನುಗುಣವಾಗಿ ಡ್ಯೂಟಿ ಚಾರ್ಟ್ ಮಾಡಲು ಆಡಳಿತ ಇಲಾಖೆಗೆ ಜೂನ್ 5ರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸುತ್ತೋಲೆಯಲ್ಲಿ ಡಿಎಆರ್‌ಪಿಜಿ ಉದ್ಯೋಗಿಗಳಿಗೆ ಸೂಚಿಸಲಾದ ಇತರ ಮಾನದಂಡಗಳೆಂದರೆ:

• ಫೇಸ್ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಗಳನ್ನು ಕಚೇರಿಯ ಅವಧಿಯಲ್ಲಿ ಕಡ್ಡಾಯವಾಗಿ ಧರಿಸಬೇಕು.

* ಬಳಸಿದ ಮಾಸ್ಕ್ ಮತ್ತು ಕೈಗವಸುಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ತೊಟ್ಟಿಯಲ್ಲಿ ಮಾತ್ರ ಹಾಕಬೇಕು.

• ಮುಖಾಮುಖಿ ಸಭೆಗಳು / ಚರ್ಚೆಗಳು / ಸಂವಾದಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಈ ಉದ್ದೇಶಗಳಿಗಾಗಿ ಸಿಬ್ಬಂದಿ ಇಂಟರ್​​ಕಾಮ್, ಫೋನ್ ಬಳಸಬೇಕು ಅಥವಾ ವಿಡಿಯೋ -ಕಾನ್ಫರೆನ್ಸ್ ಮಾಡಬೇಕು.

* ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪ್ರತಿ ಅರ್ಧಗಂಟೆಗೊಮ್ಮೆ ಕೈ ತೊಳೆಯುವುದು ಅತ್ಯಗತ್ಯ. ಕಾರಿಡಾರ್‌ನ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಅಳವಡಿಸಬೇಕು.

* ಆಗಾಗ ಮುಟ್ಟಬಹುದಾದ ಸ್ವಿಚ್‌, ಬಾಗಿಲು ಗುಬ್ಬಿಗಳು, ಎಲಿವೇಟರ್ ಗುಂಡಿಗಳು, ಕೈ ಹಳಿಗಳಂಥ ಸಾಧನಗಳನ್ನು ಪ್ರತಿ ಗಂಟೆಗೊಮ್ಮೆ ಸ್ವಚ್ಛಗೊಳಿಸಬೇಕು.

* ಕೀಬೋರ್ಡ್‌ಗಳು, ಮೌಸ್, ಫೋನ್, ಎಸಿ ರಿಮೋಟ್‌ಗಳು ಮುಂತಾದ ವೈಯಕ್ತಿಕ ಸಾಧನಗಳನ್ನು ಆಗಾಗ್ಗೆ ಎಥೆನಾಲ್ ಆಧಾರಿತ ಸೋಂಕುನಿವಾರಕವನ್ನು ಬಳಸಿ ಸ್ವಚ್ಛಗೊಳಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ.

ಸಂಸತ್ತಿನ ಇಬ್ಬರು ಸಿಬ್ಬಂದಿಗೆ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯದ (ಎಂಇಎ) ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಸಿಬ್ಬಂದಿಗೂ ಕಳೆದ ತಿಂಗಳು ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿತ್ತು.

ನವದೆಹಲಿಯ ಇತರ ಭಾಗಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿಯೂ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿ ಪ್ರಸ್ತುತ 2,66,598 ಕೋವಿಡ್ -19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮಂಗಳವಾರದ ವರೆಗೆ ಅಂದಾಜು 7466 ಜನ ಸಾವಿಗೀಡಾಗಿದ್ದಾರೆ.