ನ್ಯೂಸ್

ಶಾಲೆಗಳಲ್ಲಿ ವಿಷಪ್ರಾಶನ! ಆಫ್ಘಾನಿಸ್ತಾನದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು…

ಕಾಬೂಲ್: ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಷಪ್ರಾಶನ ಮಾಡಲಾಗಿದ್ದು ಸುಮಾರು 80 ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಫ್ಘಾನಿಸ್ತಾನದ ಶಿಕ್ಷಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಅಂತರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ವರದಿಗಳ ಪ್ರಕಾರ, ಉತ್ತರದ ಸ‌-ಎ-ಪುಲ್ ಪ್ರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರದಂದು ಈ ಘಟನೆ ಸಂಭವಿಸಿದೆ.

ಪ್ರಾಂತೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಮೊಹಮ್ಮದ್ ರಹಮಾನಿ "ಸಂಗಚರಕ್ ಜಿಲ್ಲೆಯಲ್ಲಿ 1ರಿಂದ 6 ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಿಷಪ್ರಾಶನ ಮಾಡಲಾಗಿದೆ. ನಸ್ವಾನ್-ಎ-ಕಬೋದ್ ಆಬ್ ಶಾಲೆಯಲ್ಲಿ 60 ಮಕ್ಕಳು ಮತ್ತು ನಸ್ವಾನ್-ಇನಲ್ಲಿ 17 ಮಕ್ಕಳು ವಿಷ ಸೇವಿಸಿದ್ದಾರೆ" ಎಂದು ಹೇಳಿದರು. ಫೈಜಾಬಾದ್ ಶಾಲೆಯಲ್ಲೂ ವಿದ್ಯಾರ್ಥಿನಿಯರಿಗೆ ವಿಷಪ್ರಾಶನ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

"ಎರಡೂ ಪ್ರಾಥಮಿಕ ಶಾಲೆಗಳು ಒಂದಕ್ಕೊಂದು ಹತ್ತಿರದಲ್ಲಿದ್ದು ಒಂದರ ನಂತರ ಒಂದನ್ನು ಗುರಿಯಾಗಿಸಲಾಯಿತು. ನಾವು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಮತ್ತು ಈಗ ಅವರೆಲ್ಲರೂ ಆರೋಗ್ಯವಾಗಿದ್ದಾರೆ" ಎಂದು ಅವರು ಹೇಳಿದರು.

"ಇದೀಗ ತನಿಖೆ ನಡೆಯುತ್ತಿದ್ದು ಈ ರೀತಿ ವಿದ್ಯಾರ್ಥಿನಿಯರಿಗೆ ವಿಷಪ್ರಾಶನ ಮಾಡಲು ಮೂರನೇ ವ್ಯಕ್ತಿಗೆ ದ್ವೇಷದಿಂದ ಯಾರೋ ಹಣ ನೀಡಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಗಳು ತೋರಿಸುತ್ತಿವೆ" ಎಂದು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದೆ ರಹಮಾನಿ ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ; ಅಲ್​​ಖೈದಾ ಜತೆ ಸಂಪರ್ಕ!?

ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಮತ್ತು ಆಫ್ಘಾನ್ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲೆ ತಮ್ಮ ಶಿಸ್ತುಕ್ರಮವನ್ನು ಪ್ರಾರಂಭಿಸಿದ್ದು ಆ ನಂತರ ಈ ರೀತಿಯ ಆಕ್ರಮಣವು ಮೊದಲ ಬಾರಿಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ. ವಿಶ್ವವಿದ್ಯಾನಿಲಯ ಸೇರಿದಂತೆ ಆರನೇ ತರಗತಿಯ ನಂತರದ ಶಿಕ್ಷಣದಿಂದ ಹುಡುಗಿಯರನ್ನು ನಿಷೇಧಿಸಲಾಗಿದ್ದು ಹೆಚ್ಚಿನ ಉದ್ಯೋಗಗಳಿಂದ ಮತ್ತು ಸಾರ್ವಜನಿಕ ಸ್ಥಳಗಳಿಂದ ಮಹಿಳೆಯರನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)