ಕಂಗನಾ ಹೇಳಿಕೆಗೆ ಸಿಜೆಪಿ ವಕ್ತಾರ ಸೌರವ್ ದಾಸ್ ತೀವ್ರ ತಿರುಗೇಟು
- ಕಂಗನಾ ರನೌತ್ ಅವರ 'ಗಟರ್ ಪೀಳಿಗೆ' ವಿವಾದಾತ್ಮಕ ಹೇಳಿಕೆಗೆ
- ಕಂಗನಾ ಹೇಳಿಕೆಗೆ ಸಿಜೆಪಿ ವಕ್ತಾರ ಸೌರವ್ ದಾಸ್ ತೀವ್ರ ತಿರುಗೇಟು
- ಬಿಜೆಪಿಯವರೇ ಕಂಗನಾ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವ್ಯಂಗ್ಯ
ನವದೆಹಲಿ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಇತ್ತೀಚೆಗೆ ನೀಟ್ ಪರೀಕ್ಷಾ ಅಕ್ರಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಝೆನ್-ಜೀ ಗಳ ಬಗ್ಗೆ ನೀಡಿದ್ದ ಕೆಲ ಹೇಳಿಕೆಗಳು ವಿವಾದದ ರೂಪ ಪಡೆದುಕೊಂಡಿದ್ದವು.
ಈಗ ಕಂಗನಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಕ್ರೋಚ್ ಜನತಾ ಪಾರ್ಟಿ ವಕ್ತಾರ, ಸೌರವ್ ದಾಸ್ (Sourav Das on Kangana Ranaut), ಕಂಗನಾಳ ಮಾತನ್ನ ಆಕೆ ಪಕ್ಷದವರೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಅಷ್ಟಕ್ಕೂ ಕಂಗನಾ ಹೇಳಿದ್ದೇನು?
'ಝೆನ್ಜಿಗಳ ರೀಲ್ಸ್ಗಳು ಕೊಳಕು, ಕಸ, ಅಸಹ್ಯಕರವಾಗಿದ್ದು, ಇದನ್ನು ಅವರು ದೇಶಕ್ಕೆ ಬಿತ್ತರಿಸುವ ಕೆಲಸ ಮಾಡುತ್ತಿದೆ. ಅವರನ್ನು ಜಿರಳೆಗಳು ಎಂದು ಕರೆದುಕೊಂಡು ಅವುಗಳಂತೆ ಕೊಳಕಾಗಿ ವರ್ತಿಸುತ್ತಿದ್ದಾರೆ. ಇವರನ್ನು ಹೆತ್ತು, ಬೆಳಸುತ್ತಿರೋದಾದ್ರೂ ಯಾರು? ಎಂದು ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಒಂದೇ ಸ್ಥಳದಲ್ಲಿ ಇಷ್ಟೊಂದು ಅರಾಜಕತೆ, ಅಸಹ್ಯ ತರುವಂತಹ ಸ್ಥಿತಿಯನ್ನು ಎಂದಿಗೂ ನಾನು ನನ್ನ ಜೀವನದಲ್ಲಿ ನೋಡಿರಲಿಲ್ಲ. ಝೆನ್ ಜಿಗಳು ಮಾಡುವ ರೀಲ್ಸ್ಗಳನ್ನು ನೋಡಿದರೆ ವಾಕರಿಕೆ ಬರುತ್ತದೆ. ಅಷ್ಟೇ ಅಲ್ಲದೆ ಅವರು ಬಳಕೆ ಮಾಡುವ ಭಾಷೆಯನ್ನು ನನ್ನ ಜೀವಮಾನದಲ್ಲಿ ಕೇಳಿಸಿಕೊಂಡಿಲ್ಲ, ಇವರೆಲ್ಲಾ ಗಟರ್ ಚಾಪ್ ಪೀಳಿಗೆಗಳಾಗಿವೆ ಎಂದು ಆಕ್ರೋಶ ಹೊರಹಾಕಿದ್ದರು.
ಈ ಪೀಳಿಗೆ ಮಕ್ಕಳು ಓದುವುದು, ಅಧ್ಯಯನ ಎಂದರೆ ಏನೆಂದೇ ತಿಳಿದಿಲ್ಲ, ಆದರೆ, ಪಾರ್ಟಿ, ಡ್ರಗ್ಸ್, ಮದ್ಯ ಮತ್ತು ಅಸಭ್ಯ ಜೀವನಶೈಲಿಯನ್ನು ತಮ್ಮ ಸ್ವಾತಂತ್ರ್ಯವೆಂದು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ. ಹೆತ್ತವರ ದುಡ್ಡಿನಲ್ಲಿ ತಿಂದುಕೊಂಡು ಸ್ವತಂತ್ರರಂತೆ ನಾಚಿಕೆಯಿಲ್ಲದೆ ಬದುಕುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದರು.
ಬಿಜೆಪಿಯವರೇ ಕಂಗನಾರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ: ಸೌರವ್ ದಾಸ್
ಕಂಗನಾ ಅವರ ಈ ಹೇಳಿಕೆಗೆ ಜಿರಳೆ ಜನತಾ ಪಕ್ಷದ (ಸಿಜೆಪಿ) ವಕ್ತಾರ ಸೌರವ್ ದಾಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಂಗನಾ ಅವರ ಸ್ವತಃ ಪಕ್ಷದವರೇ ಅವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಅವರ ಸ್ವತಃ ಪಕ್ಷದ ಸದಸ್ಯರೇ ಕಂಗನಾ ರಣಾವತ್ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಿದ್ದ ಮೇಲೆ ಸಾರ್ವಜನಿಕರು ಅಥವಾ ಯುವ ಪೀಳಿಗೆ (Gen Z) ಏಕೆ ಅವರ ಮಾತಿಗೆ ಬೆಲೆ ಕೊಡಬೇಕು? ಹಿಮಾಚಲ ಪ್ರದೇಶದ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದಾಗ, ಸಂಸದೆಯಾಗಲು ಅಪಾರ ಶ್ರಮ ಬೇಕಾಗುತ್ತದೆ ಎಂಬ ವಾಸ್ತವಿಕತೆ ಅವರಿಗೆ ಈಗ ಅರ್ಥವಾಗಿದೆ. ಇದು ಅವರ ಗಂಭೀರತೆಯ ಕೊರತೆಯನ್ನು ತೋರಿಸುತ್ತದೆ ಎಂದು ಸೌರವ್ ದಾಸ್ ವ್ಯಂಗ್ಯವಾಡಿದ್ದಾರೆ.
ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಂಗನಾ ರನೌತ್!
ವಿವಾದ ಜೋರಾಗುತ್ತಿದ್ದಂತೆ ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಂಗನಾ ರನೌತ್, ತಮ್ಮ ಹೇಳಿಕೆಯಿಂದ ಹಿಂದೆ ಸರಿಯಲಿಲ್ಲ. ಬದಲಾಗಿ ಅದನ್ನು ಸಮರ್ಥಿಸಿಕೊಂಡರು. ವಿದ್ಯಾರ್ಥಿ ಪ್ರತಿಭಟನೆಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದಿವಂಗತ ತಾಯಿಯವರ ಮೇಲೂ ನಿಂದನೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ನಮ್ಮ 75 ವರ್ಷದ ಪ್ರಧಾನಿಯವರ ತಾಯಿಯನ್ನು ನಿಂದಿಸಿದವರು ಯಾವ ರೀತಿಯಲ್ಲಿ ವಿದ್ಯಾರ್ಥಿಗಳು? ಅವರ ಬಾಯಲ್ಲಿ ಬರುತ್ತಿರುವ ಅಶ್ಲೀಲ ಭಾಷೆಯನ್ನು ಗಮನಿಸಿ. ಭವಿಷ್ಯದಲ್ಲಿ ಇವರಿಗೆ ಸುಪ್ರೀಂ ಕೋರ್ಟ್ ವಕೀಲರ ಶುಲ್ಕ ಭರಿಸಲು ಸಾಧ್ಯವಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ತಾವು ತಮ್ಮ 16ನೇ ವಯಸ್ಸಿನಿಂದಲೂ ಸ್ವಂತವಾಗಿ ದುಡಿಯುತ್ತಿದ್ದು, ಪೋಷಕರ ಮೇಲೆ ಯಾವತ್ತೂ ಆರ್ಥಿಕವಾಗಿ ಭಾರವಾಗಿರಲಿಲ್ಲ ಎಂದು ತಮ್ಮ ವೈಯಕ್ತಿಕ ಜೀವನದ ಉದಾಹರಣೆಯನ್ನು ನೀಡಿದ್ದಾರೆ. ಯಾವತ್ತೂ ಜವಾಬ್ದಾರಿಯಿಲ್ಲದೆ ಬರೀ ಸ್ವಾತಂತ್ರ್ಯ ಬೇಕು ಎಂದರೆ ಅದು ವಿಕೃತ ಅಸ್ತಿತ್ವವಷ್ಟೇ ಎಂದು ಕಂಗನಾ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ, (ಏಜನ್ಸೀಸ್).