ಮೊಬೈಲ್ ಫೋನ್ ಇಎಂಐ (EMI) ವಿಚಾರವಾಗಿ ಯುವಕನ ಅಪಹರಣ ಮತ್ತು ಚಿತ್ರಹಿಂಸೆ 
ದೇಶ

ಮೊಬೈಲ್ EMI ಕಟ್ಟದಿದ್ದಕ್ಕೆ ಇಂಥಾ ಶಿಕ್ಷೆ? ಯುವಕನ ಕಿಡ್ನಾಪ್‌, ರಕ್ತ ತೆಗೆಸಿ 4 ದಿನ ಚಿತ್ರಹಿಂಸೆ ನೀಡಿದ ದುರುಳರು! Mobile EMI

ಲಖನೌ: ಸಮಯಕ್ಕೆ ಸರಿಯಾಗಿ ಇಎಂಐ ಕಂತು ಕಟ್ಟಿಲ್ಲ ಎಂದರೆ, ಕಂಪನಿಯವರು, ಸಾಲದ ರೂಪದಲ್ಲಿ ಖರೀದಿಸಿದ್ದ ವಸ್ತುವನ್ನು ವಾಪಸ್ ತಗೊಳ್ತಾರೆ, ಇಲ್ಲವೆ ಒಂದಿಷ್ಟು ಬೈದು ಮುಂದಿನ ತಿಂಗಳಿನಿಂದ ಸರಿಯಾಗಿ ಕಂತನ್ನು ಪಾವತಿಸುವಂತೆ ಬೆದರಿಕೆ ಹಾಕುತ್ತಾರೆ.
ಆದರೆ, ಇಲ್ಲೊಬ್ಬನಿಗೆ ಮೊಬೈಲ್ ಕಂತು (Mobile EMI) ಕಟ್ಟಲಿಲ್ಲ ಎನ್ನುವುದಕ್ಕೆ, ಫೋನ್​ ಅನ್ನು ಕಿತ್ತುಕೊಳ್ಳುವ ಜತೆಗೆ ಆತನನ್ನು ಅಪಹರಿಸಿ ಆಸ್ಪತ್ರೆಗೆ ಕರೆದೊಯ್ದು ರಕ್ತ ತೆಗೆಸಿ, ನಾಲ್ಕು ದಿನಗಳ ಕಾಲ ಮನೆಯಲ್ಲೇ ಕೂಡಿಹಾಕಿ ಭೀಕರ ಹಲ್ಲೆ ನಡೆಸಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಘಟನೆ ಹಿನ್ನಲೆ!

ಉತ್ತರ ಪ್ರದೇಶದ ನವಲ್ ಕುಮಾರ್ ಎಂಬುವವರೇ ಈ ಅಘಾತಕ್ಕೊಳಗಾದ ವ್ಯಕ್ತಿಯಾಗಿದ್ದಾನೆ. ಸುಮಾರು ಒಂದು ವರ್ಷದ ಹಿಂದೆ ನವಲ್ ಕುಮಾರ್ ಜೀರೋ-ಡೌನ್-ಪೇಮೆಂಟ್ ಯೋಜನೆಯಡಿ 21,500 ರೂ. ಬೆಲೆಯ ಮೊಬೈಲ್ ಒಂದನ್ನು ಖರೀದಿಸಿದ್ದರು. ತಿಂಗಳಿಗೆ 2,799 ರೂ. ನಂತೆ 12 ತಿಂಗಳು ಕಂತು ಕಟ್ಟಬೇಕು ಎಂಬ ಒಪ್ಪಂದವಾಗಿತ್ತು.
ಆದರೆ, ಕೇವಲ ಒಂದು ತಿಂಗಳು ಮಾತ್ರ ಫೋನ್ ಬಳಸಿದ ನವಲ್ ಕುಮಾರ್‌ಗೆ ಆರ್ಥಿಕ ಸಮಸ್ಯೆಯಿಂದಾಗಿ ಮುಂದಿನ ಕಂತುಗಳನ್ನು ಕಟ್ಟಲು ಸಾಧ್ಯವಾಗಿಲ್ಲ. ವಿಷಯ ತಿಳಿದು ಕಂಪನಿಯ ಪ್ರತಿನಿಧಿಗಳು ಬಂದು ಆ ಫೋನ್ ಅನ್ನು ವಾಪಸ್ ಪಡೆದುಕೊಂಡಿದ್ದರು. ಅಷ್ಟಕ್ಕೆ ಪ್ರಕರಣ ಮುಗಿಯಿತು ಎಂದೇ ನವಲ್ ಭಾವಿಸಿದ್ದರು. ಆದರೆ ಅಸಲಿ ಆಟ ಮುಂದೆ ಶುರುವಾಗಿದೆ.
ಆಸ್ಪತ್ರೆಯಲ್ಲಿ ರಕ್ತ ತೆಗೆಸಿದ್ರು!
ಸೆಪ್ಟೆಂಬರ್ ತಿಂಗಳ 8 ಅಥವಾ 9 ರಂದು ಕೆಲ ವ್ಯಕ್ತಿಗಳು ನವಲ್ ಕುಮಾರ್ ಮನೆಗೆ ಬಂದಿದ್ದಾರೆ. ಬಾಕಿ ಹಣದ ವಿಚಾರ ಮಾತನಾಡಬೇಕಿದೆ ಎಂದು ಬೈಕ್‌ನಲ್ಲಿ ಕೂರಿಸಿಕೊಂಡು ನೇರವಾಗಿ ಲಕ್ನೋಗೆ ಕರೆದೊಯ್ದಿದ್ದಾರೆ.
ಲಕ್ನೋ ತಲುಪಿದ ಬಳಿಕ, ನೇರವಾಗಿ ಒಂದು ಆಸ್ಪತ್ರೆಗೆ ಕರೆದೊಯ್ದು ಬಲವಂತವಾಗಿ ರಕ್ತವನ್ನು ತೆಗೆಸಲಾಗಿದೆ ಎಂದು ನವಲ್ ಕುಮಾರ್ ಆರೋಪಿಸಿದ್ದಾರೆ. ಆಸ್ಪತ್ರೆಯಿಂದ ನೇರವಾಗಿ ನನ್ನನ್ನು ಒಂದು ಮನೆಗೆ ಕರೆದೊಯ್ದು ಕೂಡಿಹಾಕಿದರು. ಅಲ್ಲಿ ನನ್ನ ಬಳಿ 2,600 ರೂ. ತರುವಂತೆ ಒತ್ತಾಯಿಸಿದರು ಎಂದು ಅವರು ತಮ್ಮ ಮೇಲಿನ ದೌರ್ಜನ್ಯವನ್ನು ಬಿಚ್ಚಿಟ್ಟಿದ್ದಾರೆ. ಮನೆಯವರೊಂದಿಗೆ ಮಾತನಾಡಿ ಸಹೋದರನ ಮೂಲಕ ಹೇಗೋ ಹಣ ಕಳುಹಿಸಲು ಪ್ರಯತ್ನಿಸಿದರೂ ಸಾಲಲಿಲ್ಲ. ಕೊನೆಗೆ ಸುಮಾರು 1,800 ರೂ. ಮಾತ್ರ ಅವರ ಖಾತೆಗೆ ತಲುಪಿದೆ.

ರಾತ್ರಿ ವೇಳೆ ಹಲ್ಲೆ, ಮತ್ತೆ ಹಣಕ್ಕೆ ಬೇಡಿಕೆ!

ಹಣ ಪಾವತಿಸಿದರೂ ರಾತ್ರಿ 10-11 ರ ಸುಮಾರಿಗೆ ನವಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ನಮಗೆ ಇಷ್ಟು ಹಣ ಸಾಲದು, ಇನ್ನೂ 12,500 ರೂ. ತೆಗೆದುಕೊಂಡು ಬಂದರೆ ಮಾತ್ರ ನಿನ್ನನ್ನು ಜೀವಂತ ಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ನಾಲ್ಕು ದಿನಗಳ ಕಾಲ ನವಲ್ ಅವರನ್ನು ಕತ್ತಲು ಕೋಣೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ನಿರಂತರವಾಗಿ ಹಿಂಸೆ ನೀಡಲಾಗಿದೆ. ಕೊನೆಗೆ ಬೇರೆ ದಾರಿಯಿಲ್ಲದೆ ನವಲ್ ತಮ್ಮ ಸಹೋದರನಿಗೆ ವಿಷಯ ಮುಟ್ಟಿಸಿದ್ದಾರೆ. ಸಹೋದರ ತಕ್ಷಣವೇ ಪೊಲೀಸರ ಮೊರೆ ಹೋಗಿದ್ದಾರೆ.

ಪೊಲೀಸರ ಎಂಟ್ರಿ, ಆತಂಕದಲ್ಲಿ ಆರೋಪಿಗಳು!

ಸೆಪ್ಟೆಂಬರ್ 14 ರಂದು ನವಲ್ ಕುಮಾರ್ ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರಿಂದ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ಚುರುಕುಗೊಳಿಸಿ, ಆಮಿಷ ಒಡ್ಡಿ ಅಪಹರಿಸಿರುವವರ ಮೇಲೆ ತೀವ್ರ ಒತ್ತಡ ಹೇರಿದ್ದಾರೆ. ಪೊಲೀಸರ ಬಿಸಿ ತಟ್ಟುತ್ತಿದ್ದಂತೆ ಹೆದರಿದ ಅಪಹರಣಕಾರರು ನವಲ್ ಅವರನ್ನು ಕೊನೆಗೂ ಬಿಡುಗಡೆ ಮಾಡಿದ್ದು, ವಾಪಸ್ ಬೈಕ್ ಟ್ಯಾಕ್ಸಿಯಲ್ಲಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಸದ್ಯ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ನವಲ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್​).