ಚಾಮರಾಜನಗರದಲ್ಲಿ ‘ಗಜ-ವ್ಯಾಘ್ರ’ ಅಟ್ಟಹಾಸ: ಒಂದೇ ದಿನ ಆನೆ, ಹುಲಿ ದಾಳಿಗೆ ಇಬ್ಬರು ರೈತರ ಸಾವು! Two farmers killed

ಚಾಮರಾಜನಗರದಲ್ಲಿ ಕಾಡಾನೆ ಮತ್ತು ಹುಲಿ ದಾಳಿಗೆ ಇಬ್ಬರು ರೈತರು ಬಲಿ
ಚಾಮರಾಜನಗರದಲ್ಲಿ ಕಾಡಾನೆ ಮತ್ತು ಹುಲಿ ದಾಳಿಗೆ ಇಬ್ಬರು ರೈತರು ಬಲಿ
Published on
ಚಾಮರಾಜನಗರ: ದೇಶದೆಲ್ಲಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದರೆ, ಗಡಿಜಿಲ್ಲೆ ಚಾಮರಾಜನಗರದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಮುಂದುವರೆದಿದೆ. ವಿಘ್ನ ವಿನಾಶಕನ ಹಬ್ಬದ ದಿನವೇ ಎರಡು ಪ್ರತ್ಯೇಕ ಮನ್ಯಜೀವಿ ದಾಳಿಗಳಲ್ಲಿ ಅನ್ನದಾತ ಕೊನೆಯುಸಿರೆಳೆದಿದ್ದಾನೆ. ಬೆಳಗ್ಗೆ ಕಾಡಾನೆ ದಾಳಿಗೆ ಹಾಗೂ ಸಂಜೆ ಹುಲಿ ದಾಳಿಗೆ ಇಬ್ಬರು ರೈತರು ಮೃತ (Two farmers killed) ಮಟ್ಟಿದ್ದಾಗಿ ವರದಿಯಾಗಿದೆ.

ಬೆಳಗ್ಗೆ ಕಾಡಾನೆ ಅಟ್ಯಾಕ್​!

ಸೋಮವಾರ ಹಸುಗಳನ್ನು ಜಮೀನಿನಲ್ಲಿ ಕಟ್ಟುತ್ತಿದ್ದಾಗ ಕೋಟೆಕೆರೆ ಗ್ರಾಮದ ಜನ್ನೂರ ನಾಯಕ (68) ಎನ್ನುವವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಕೂಡಲೇ ಅಸ್ವಸ್ಥಗೊಂಡಿದ್ದ ಇವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಿತರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆನೆ ದಾಳಿಗೊಳಾಗಾಗಿ ರೈತ ಮೃತಪಟ್ಟ ಘಟನೆ ಖಂಡಿಸಿ ಓಂಕಾರ್ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ‌.

ಅರಣ್ಯ ಇಲಾಖೆ ನಿರ್ಲಕ್ಷ ತೋರುತ್ತಿದೆ

ಕಳೆದ ಮಾರ್ಚ್ ತಿಂಗಳಿನಿಂದ ಕಾಡಾನೆ ಉಪಟಳ ಹೆಚ್ಚಾಗಿದ್ದರೂ ಅರಣ್ಯ ಇಲಾಖೆ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.‌ ಸಾಕಷ್ಟು ಬೆಳೆ ಕೂಡ ನಾಶ ಮಾಡಿರುವ ಬಗ್ಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಓಂಕಾರ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ರೈತರು ಕಿಡಿಕಾರಿದ್ದಾರೆ.
ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕಾಡು ಪ್ರಾಣಿಗಳ ಹಾವಳಿ ತಡೆಯಲು ವಿಫಲರಾಗಿರುವ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲು ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಸರ್ಕಾರದಿಂದ ಪರಿಹಾರ ಚೆಕ್ ವಿತರಿಸಿ, ಕಾಡಾನೆ ಉಪಟಳಕ್ಕೆ ಕ್ರಮ ಕೈಗೊಳ್ಳುವ ಭರವಸೆ ಬಳಿಕ ಪ್ರತಿಭಟನೆ ಕೈ ಬಿಟ್ಟಿದ್ದಾಗಿ ತಿಳಿದು ಬಂದಿದೆ.

ಹುಲಿ ದಾಳಿಗೆ ರೈತ ಭೀಕರ ಸಾವು

ಆನೆ ದಾಳಿ ವಿಷಯ ತಣ್ಣಗಾಗುತ್ತಿದ್ದಂತೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಹುಲಿ ದಾಳಿಗೆ ರೈತನೊಬ್ಬ ಬಲಿಯಾಗಿದ್ದಾನೆ. ಹಸುಗಳಿಗೆ ಹುಲ್ಲು ಕೊಯ್ಯಲೆಂದು ತೆರಳಿದ್ದ ಬಸವಣ್ಣ (65) ಮೃತ ದುರ್ದೈವಿಯಾಗಿದ್ದಾನೆ.
ಬಸವಣ್ಣ ಮಧ್ಯಾಹ್ನದ ಸಮಯ ಜಮೀನಿಗೆ ಹುಲ್ಲು ಕೊಯ್ಯಲೆಂದು ತೆರಳಿ ಸಂಜೆಯಾದರೂ ಹಿಂತಿರುಗದಿದ್ದರಿಂದ ಸಂಬಂಧಿಕರು ಜಮೀನಿಗೆ ತೆರಳಿದ್ದಾಗ ಹುಲಿ ದಾಳಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ‌. ಬಸವಣ್ಣನ ದೇಹವನ್ನು ಅರ್ಧದಷ್ಟು ತಿಂದಿರುವ ಹುಲಿ ಉಳಿದ ಭಾಗವನ್ನು ಸಮೀಪದ ಜಮೀನಿನಲ್ಲಿ ಬಿಟ್ಟುಹೋಗಿದೆ ಎನ್ನಲಾಗಿದೆ.
ಈ ಹಿಂದೆ ಕೂಡ ಗ್ರಾಮದಲ್ಲಿರುವ ಹಸು, ಮೇಕೆ, ಕುರಿಗಳನ್ನು ಹುಲಿ ಹಿಡಿದುಕೊಂಡು ಹೋಗುತ್ತಿರುವ ಬಗ್ಗೆ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಇಲಾಖೆ ವಿಫಲವಾಗಿತ್ತು. ಈಗ ಹುಲಿ ದಾಳಿಗೆ ಮನುಷ್ಯನೇ ಬಲಿಯಾಗಿದ್ದಾನೆ, ಈ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣವಾಗಿದ್ದು, ಸಾವಿನ ಕಾರಣರಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು, ಇಲ್ಲವೇ ಹುಲಿ ಹಿಡಿಯುವ ಕೆಲಸಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net