ರಾಷ್ಟ್ರಪತಿಯ ಮಾಜಿ ADC ಯಿಂದ 180 ರೂ.ಕ್ಕೆ ‘ಸ್ಪೆಷಲ್ ಕಂಟೆಂಟ್’; ಮೇಜರ್ ರಿಷಬ್ ಸಂಬ್ಯಾಲ್ ಪರ-ವಿರೋಧ ಚರ್ಚೆಗೆ ಕಾರಣವಾದ ನಿರ್ಧಾರ! Major Rishabh Sambyal

ಮೇಜರ್ ರಿಷಬ್ ಸಂಬ್ಯಾಲ್, ಮಾಜಿ ಅಧ್ಯಕ್ಷರು - ಎಡಿಸಿ (ADC) ವಿಶೇಷ ವಿಷಯದ ಮೇಲಿನ ಚರ್ಚೆ
ಮೇಜರ್ ರಿಷಬ್ ಸಂಬ್ಯಾಲ್, ಮಾಜಿ ಅಧ್ಯಕ್ಷರು - ಎಡಿಸಿ (ADC) ವಿಶೇಷ ವಿಷಯದ ಮೇಲಿನ ಚರ್ಚೆ
Published on
ನವದೆಹಲಿ: ಕೆಲ ದಿನಗಳಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 'ಏಡ್-ಡಿ-ಕ್ಯಾಂಪ್' (ADC) ಆಗಿ ಸೇವೆ ಸಲ್ಲಿಸಿ ಸೇನೆಯಿಂದ ನಿವೃತ್ತರಾಗಿರುವ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ (Major Rishabh Sambyal) ಅವರ ಕುರಿತು ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ನಿವೃತ್ತ ಸೈನಿಕ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಸಿಕ 180 ಶುಲ್ಕದ ಚಂದಾದಾರಿಕೆ ಆರಂಭಿಸಿರುವುದು ಆನ್‌ಲೈನ್‌ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಮುನ್ನುಡಿ ಬರೆದಿದೆ.
ಟ್ವಿಟರ್ (ಎಕ್ಸ್​) ಬಳಕದಾರರೊಬ್ಬರು ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆ, ಈ ವಿಷಯ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಇದು ಸೈನ್ಯಕ್ಕೆ ಮಾಡಿದ ಅವಮಾನ ಮತ್ತು ನಮ್ಮ ಯೋಧರ ಘನತೆಗೆ ಕುಂದು ತರುವಂತಹದ್ದು ಎಂದು ಆ ಪೋಸ್ಟ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿತ್ತು. ಇದರ ಬೆನ್ನಲ್ಲೇ ನೆಟ್ಟಿಗರು ಎರಡು ಬಣಗಳಾಗಿ ಒಡೆದು ಹೋಗಿದ್ದಾರೆ.

ಯಾರು ಈ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್?

ವಿವಾದದ ಕೇಂದ್ರಬಿಂದುವಾಗಿರುವ ಮೇಜರ್ ಸಂಬ್ಯಾಲ್ ಅಕಾಲಿಕ ನಿವೃತ್ತಿ ಪಡೆಯುವ ಮುನ್ನ ಜಾಟ್ ರೆಜಿಮೆಂಟ್ ಮತ್ತು 4 ಪ್ಯಾರಾ ಸ್ಪೆಷಲ್ ಫೋರ್ಸಸ್‌ನಲ್ಲಿ ಬರೋಬ್ಬರಿ 12 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ರಾಷ್ಟ್ರಪತಿಯವರ ಎಡಿಸಿ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
ಸದ್ಯ ಅವರು ಆರಂಭಿಸಿರುವ ಈ ಪಾವತಿ ಚಂದಾದಾರಿಕೆಯಲ್ಲಿ ಏನೆಲ್ಲಾ ಸಿಗಲಿದೆ?
ನಿವೃತ್ತ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್ ಅವರ ಈ ಮಾಸಿಕ 180 ರೂಪಾಯಿಗಳ ಚಂದಾದಾರಿಕೆಯನ್ನು ಪಡೆದವರಿಗೆ ವಿಶೇಷವಾದ ಕಂಟೆಂಟ್‌ಗಳು, ವಿಶೇಷ ಬ್ಯಾಡ್ಜ್‌ಗಳು ಮತ್ತು ಪೋಸ್ಟ್‌ಗಳು, ಉಳಿದ ಹಿಂಬಾಲಕರಿಗಿಂತ ಮುಂಚಿತವಾಗಿ ರೀಲ್‌ಗಳನ್ನು ನೋಡಲು ಅವಕಾಶ ಹಾಗೂ ಏನನ್ನಾದರೂ ಕೇಳಿ (Ask-Me-Anything) ಸಂವಾದದ ಅವಕಾಶವನ್ನು ಈ ಚಂದಾದಾರಿಕೆ ನೀಡಲಿದೆ.
ವರದಿಗಳ ಪ್ರಕಾರ, ಸದ್ಯ ಈ ಚಂದಾದಾರಿಕೆಗೆ ಸುಮಾರು 1,200ಕ್ಕೂ ಹೆಚ್ಚು ಚಂದಾದಾರರಿದ್ದಾರೆ ಎಂದು ಹೇಳಲಾಗಿದೆ. ಆದರೆ, ಸೈನ್ಯದ ಸಮವಸ್ತ್ರ ಕಳಚಿದ ಬಳಿಕ ಮಾಜಿ ಸೈನಿಕರು ತಮ್ಮ ಸಾರ್ವಜನಿಕ ಬದುಕು ಮತ್ತು ಬ್ರ್ಯಾಂಡ್‌ ಅನ್ನು ಹೇಗೆ ಮ್ಯಾನೇಜ್ ಮಾಡಬೇಕು ಎಂಬ ಬಗ್ಗೆ ದೊಡ್ಡ ಮಟ್ಟದ ಡಿಬೆಟ್ ಈಗ ಶುರುವಾಗಿದೆ.

ಪರ-ವಿರೋಧ ಚರ್ಚೆಗಳು ಹೇಗಿವೆ?

ವಿರೋಧಿಸುವವರ ವಾದವೇನು?
ಸೈನ್ಯದ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬರು ತಮ್ಮ ಮಿಲಿಟರಿ ಅನುಭವ ಮತ್ತು ವೈಯಕ್ತಿಕ ಜೀವನವನ್ನು ಬಂಡವಾಳ ಮಾಡಿಕೊಂಡು ಹಣ ಸಂಪಾದಿಸುವುದು ಸರಿಯಲ್ಲ ಎಂಬುದು ಕೆಲವರ ವಾದ. ಸುಮ್ಮನೆ ನಿವೃತ್ತ ಜೀವನ ನಡೆಸಬಹುದಿತ್ತು, ಹೀಗೆಲ್ಲಾ ಹಣಕ್ಕಾಗಿ ಸೈನ್ಯದ ಅನುಭವ ಬಳಸುವುದು ಅಗೌರವದ ಕ್ರಮ ಎಂದು ಟೀಕಾಕಾರರು ಕಿಡಿಕಾರಿದ್ದಾರೆ. ಕೆಲವರು ಇದನ್ನು ಕೇವಲ ಅನುಯಾಯಿಗಳನ್ನು ಗಳಿಸುವ ಗಿಮಿಕ್ ಎಂದೂ ಜರಿದಿದ್ದಾರೆ.
ಬೆಂಬಲಿಸುವವರ ಧ್ವನಿ ಹೇಗಿದೆ?
ಮತ್ತೊಂದೆಡೆ, ಮಾಜಿ ಮೇಜರ್‌ಗೆ ಬೆಂಬಲವಾಗಿ ನಿಂತವರ ಸಂಖ್ಯೆಯೇ ಹೆಚ್ಚಿದೆ. ದೇಶಕ್ಕಾಗಿ 12 ವರ್ಷಗಳ ಕಾಲ ಕಠಿಣ ಸೇವೆ ಸಲ್ಲಿಸಿದ್ದಾರೆ. ಈಗ ನಿವೃತ್ತಿಯ ನಂತರ ತಮ್ಮ ಪ್ರತಿಭೆ ಮತ್ತು ಶ್ರಮದಿಂದ ಜೀವನೋಪಾಯ ಕಂಡುಕೊಳ್ಳುವುದರಲ್ಲಿ ತಪ್ಪೇನಿದೆ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇದು ಸೈನ್ಯದ ಘನತೆಗೆ ಮಸಿ ಬಳಿಯುತ್ತದೆ ಎನ್ನುವವರು ದೇಶಕ್ಕಾಗಿ ಒಂದೇ ಒಂದು ದಿನವಾದರೂ ಸೇವೆ ಸಲ್ಲಿಸಿದ್ದಾರೆಯೇ? ಎಂದು ಒಬ್ಬ ಬಳಕೆದಾರರು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ಅವರ ಬಳಿ ಈಗ ಯಾವುದೇ ಪಿಂಚಣಿ ಅಥವಾ ನಿವೃತ್ತಿ ಸೌಲಭ್ಯಗಳಿಲ್ಲ, ಅವರಿಗೂ ಒಂದು ಕುಟುಂಬವಿದೆ. ನಕಾರಾತ್ಮಕತೆ ಹರಡುವುದನ್ನು ಬಿಟ್ಟು ಅವರ ವೈಯಕ್ತಿಕ ಆಯ್ಕೆಯನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ.

ಮೇಜರ್ ಸಂಬ್ಯಾಲ್ ಪ್ರತಿಕ್ರಿಯೆ ಏನು?

ತಮ್ಮ ಮೇಲಿನ ಟೀಕೆಗಳಿಗೆ ತಕ್ಕ ತಿರುಗೇಟು ನೀಡಿರುವ ಮೇಜರ್ ರಿಷಬ್ ಸಿಂಗ್ ಸಂಬ್ಯಾಲ್, ಕೆಲವರು ಇದನ್ನು ಘನತೆಗೆ ಕುಂದು ಎಂದು ನೋಡುತ್ತಾರೆ. ಆದರೆ ಒಬ್ಬ ಸೈನಿಕನು ಇದನ್ನು ಸೇವೆ ಸಲ್ಲಿಸುವ ಮತ್ತೊಂದು ಮಾರ್ಗವೆಂದು ನೋಡುತ್ತಾನೆ" ಎಂದು ನೇರವಾಗಿ ಉತ್ತರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net