ಗೋವಾದಲ್ಲಿ ಕಾಂತಾರದ ದೈವ ಚಾವುಂಡಿಯ ಮಿಮಿಕ್ರಿ ಮಾಡಿದ್ದ ನಟ
- ದೈವದ ಮಿಮಿಕ್ರಿ ಮಾಡಿದ್ದ ರಣವೀರ್ ಸಿಂಗ್
- ಒಂದು ತಿಂಗಳೊಳಗೆ ದೇವಿಯ ದರ್ಶನ ಮಾಡಬೇಕೆಂದ ಹೈಕೋರ್ಟ್
- ಗೋವಾದಲ್ಲಿ ಕಾಂತಾರದ ದೈವ ಚಾವುಂಡಿಯ ಮಿಮಿಕ್ರಿ ಮಾಡಿದ್ದ ನಟ
ಬೆಂಗಳೂರು: ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರದ ಬಗ್ಗೆ ಅಪಮಾನಕ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಒಂದು ತಿಂಗಳಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಶನಿವಾರ (ಏ.25) ಕರ್ನಾಟಕ ಹೈಕೋರ್ಟ್ ಅರ್ಜಿ ವಿಲೇವಾರಿ ಮಾಡಿದೆ.
ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಕಾಂತಾರ ಚಾಪ್ಟರ್-1 ಚಿತ್ರದ ಚಾಮುಂಡಿ ದೈವಕ್ಕೆ ಅಪಮಾನ ಮಾಡಿದ ಆರೋಪದ ಸಂಬಂಧ ದಾಖಲಾಗಿರುವ ಖಾಸಗಿ ದೂರು ಮತ್ತು ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ನಡೆಸಿತು.
ಜನರ ಭಾವನೆಗೆ ನೋವುಂಟಾಗಿದೆ
ರಣವೀರ್ ಸಿಂಗ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್ ಪೂವಯ್ಯ, ರಣವೀರ್ ಬೇಷರತ್ ಕ್ಷಮೆಯಾಚಿಸಿರುವ ಅಫಿಡವಿಟ್ ಹಾಕಿದ್ದೇವೆ. ದೇವಸ್ಥಾನಕ್ಕೆ ರಣವೀರ್ ಸಿಂಗ್ ಭೇಟಿ ನೀಡುತ್ತಾರೆ ಎಂದು ಹೇಳಲಾಗಿದೆ. ದಿನಾಂಕ ಹಾಕಿಲ್ಲ, ಪೀಠವೇ ನಿರ್ದಿಷ್ಟ ದಿನ ನಿಗದಿ ಮಾಡಬಹುದು. ಅಂದು ರಣವೀರ್ ದೇವಾಲಯಕ್ಕೆ ಹೋಗಲಿದ್ದಾರೆ ಎಂದರು.
ಇದಕ್ಕೆ ದೂರುದಾರರ ಪರ ವಕೀಲ ಸಿ.ಜಿ. ಮಲೆಯಾಳ್, ಪೂವಯ್ಯ ಅವರಿಗೆ ಇದೊಂದು ಪ್ರಕರಣವಷ್ಟೆ. ನಮಗೆ ಇದು ನಂಬಿಕೆಯ ವಿಚಾರ ಎಂದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪೀಠವು ಇದೇ ಕಾರಣಕ್ಕೆ ಪ್ರಕರಣಕ್ಕೆ ಇದುವರೆಗೂ ತಡೆ ನೀಡಿಲ್ಲ ಎಂದಿತು.
ನಾಲ್ಕು ವಾರದಲ್ಲಿ ಭೇಟಿ ನೀಡಬೇಕು
ಆಗ ಸಿ.ಜಿ, ಪ್ರತಿಯೊಂದು ಪದಕ್ಕೂ ತನ್ನದೇ ಆದ ತೂಕವಿದೆ. ಪದಗಳು ಪ್ರಭಾವ ಮತ್ತು ಪರಿಣಾಮಗಳನ್ನು ಉಂಟು ಮಾಡುತ್ತವೆ. ಇದೇ ವೇಳೆ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು ಎಂದು ರಣವೀರ್ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಸಮಯ ಬಂದಾಗ ಎಂದು ಹೇಳಿದ್ದಾರೆ.
ಅದು 30, 40 ದಿನವಾಗಬಹುದು. ಒಂದು ವರ್ಷ, ಹತ್ತು ವರ್ಷ ಆಗಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಇದಕ್ಕೆ ಪೀಠವು ನಾಲ್ಕು ವಾರಗಳಲ್ಲಿ ರಣವೀರ್ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗುವುದು ಎಂದರು.
ಆಗ ಸಿ.ಜಿ, ಇತರೆ ಸೆಲೆಬ್ರಿಟಿಗಳು ಇದನ್ನು ಲಘುವಾಗಿ ಪರಿಗಣಿಸಬಾರದು. ಕಠಿಣ ಎಚ್ಚರಿಕೆಯನ್ನು ನ್ಯಾಯಾಲಯ ನೀಡಬೇಕು ಎಂದರು. ಇದಕ್ಕೆ ಪೀಠವು ಖಂಡಿತವಾಗಿಯೂ ಎಚ್ಚರಿಸಲಾಗುವುದು. ಕಾನೂನಿನ ಅನ್ವಯ ಉತ್ತರಿಸಬೇಕು ಎಂದಾದರೆ ಎಚ್ಚರಿಸುವ ಪರಿಸ್ಥಿತಿ ನಿರ್ಮಾಣವೇ ಆಗಲ್ಲ ಎಂದಿತು.
ಈ ನಡುವೆ, ಸಜನ್ ಪೂವಯ್ಯ, ಈ ವಾದದಲ್ಲಿ ನಾವು ಭಾಗಿಯಾಗಲ್ಲ. ಜನರ ಭಾವನೆಗಳು ನಮಗೆ ಅರ್ಥವಾಗುತ್ತವೆ. ಅದೇ ಕಾರಣಕ್ಕಾಗಿ ಪ್ರಕರಣದ ಮೆರಿಟ್ ಮೇಲೆ ವಾದಿಸಲಿಲ್ಲ. ಪ್ರಕರಣದ ಸೂಕ್ಷ್ಮತೆ ಅರ್ಥವಾಗಿದ್ದು, ರಣವೀರ್ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು.
ಜನರ ಭಾವನೆಗಳನ್ನು ಕೇಳಿಯಾಗಿದೆ. ಕಾನೂನಾತ್ಮಕವಾಗಿ ಉತ್ತರಿಸಬೇಕು ಎಂದಾದರೆ ಸಾಕಷ್ಟು ತೀರ್ಪುಗಳಿವೆ. ನಾಲ್ಕು ವಾರದಲ್ಲಿ ರಣವೀರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಬೇಕು ನ್ಯಾಯಪೀಠ ಹೇಳಿತು. ಎರಡು ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಪೀಠವು ರಣವೀರ್ ಸಿಂಗ್ ಅವರ ಅಫಿಡವಿಟ್ ಸ್ವೀಕರಿಸಿ ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು.
ಪ್ರಕರಣದ ಹಿನ್ನೆಲೆ
ಗೋವಾದಲ್ಲಿ ಕಳೆದ 2025ರ ನವೆಂಬರ್ 28ರಂದು ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್, ಕಾಂತಾರ ಚಾಪ್ಟರ್-1 ಕುರಿತು ಮಾತನಾಡಿದ್ದರು. ಈ ವೇಳೆ ಚಿತ್ರದ ಕರಾವಳಿ ಕರ್ನಾಟಕ ಭಾಗದ ಪಂಜುರ್ಲಿ/ಗುಳಿಗ ದೈವದ ದೈವಿಕ ಅಭಿವ್ಯಕ್ತಿಗಳನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಅನುಕರಿಸಿದ್ದಾರೆ.
ಇನ್ನೂ ಚಾವುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಇದರಿಂದ ಚಾವುಂಡಿ ದೈವದ ಭಕ್ತರ ಮನಸ್ಸಿಗೆ ನೋವಾಗಿದೆ. ಆ ಮೂಲಕ ರಣವೀರ್, ಲಕ್ಷಾಂತರ ಭಕ್ತರ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮಾಡಿದ್ದಾರೆ.
ಹೀಗಾಗಿ, ರಣವೀರ್ ಸಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಪ್ರಶಾಂತ್ ಮೆಥಲ್ ಎಂಬುವವರು 1ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯವು ತನಿಖೆ ನಡೆಸುವಂತೆ 2026ರ ಜನವರಿ 23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಬಿಎನ್‌ಎಸ್ ಸೆಕ್ಷನ್ 196, 299 ಮತ್ತು 302 ಅಡಿಯಲ್ಲಿ ವಿಭಿನ್ನ ಗುಂಪುಗಳ ನಡುವೆ ದ್ವೇಷ ಭಾವನೆ ಪ್ರಚೋದಿಸಿದ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು,(ಏಜನ್ಸೀಸ್).