ದೆಹಲಿ ಪೊಲೀಸರು ನನ್ನನ್ನು ಅಪಹರಿಸಿದ್ದಾರೆಂದು ಜುನೈದ್ ಆರೋಪ
- ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರಿಗೆ ಉಚಿತ ಆಹಾರ ನೀಡುತ್ತಿದ್ದ ಜುನೈದ್ ಬಂಧನ
- ದೆಹಲಿ ಪೊಲೀಸರು ನನ್ನನ್ನು ಅಪಹರಿಸಿದ್ದಾರೆಂದು ಜುನೈದ್ ಆರೋಪ
- ನನ್ನ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ ಎಂದ ಜುನೈದ್
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದಿದ್ದ ಪ್ರತಿಭಟನೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಪ್ರತಿಭಟನಾಕಾರರಿಗೆ ಉಚಿತ ಆಹಾರ ಮತ್ತು ನೀರು ವಿತರಿಸುತ್ತಿದ್ದ ಮೊಹಮ್ಮದ್ ಜುನೈದ್ (Junaid Arrest) ನನ್ನು ದೆಹಲಿ ಪೊಲೀಸರು ಎಂದು ಹೇಳಿಕೊಂಡ ಕೆಲವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಅಪಹರಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಏನಿದು ಘಟನೆ? ಜುನೈದ್ ಆರೋಪಗಳೇನು?
ಘಾಜಿಯಾಬಾದ್ ನಿವಾಸಿ ಮೊಹಮ್ಮದ್ ಜುನೈದ್ ಪ್ರಕಾರ, ಜುಲೈ 24ರ ರಾತ್ರಿ ಸುಮಾರು 10:50ರ ಸುಮಾರಿಗೆ ಅವರಿಗೆ ನಾಯಿಯೊಂದು ಕಚ್ಚಿದೆ. ಚಿಕಿತ್ಸೆಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ತೆರಳಿ, ರಾತ್ರಿ 12:10ರ ವೇಳೆಗೆ ವಾಪಸ್ ಆಟೋದಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ.
ನಾನು 50-60 ಮೀಟರ್ ದೂರ ಹೋಗುತ್ತಿದ್ದಂತೆ ಕೆಲವು ವಾಹನಗಳು ನಮ್ಮನ್ನು ತಡೆದವು. ನಮ್ಮನ್ನು ಕೊಲ್ಲಲು ಬಂದಿದ್ದಾರೆ ಎಂದೇ ನಾವು ಭಯಪಟ್ಟಿದ್ದೆವು. ಆದರೆ ಅವರು ತಾವು ದೆಹಲಿ ಪೊಲೀಸರು ಎಂದು ಹೇಳಿಕೊಂಡರು. ನಂತರ ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲಿಗೋ ಕರೆದುಕೊಂಡು ಹೋದರು. ಇಡೀ ರಾತ್ರಿ ನಮ್ಮನ್ನು ಅಲ್ಲಿಯೇ ಕೂರಿಸಿದ್ದರು ಎಂದು ಜುನೈದ್ ಅಳಲು ತೋಡಿಕೊಂಡಿದ್ದಾರೆ.
ಮರುದಿನ ಬೆಳಿಗ್ಗೆ ಅಧಿಕಾರಿಗಳು ತಮ್ಮ ಬಳಿ, ಪ್ರತಿಭಟನೆಗೆ ಹಣಕಾಸು ಎಲ್ಲಿಂದ ಬರುತ್ತದೆ? ಇಷ್ಟೊಂದು ಆಹಾರವನ್ನು ಹೇಗೆ ವಿತರಿಸುತ್ತಿದ್ದೀರಿ? ಎಂದು ಪ್ರಶ್ನಿಸಿದರು.ಈ ವಿಚಾರಣೆ ಬಳಿಕ ಅವರನ್ನು ಉತ್ತರಾಖಂಡದ ಮಸ್ಸೂರಿಯಲ್ಲಿ ಬಿಡಲಾಗಿದ್ದು, ಅಲ್ಲಿಂದ ಅವರು ಕ್ಯಾಬ್ ಮೂಲಕ ದೆಹಲಿಗೆ ವಾಪಸ್ ಬಂದಿದ್ದಾರೆ.
ಕುಟುಂಬದ ಮೇಲೆ ಪೊಲೀಸರ ಕಣ್ಣು?
ಮನೆಯವರ ಮೇಲೂ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಘಾಜಿಯಾಬಾದ್‌ನ ಮಸೂರಿ ಪೊಲೀಸ್ ಠಾಣೆಯ ಪೊಲೀಸರು ತಮ್ಮ ಮನೆಗೆ ನುಗ್ಗಿ ಶೋಧ ನಡೆಸಿದ್ದಾರೆ. ತಂದೆ ಮುಸ್ತಫಾ ಅವರನ್ನು ಬಲವಂತವಾಗಿ ಕರೆದೊಯ್ದು, ಬ್ಯಾಂಕ್ ಪಾಸ್‌ಬುಕ್ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ಕಿತ್ತುಕೊಂಡಿದ್ದಾರೆ ಎಂದು ಜುನೈದ್ ಕುಟುಂಬ ಆರೋಪಿಸಿದೆ.
ಆದರೆ, ಈ ಆರೋಪವನ್ನು ಗಾಜಿಯಾಬಾದ್ ಪೊಲೀಸರು ತಳ್ಳಿಹಾಕಿದ್ದಾರೆ. ಇದು ಸಾಮಾನ್ಯ ವಿಚಾರಣೆಯಷ್ಟೇ. ಮುಸ್ತಫಾ ಅವರನ್ನು ಕೇವಲ ಪ್ರಶ್ನೆಗಾಗಿ ಕರೆಸಲಾಗಿತ್ತು ಮತ್ತು ಯಾವುದೇ ಬಂಧನ ನಡೆದಿಲ್ಲ ಎಂದು ಡಿಸಿಪಿ ಸುರೇಂದ್ರನಾಥ್ ತಿವಾರಿ ಸ್ಪಷ್ಟಪಡಿಸಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊವೊಂದನ್ನೂ ಬಿಡುಗಡೆ ಮಾಡಿದ್ದಾರೆ.
ಇಮ್ರಾನ್ ಪ್ರತಾಪ್‌ಗಢಿ ಭೇಟಿ; ಸಂಸತ್ತಿನಲ್ಲಿ ಧ್ವನಿ ಎತ್ತುವ ಭರವಸೆ!
ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್‌ಗಢಿ ಜುನೈದ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಜುನೈದ್ ಕಣ್ಣೀರಿಡುತ್ತಿರುವ ವಿಡಿಯೋ ನೋಡಿ ತಮಗೆ ತೀವ್ರ ನೋವಾಗಿದೆ ಎಂದಿರುವ ಅವರು, ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ನಿಮ್ಮ ಮೇಲಿನ ದೌರ್ಜನ್ಯದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವ ಮೂಲಕ ಹೋರಾಡುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.
ಮತ್ತೊಂದೆಡೆ, ಸಿಜೆಪಿ (ಕಾಕ್ರೋಚ್ ಜನತಾ ಪಕ್ಷ) ವಕ್ತಾರೆ ರತ್ನಾ ಸಿಂಗ್, ಜುನೈದ್ ಸುರಕ್ಷಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಜುನೈದ್ ಕುರಿತಾಗಿ ಹಬ್ಬಿರುವ ಎಲ್ಲಾ ವದಂತಿಗಳು ಸುಳ್ಳು ಎಂದಿರುವ ಅವರು, ಸಂಘಟನೆಯು ಜುನೈದ್‌ಗೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ನೆರವು ನೀಡುತ್ತಿದೆ ಮತ್ತು ಅವರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್).