| ಬೆಂಕಿ ಬಸಣ್ಣ ನ್ಯೂಯಾರ್ಕ್
ನ್ಯೂಯಾರ್ಕ್: ಏಪ್ರಿಲ್ 10ರಿಂದ 24ರ ವರೆಗೆ ಅಮೆರಿಕದಲ್ಲಿ 'ಅಂತಾರಾಷ್ಟ್ರೀಯ ಕನ್ನಡ ನಾಟಕೋತ್ಸವ' ನಡೆಯಲಿದೆ. ನಮ್ಮೇರಿಕ ಸಂಸ್ಥೆ ಇದೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಿರುವ ಈ ನಾಟಕೋತ್ಸವದಲ್ಲಿ ಅಮೆರಿಕ, ಜರ್ಮನಿ, ಇಂಗ್ಲೆಂಡ್, ನೆದರ್ಲ್ಯಾಂಡ್ ಮುಂತಾದ ದೇಶಗಳ ಅನಿವಾಸಿ ಕನ್ನಡ ನಾಟಕ ತಂಡಗಳ ಜತೆಗೆ ಕರ್ನಾಟಕದ ನಾಟಕ ತಂಡಗಳು ಪಾಲ್ಗೊಳ್ಳುವ ಮೂಲಕ ವಿಶ್ವ ಕನ್ನಡಿಗರನ್ನು ಮನರಂಜಿಸಲಿವೆ.
ಅಂತರ್ಜಾಲದ ಮೂಲಕ ನಡೆಯುವ ಈ ನಾಟಕೋತ್ಸವದಲ್ಲಿ ಟಿ.ಪಿ.ಕೈಲಾಸಂ, ಬೀಚಿ, ಚಂಪಾ, ದುಂಡಿರಾಜ್, ಪರ್ವತವಾಣಿ, ಗುಂಡೂರಾವ್, ಅಂತೋನ್ ಚೆಕೋವ್, ಸುರೇಂದ್ರನಾಥ್ ವಿರಚಿತ ನಾಟಕಗಳು ಪ್ರಸಾರವಾಗಲಿವೆ. ಮತ್ತೊಂದು ವಿಶೇಷತೆ ಎಂದರೆ ಈ ನಾಟಕೋತ್ಸವದಲ್ಲಿ ನಾವಿಕ ಸಂಸ್ಥೆಯ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ಅವರ ನಿರ್ದೇಶನದ, ರಂಗಧ್ವನಿ ತಂಡ ಪ್ರಸ್ತುತ ಪಡಿಸುವ "ಸಂಕ್ರಮಣ" ನಾಟಕವೂ ಪ್ರದರ್ಶನಗೊಳ್ಳಲಿದೆ. ಇದನ್ನೂ ಓದಿರಿ ಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ
ಅಂತಾರಾಷ್ಟ್ರೀಯ ಕನ್ನಡ ನಾಟಕೋತ್ಸವದ ಮಹಾನ್ ಕನಸು ಕಂಡು ಅದನ್ನು ಸಾಕಾರ ಮಾಡುತ್ತಿರುವುದು ಬೆಂಗಳೂರು ಮೂಲದ, ನ್ಯೂಜೆರ್ಸಿಯಲ್ಲಿ ವಾಸವಾಗಿರುವ ನಾಟಕಕಾರ, ನಿರ್ದೇಶಕ ಹಾಗೂ ಅಮೆರಿಕದ ನಮ್ಮೆರಿಕ ಸಂಸ್ಥೆಯ ಸಂಸ್ಥಾಪಕ ಆನಂದ್ ರಾವ್. ಈ ನಾಟಕೋತ್ಸವದಲ್ಲಿ ತೀರ್ಪುಗಾರರಾಗಿ ಶ್ರೀನಿವಾಸ ಪ್ರಭು, ಸುನೇತ್ರಾ ಪಂಡಿತ್, ಚೈತನ್ಯ ಕೆ.ಎಂ., ಚಂಪಾಶೆಟ್ಟಿ ಮತ್ತು ಡಾಕ್ಟರ್ ವಿದ್ಯಾ ಮಳವಳ್ಳಿ ಪಾಲ್ಗೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಕನ್ನಡ ನಾಟಕೋತ್ಸವ ಆಯೋಜನಾ ಸಮಿತಿಯಲ್ಲಿ ಆನಂದರಾವ್, ಮಹೇಶ್ ದತ್ತಾನಿ, ರಾಜ್ ಪಾಟೀಲ್, ರತೀ ಅಪನಾ, ಸ್ವಾತಿ ಶೇಖರ್ಆನಂದ್, ಸೋಮಶೇಖರ್, ಬೆಂಕಿ ಬಸಣ್ಣ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಅಂತರ್ಜಾಲದ ಮೂಲಕ ನಡೆಯುವ ಈ ಅಂತಾರಾಷ್ಟ್ರೀಯ ಕನ್ನಡ ನಾಟಕ ಉತ್ಸವವನ್ನು ವಿಶ್ವದ ಯಾವ ಮೂಲೆಯಲ್ಲಿದ್ದರೂ ವೀಕ್ಷಿಸಬಹುದು. ಹೆಚ್ಚಿನ ವಿವರಗಳಿಗಾಗಿ ಮತ್ತು ಟಿಕೆಟ್ಗಳಿಗಾಗಿ www.nammerica.com ಗೆ ಭೇಟಿ ಕೊಡಿ.