ನ್ಯೂಸ್

ಪೊಲೀಸರನ್ನು ಕಂಡು ಪರಾರಿ ಆಗುವಾಗ ಫ್ಲೈಓವರ್​ನಿಂದ ಕೆಳಗೆ ಬಿದ್ದ ಬೈಕ್​: ಓರ್ವ ಸಾವು, ಸ್ನೇಹಿತನ ಸ್ಥಿತಿ ಗಂಭೀರ

ಮುಂಬೈ: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನೊಬ್ಬ ಬೈಕ್​ ಸಮೇತ ಫ್ಲೈಓವರ್​ನಿಂದ ಕೆಳಗೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನ ಬಾಂದ್ರಾದಲ್ಲಿ ಬುಧವಾರ 4 ಗಂಟೆಗೆ ನಡೆದಿದೆ. ಇನ್ನೊರ್ವ ಹುಡುಗ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಮೃತನನ್ನು ಅಬ್ದುಲ್​ ಅಹಾದ್​ ಶೇಕ್​ ಎಂದು ಗುರುತಿಸಲಾಗಿದೆ. 17 ವರ್ಷದ ಸ್ನೇಹಿತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕೂಡ ಹೆಲ್ಮೆಟ್​ ಧರಿಸಿರಲಿಲ್ಲ ಮತ್ತು ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಸೇತುವೆಯಲ್ಲಿ ಪೊಲೀಸ್​ ಸಿಬ್ಬಂದಿಯನ್ನು ನೋಡಿದ ಯುವಕ ತಕ್ಷಣ ಬೈಕ್​ ಯೂಟರ್ನ್​ ಹೊಡೆದಿದ್ದಾರೆ. ಈ ವೇಳೆ ಬೈಕ್​ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಡಿಕ್ಕಿ ಹೊಡೆದು 40 ಆಳದ ಫ್ಲೈಓವರ್​ನಿಂದ ಕೆಳಗೆ ಬಿದ್ದಿದೆ. ನಿನ್ನೆ ಸಂಜೆ ರಂಗ ಪಂಚಮಿ ಆಚರಣೆ ಮತ್ತು ಇಸ್ಲಾಮಿಕ್ ರಜಾದಿನ "ಬದಿ ರಾತ್" ಹಿನ್ನೆಲೆಯಲ್ಲಿ ಬೈಕ್ ಸವಾರರ ಮೇಲೆ ನಿಗಾವಹಿಸಲು ಪೊಲೀಸರು ಪಶ್ಚಿಮ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸಮುದ್ರ ಸಂಪರ್ಕದ ದಿಕ್ಕಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದರು.

ಬುಧವಾರ ಬೆಳಗ್ಗೆ ಯುವಕರಿಬ್ಬರು ಫ್ಲೈವರ್​ನಲ್ಲಿ ಬರುವಾಗ ಪೊಲೀಸರನ್ನು ನೋಡಿ ಹೆದರಿ ತಪ್ಪಿಸಿಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್​ ಸವಾರ ಅಪ್ರಾಪ್ತನಾಗಿದ್ದರಿಂದ ಪೊಲೀಸರಿಗೆ ಹೆದರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆತನ ತಲೆಗೆ ಏಟು ಬಿದ್ದಿದ್ದು, ಮುಂಬೈನ ಭಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಕಸ್ಮಿಕ ಸಾವು ಪ್ರಕರಣ ದಾಖಲು

ಬಾಂದ್ರಾ ಪೊಲೀಸರು ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹುಡುಗರ ಬಳಿ ಸರಿಯಾದ ಲೈಸೆನ್ಸ್​ ಸಹ ಇರಲಿಲ್ಲ. ಅವರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಸುಳಿವು ನೀಡಿದ್ದಾರೆ. (ಏಜೆನ್ಸೀಸ್​)