ನ್ಯೂಸ್

ಅಮ್ಮ ದಯವಿಟ್ಟು ಇದನ್ನು ಫ್ರೆಂಡ್ಸ್​ಗೆ ಕೊಟ್ಬಿಡು: ಪತ್ರ ಬರೆದಿಟ್ಟು 23ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ!

ಗಾಚಿಬೌಲಿ: ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸು... ಈ ಪತ್ರವನ್ನು ನನ್ನ ಫ್ರೆಂಡ್ಸ್​ಗೆ ಕೊಟ್ಟು ಬಿಡು ಎಂದು ಡೆತ್​ನೋಟ್​ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್​ ಉಪನಗರ ಗಾಚಿಬೌಲಿಯಲ್ಲಿ ನಡೆದಿದೆ.

ಇಶಾ ರಂಜನ್​ (17) ಮೃತ ವಿದ್ಯಾರ್ಥಿನಿ. ಈಕೆ ಗೌಚಿಬೌಲಿಯ ನಾನಕ್ರಂಗುಡದ ಪ್ರತಿಷ್ಠಿತ ಮಿನಿಸ್ಟರ್​ ಕ್ಲೆಸ್ಟಿಯಾ ಅಪಾರ್ಟ್​ಮೆಂಟ್​ನ ಎಫ್​ ಬ್ಲಾಕ್​ನಲ್ಲಿ ತಾಯಿ ಮತ್ತು ಅಜ್ಜಿಯೊಂದಿಗೆ ನೆಲೆಸಿದ್ದಳು. ಅಪಾರ್ಟ್​ಮೆಂಟ್​ನ 23ನೇ ಮಹಡಿಯಿಂದ ಜಿಗಿದು ಇಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇಶಾ, ಜುಬಿಲಿ ಹಿಲ್ಸ್​ನ ಶ್ರೀಚೈತನ್ಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಸೋಮವಾರ ಸಂಜೆ 4.45ರ ಸುಮಾರಿಗೆ ತನ್ನ ಚಪ್ಪಲಿಗಳನ್ನು ಬಾಲ್ಕನಿಯಲ್ಲಿ ಬಿಟ್ಟು ಸ್ಟೂಲ್​ ಮುಖಾಂತರ ಕಟ್ಟಡ ಮೇಲೇರಿ ಜಿಗಿದು ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಕಟ್ಟಡದಿಂದ ಕೆಳಗೆ ಬೀಳುವುದನ್ನು ನೋಡಿ ವಾಚ್​ಮೆನ್​ ಪೊಲೀಸರಿಗೆ ಮಾಹಿತಿ ನೀಡಿದರು.

ಇನ್ನು ಇಶಾ ಅವರ ತಂದೆ ಸಿಕೇಸ್​ ರಂಜನ್​, ಪತ್ನಿ ಮೌನಿಕಾ ಸಿನ್ಹಾರಿಂದ 2015ರಲ್ಲೇ ಡಿವೋರ್ಸ್​ ಪಡೆದುಕೊಂಡಿದ್ದಾರೆ. ಸಿಕೇಶ್​ ಅಮೆರಿಕದಲ್ಲಿದ್ದು, ಮೌನಿಕ್​ ಸಿನ್ಹಾ ತನ್ನ ಮಗಳೊಂದಿಗೆ ಗೌಚಿಬೌಲಿಯಲ್ಲಿ ಉಳಿದುಕೊಂಡಿದ್ದರು. ಇದರ ನಡುವೆ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಇಶಾ ರಂಜನ್, ಕೆಲವು ತಿಂಗಳ ಹಿಂದೆ ನಿದ್ರೆ ಮಾತ್ರೆಗಳನ್ನ ಸೇವಿಸಿ, ಬ್ಲೇಡ್​ನಿಂದ ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ​

ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ಇಶಾ, ಅದಕ್ಕೂ ಮುನ್ನ ಒಟ್ಟು 7 ಪತ್ರಗಳನ್ನು ಫ್ರೆಂಡ್ಸ್​ಗೆ ಬರೆದಿದ್ದಾಳೆ. ತಾಯಿಗೆ ಡೆತ್​ನೋಟ್​ ಬರೆದಿರುವ ಇಶಾ, ಅಮ್ಮ ನನ್ನನ್ನು ಕ್ಷಮಿಸು. ದಯವಿಟ್ಟು ನನ್ನ ಫ್ರೆಂಡ್ಸ್​ಗೆ ಈ ಪತ್ರಗಳನ್ನು ತಲುಪಿಸು ಎಂದು ಕೇಳಿಕೊಂಡಿದ್ದಾಳೆ. ಸದ್ಯ ಪೊಲೀಸರು ಡೆತ್​ನೋಟ್​ನೊಂದಿಗೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಶಾ ಈ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಸದ್ಯ ಆಕೆಯ ಮೃತದೇಹವನ್ನು ಒಸ್ಮಾನಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)