ಮುಂಬೈ: ಈತನಿಗೆ 63 ವರ್ಷ, ಟಿಪ್-ಟಾಪ್ ಲೈಫ್ ಸ್ಟೈಲ್, ಹೈಕ್ಲಾಸ್ ಇಂಗ್ಲಿಷ್. ಇವನಿಗಿರುವ ಅಲಿಯಾಸ್ ಹೆಸರುಗಳೇ ಅನೇಕ. ಒಂದು ಡಜನ್ಗೂ ಹೆಚ್ಚು ಹೆಸರುಗಳನ್ನು ಹೊಂದಿರುವ ಈತನ ಬಳಿ ಇರುವ ನಕಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ಗಳೆಷ್ಟು ಗೊತ್ತೇ? ಬರೋಬ್ಬರಿ 58. ಅಷ್ಟಕ್ಕೂ ಈತನ ಟಾರ್ಗೆಟ್ ಏನಿದ್ದರೂ ಸ್ಟಾರ್ ಹೋಟೆಲ್ಗಳೇ. ಸ್ಟಾರ್ ಅಥವಾ ಡಿಲಕ್ಸ್ ಹೋಟೆಲ್ಗಳಿಗೆ ಗುರಿ ಇಟ್ಟು ಬಾಣ ಬಿಟ್ಟನೆಂದರೆ ಹೊಟೇಲ್ನವರು 'ಬಿಲ್' ಎತ್ತಿಕೊಳ್ಳುವುದರಲ್ಲಿ ಇವನು ಪರಾರಿ ಆಗಿರುತ್ತಾನೆ.
ಕಳೆದ ಕೆಲ ವರ್ಷಗಳಿಂದ ಮೋಸ್ಟ್ ವಾಂಟೆಡ್ ಆಗಿದ್ದ ಈತ ಕೊನೆಗೂ ಮುಂಬೈ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದೇಶಾದ್ಯಂತ ಹಲವು ಹೋಟೆಲ್ಗಳವರಿಗೆ ಮೋಸ ಮಾಡಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಈತ ಕೊನೆಗೆ ಮುಂಬೈನ ಹೋಟೆಲೊಂದರಲ್ಲಿ ಮೋಸ ಮಾಡಿ ಅಲ್ಲಿನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ತಮಿಳುನಾಡು ಮೂಲದ ಈತನ ಹೆಸರು ವಿನ್ಸೆಂಟ್ ಜಾನ್. ಮುಂಬೈನ ಹೋಟೆಲ್ ರಿಗೆಂಜಾದವರಿಗೆ ಮೋಸ ಮಾಡಿದ್ದ ಈತ, ಅವರು ಕೊಟ್ಟ ದೂರಿನ ಮೇರೆಗೆ ಸಿಕ್ಕಿಬಿದ್ದಿದ್ದಾನೆ. ಡಿ. 13ರಂದು ಹೋಟೆಲ್ನವರು ದೂರು ನೀಡಿದ್ದು, ಡಿ. 15ರಂದು ಪೊಲೀಸ್ನವರು ಈತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಕಾರ್ಪೋರೇಟ್ ಉದ್ಯೋಗಿಯ ಥರ ಹೈಫೈ ಆಗಿ ಹೋಟೆಲ್ಗೆ ಎಂಟ್ರಿ ಕೊಡುವ ಈತ ಬಿಸಿನೆಸ್ ಮೀಟ್ ಎಂದು ಹೋಟೆಲ್ ಬುಕ್ ಮಾಡಿ, ಭಾರಿ ಬಿಲ್ ಬರುವಂತೆ ಊಟಕ್ಕೂ ಆರ್ಡರ್ ಮಾಡುತ್ತಿದ್ದ. ಕೊನೆಗೆ ಹೋಟೆಲ್ನಲ್ಲಿರುವ ದುಬಾರಿ ಮದ್ಯ, ವಸ್ತುಗಳನ್ನು ಎತ್ತಿಕೊಂಡು ಪರಾರಿಯಾಗುತ್ತಿದ್ದ. ಮುಂಬೈನ ಹೋಟೆಲ್ ರಿಗೆಂಜಾದಲ್ಲಿ ಬಿಜಿನೆಸ್ ಮೀಟ್ ಇದೆ ಎಂದು ಒಂದು ಡಜನ್ ಗೆಸ್ಟ್ಗಳಿಗೆ ಬ್ಯಾಂಕ್ವೆಟ್ ಹಾಲ್ ಬುಕ್ ಮಾಡಿದ್ದ. ಮಾತ್ರವಲ್ಲ ದುಬಾರಿ ಪಾನೀಯ ಹಾಗೂ ಊಟವನ್ನೂ ಆರ್ಡರ್ ಮಾಡಿದ್ದ. ಪ್ರೆಸೆಂಟೇಷನ್ ನೀಡಲು ಬೇಕು ಎಂದು ಹೋಟೆಲ್ನವರಿಂದಲೇ ಲ್ಯಾಪ್ಟಾಪ್ ಪಡೆದಿದ್ದ. ಆದರೆ ಎಷ್ಟು ಹೊತ್ತಾದರೂ ಬುಕ್ ಮಾಡಿದ್ದ ಟೈಮ್ಗೆ ಗೆಸ್ಟ್ಗಳು ಬರದಿದ್ದಾಗ ಈತನಿದ್ದ ರೂಮ್ಗೆ ಹೋಗಿ ನೋಡಿದರೆ ಲ್ಯಾಪ್ಟಾಪ್ ಸಹಿತ ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ. ತಾಂತ್ರಿಕ ಸುಳಿವಿನ ಮೇರೆಗೆ ಈತನ ಜಾಡು ಹಿಡಿದು ಥಾಣೆಯ ಒಂದು ಪ್ರದೇಶದಲ್ಲಿ ಅಡಗಿಕೊಂಡಿದ್ದನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನ ತೂತುಕುಡಿ ಜಿಲ್ಲೆ ಕಿಲ ಉರುಡ್ಡಿ ಎಂಬಲ್ಲಿನ ಈತ ಹಲವು ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದುದಲ್ಲದೆ ಆ ಹೆಸರುಗಳನ್ನು ಬಳಸಿ ಹಲವಾರು ಪ್ಯಾನ್ ಹಾಗೂ ಆಧಾರ್ ಕಾರ್ಡ್ಗಳನ್ನು ಪಡೆದಿದ್ದ. ದೇಶಾದ್ಯಂತ ಈತನ ವಿರುದ್ಧ 187 ಪ್ರಕರಣಗಳು ದಾಖಲಾಗಿದ್ದು, ಬಹಳ ದಿನಗಳಿಂದ ಪೊಲೀಸರು ಈತನ ಶೋಧದಲ್ಲಿದ್ದರು. ಈಗ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ಸೇರಿ ಬೇರೆ ಬೇರೆ ರಾಜ್ಯಗಳ ನಾನಾ ಸ್ಟಾರ್ ಹೋಟೆಲ್ಗಳಲ್ಲಿ ಇದೇ ರೀತಿ ವಂಚನೆ ನಡೆಸಿದ್ದ. ಅಲ್ಲಿಂದ ಕದ್ದಿದ್ದ ದುಬಾರಿ ವಸ್ತುಗಳನ್ನು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಥಾಣೆ ನ್ಯಾಯಾಲಯ ಶುಕ್ರವಾರದವರೆಗೆ ಈತನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)