Money In Car Stepney : ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಗೊತ್ತೇ ಇದೆ. ಈಗಾಗಲೇ ಮೊದಲ ಹಂತದ ಮತದಾನ ನಡೆದಿದ್ದು, ಎರಡನೇ ಹಂತದ ಮತದಾನ ಬಾಕಿ ಇದೆ. ಹೀಗಾಗಿ ಚುನಾವಣಾ ಅಧಿಕಾರಿಗಳ ತಪಾಸಣೆ ಮುಂದುವರಿದಿದೆ. ಇದೇ ಸಮಯದಲ್ಲಿ ಕಾರಿನ ಸ್ಟೆಪ್ನಿಯಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ 25 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿರುವ ಘಟನೆ ಜಾರ್ಖಂಡ್-ಬಿಹಾರ ಗಡಿಯಲ್ಲಿರುವ ಬುದ್ವಾಡಿಹ್ (ಸರೌನ್) ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.
ಗುರುವಾರ ವಾಹನ ತಪಾಸಣೆ ವೇಳೆ ಅಧಿಕಾರಿಗಳ ತಂಡ ಇಷ್ಟೊಂದು ಮೊತ್ತವನ್ನು ವಶಪಡಿಸಿಕೊಂಡಿದೆ. ಒಟ್ಟು 25 ಲಕ್ಷ ರೂಪಾಯಿ ಜೊತೆಗೆ ಒಂದು ಕಾರನ್ನು (ಸ್ವಿಫ್ಟ್ ಡಿಜೈರ್) ವಶಪಡಿಸಿಕೊಳ್ಳಲಾಗಿದೆ. ಎಲ್ಲ ಹಣವನ್ನು ಕಾರಿನ ಸ್ಟೆಪ್ನಿಯಲ್ಲಿ ಬಚ್ಚಿಟ್ಟಿದ್ದರು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಿರಿದಿ ಜಿಲ್ಲೆಯ ಜಿಲ್ಲಾಧಿಕಾರಿ ನಮನ್ ಪ್ರಿಯೇಶ್ ಲಾಕ್ರಾ ಮತ್ತು ಎಸ್ಪಿ ಡಾ ವಿಮಲ್ ಕುಮಾರ್ ಅವರಿಗೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೂ ತಿಳಿಸಲಾಗಿದೆ.
ಈ ಕುರಿತು ಡಿಯೋರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೋನು ಕುಮಾರ್ ಸಾಹು ಮಾತನಾಡಿ, ಕಾರಿನಲ್ಲಿ ನೋಟುಗಳ ಬಂಡಲ್ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ರಹಸ್ಯ ಮಾಹಿತಿ ಲಭಿಸಿತು. ಕೂಡಲೇ ನಾವು ಸಕ್ರಿಯರಾದೆವು ಮತ್ತು ಬಿಹಾರ ಗಡಿಯಲ್ಲಿನ ಚೆಕ್ಪೋಸ್ಟ್ ಸಿಬ್ಬಂದಿ ಕೂಡ ಸಕ್ರಿಯರಾದರು. ಚೆಕ್ಪೋಸ್ಟ್ಗೆ ಬಂದ ಕಾರೊಂದನ್ನು ನಿಲ್ಲಿಸಿ ಕೂಲಂಕುಷವಾಗಿ ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ ಎಂದರು.
ಹಣವನ್ನು ದಿಯೋಘರ್‌ನಿಂದ ರಾಜಧನವರ್‌ಗೆ ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಯುವಕರು ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಇನ್ಸ್ಪೆಕ್ಟರ್ ಸೋನು ಕುಮಾರ್ ಮಾಹಿತಿ ನೀಡಿದರು. (ಏಜೆನ್ಸೀಸ್)