ನ್ಯೂಸ್

ಮನೆಗೆಲಸ ಮಾಡದೆ ಮೊಬೈಲ್​ನಲ್ಲಿ ಬಿಜಿ: ಪ್ರೆಶರ್​ ಕುಕ್ಕರ್​ನಿಂದ ಹೊಡೆದು ಮಗಳನ್ನೇ ಕೊಂದ ತಂದೆ | Mobile Addiction

ಸೂರತ್: ಮನೆಗೆಲಸಕ್ಕೆ ಸಹಾಯ ಮಾಡದೆ ಯಾವಾಗಲೂ ಮೊಬೈಲ್​ ಗೇಮ್​ನಲ್ಲೇ ( Mobile Addiction ) ಮುಳುಗಿರುತ್ತಿದ್ದ 18 ವರ್ಷದ ಮಗಳನ್ನು ತಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.

40 ವರ್ಷದ ಆಟೋ ಚಾಲಕ ಮುಕೇಶ್​ ಪಾರ್ಮರ್​ ತನ್ನ ಮಗಳು ಹೇತಾಲಿಗೆ ಪ್ರೆಶರ್ ಕುಕ್ಕರ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಘಟನೆ ಕಳೆದ ಗುರುವಾರ (ನ.28) ನಡೆದಿದ್ದು, ಶುಕ್ರವಾರ (ನ.29) ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮೃತ ಹೇತಾಲಿಯ ತಾಯಿ ಗೀತಾಬೆನ್ ನೀಡಿದ ದೂರಿನ ಆಧಾರದ ಮೇಲೆ ಅರೋಪಿಯನ್ನು ಬಂಧಿಸಲಾಗಿದೆ. ಗೀತಾಬೆನ್​ ಅವರು ಸೂರತ್​ನ ಭಾರಿಮಾತಾ ಏರಿಯಾದ ನಿವಾಸಿ. ತಮ್ಮ ಏರಿಯಾದಲ್ಲೇ ಇರುವ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ಮಧ್ಯಾಹ್ನ ಗೀತಾ ಅವರು ಕೆಲಸಕ್ಕೆಂದು ಮನೆಯಿಂದ ಹೊರಟರು. ಈ ವೇಳೆ ಮನೆಯಲ್ಲಿ ಹೇತಾಲಿ ಮತ್ತು ತಂದೆ ಮುಕೇಶ್​ ಪಾರ್ಮರ್​ ಇದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೆ ಪಾರ್ಮರ್​ ಮನೆಯಲ್ಲಿಯೇ ಇದ್ದರು.

ಗೀತಾ ಕೆಲಸಕ್ಕೆ ಹೋಗುವಾಗ ಬರುವಷ್ಟರಲ್ಲಿ ಮನೆಗೆಲಸಗಳನ್ನು ಮುಗಿಸಲು ತನ್ನ ಮಗಳಿಗೆ ಹೇಳಿದ್ದರು. ಆದರೆ, ಹೇತಾಲಿ ಅದನ್ನು ನಿರ್ಲಕ್ಷಿಸಿ, ಫೋನ್‌ನಲ್ಲಿ ಬಿಜಿಯಾಗಿದ್ದಳು. ತಂದೆಯು ಕೂಡ ಅನೇಕ ಬಾರಿ ಕೆಲಸ ಮಾಡುವಂತೆ ಹೇಳಿದರೂ ಹೇತಾಲಿ ಮಾತ್ರ ಕ್ಯಾರೆ ಎನ್ನಲಿಲ್ಲ. ಇದರಿಂದ ಕೋಪಗೊಂಡ ಪಾರ್ಮರ್​, ಮನೆಯಲ್ಲಿದ್ದ ಪ್ರೆಶರ್​ ಕುಕ್ಕರ್​ನಿಂದ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹೇತಾಲಿಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ಪದೇಪದೆ ಹೊಡೆದು ತೀವ್ರವಾಗಿ ಗೊಯಗೊಳಿಸಿದರು

ಇದೇ ಸಂದರ್ಭದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಹೇತಾಲಿಯ ಕಿರಿಯ ಸಹೋದರ ಮಯಾಂಕ್ (13) ತನ್ನ ಸಹೋದರಿ ಅಳುವುದನ್ನು ಕೇಳಿ ಒಳಗೆ ಓಡಿಬಂದಿದ್ದಾನೆ. ಈ ವೇಳೆ ಹೇತಾಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣ ಮಾಯಾಂಕ್‌ ತನ್ನ ತಾಯಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ತಕ್ಷಣ ಮನೆಗೆ ಧಾವಿಸಿದ ಗೀತಾ, ಹೇತಾಲಿಯನ್ನು ಸ್ಮಿಮರ್ ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ಚಿಕಿತ್ಸೆಯ ನಂತರ ಹೇತಾಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೀತಾಬೆನ್ ಹೇಳಿಕೆಯ ಆಧಾರದ ಮೇಲೆ ಚೌಕ್ ಬಜಾರ್ ಪೊಲೀಸರು ಆಕೆಯ ಪತಿ ವಿರುದ್ಧ ಪ್ರಕರಣವನ್ನು ದಾಖಲಿಸಿ ಶುಕ್ರವಾರ ಮಧ್ಯಾಹ್ನ ಕೊಲೆ ಆರೋಪದಡಿಯಲ್ಲಿ ಬಂಧಿಸಿದ್ದಾರೆ. (ಏಜೆನ್ಸೀಸ್​)