ನವದೆಹಲಿ: ಭಾರತದ ಸ್ವದೇಶಿ ಆಂದೋಲನಕ್ಕೆ ಬೆದರಿರುವ ಇತರ ರಾಷ್ಟ್ರಗಳು ಹೇಗಾದರೂ ಮಾಡಿ ಈ ಆಂದೋಲನವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ನಡುವೆಯೇ, ಭಾರತದ ಜನತೆಗೂ ಸುಳ್ಳನ್ನೇ ಉಣಬಡಿಸುತ್ತಿವೆ.
ಚೀನಾ ಮೂಲದ ಟಿಕ್ಟಾಕ್ಗೆ ಪರ್ಯಾಯವಾಗಿ ಭಾರತ ಮಿತ್ರೋ ಆ್ಯಪ್ ಆರಂಭಿಸಿದ್ದೇ ತಡ, ಇದರ ಜನಪ್ರಿಯತೆಯಿಂದ ಹತಾಶಗೊಂಡ ಪಾಕಿಸ್ತಾನ, ಈ ಆ್ಯಪ್‌ನ ಮೂಲ ಕೋಡ್ ತನ್ನದೇ ಎಂದು ವರದಿ ಮಾಡಿತು. ಈ ಆರೋಪದ ನಡುವೆಯೇ ಭಾರತದ ಮಾಧ್ಯಮಗಳಲ್ಲಿಯೂ ಮಿತ್ರೋ ಆ್ಯಪ್ ಕುರಿತಂತೆ ಸಾಕಷ್ಟು ಟೀಕೆಗಳು ಕೇಳಿಬಂದವು. ಅದೇ ಇನ್ನೊಂದೆಡೆ ಮಿತ್ರೋ ಆ್ಯಪ್ ಅತ್ಯಧಿಕ ರೀತಿಯಲ್ಲಿ ಡೌನ್‌ಲೋಡ್ ಆಗುತ್ತ ಟಿಕ್ ಟಾಕ್ ರೇಟಿಂಗ್ ಕಡಿಮೆ ಆದದ್ದೇ ತಡ, ಅಮೆರಿಕ ಮೂಲದ ಗೂಗಲ್ ಸಂಸ್ಥೆ, ಟಿಕ್ಟಾಕ್ ರೇಟಿಂಗ್ ಹೆಚ್ಚು ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿತು. ನಂತರ ಮಿತ್ರೋ ಆ್ಯಪ್ ಪಾಕ್ ಮೂಲದ್ದು ಎಂದು ಸುದ್ದಿ ಆಗುತ್ತಲೇ ತನ್ನ ಪ್ಲೇಸ್ಟೋರ್ನಿಂದ ಈ ಆ್ಯಪ್ ಅನ್ನು ಕಿತ್ತೇ ಹಾಕಿತು!
ಆದರೆ ಈ ಆ್ಯಪ್‌ನ ಮೂಲ ಕೋಡ್ ಪಾಕಿಸ್ತಾನದ್ದು ಎಂಬುದು ಹಸಿಸುಳ್ಳು. ನಾವು ಪಾಕಿಸ್ತಾನದ ಕೋಡ್ ಕದ್ದೂ ಇಲ್ಲ, ಅದರ ಅವಶ್ಯಕತೆಯೂ ನಮಗೆ ಇಲ್ಲ ಎಂದು ಉತ್ತರಿಸಿದ್ದಾರೆ ಮಿತ್ರೋ ಆ್ಯಪ್‌ನ ಸೃಷ್ಟಿಕರ್ತರಾಗಿರುವ ಶಿವಾಂಕ್ ಅಗರ್ವಾಲ್ ಮತ್ತು ಅನೀಶ್ ಖಂಡೇಲ್ವಾಲ್.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಇವರು, ಮಿತ್ರೋ ಆ್ಯಪ್‌ನ ಮೂಲ ಕೋಡ್ ಪಾಕಿಸ್ತಾನ ಹೇಳಿರುವಂತೆ ಕ್ಯೂಬಾಕ್ಸಸ್ ಸಂಸ್ಥೆಯದ್ದು ಅಲ್ಲವೇ ಅಲ್ಲ. ಎಲ್ಲಾ ಮಾರ್ಗಸೂಚಿ ಹಾಗೂ ನಿಯಮಾವಳಿಗಳನ್ನು ಅನುಸರಿಸಿ, ಆರಂಭಿಕ ಮೂಲ ಮಾದರಿಯ ಕೋಡಿಂಗ್ ಅನ್ನು ಆಸ್ಟ್ರೇಲಿಯಾದ ಕಂಪನಿಯಾದ ಎನ್ವಾಟೋದಿಂದ ಖರೀದಿ ಮಾಡಲಾಗಿದೆ. ಯಾವುದೇ ಹೊಸದಾಗಿರುವ ಆ್ಯಪ್ ಸೃಷ್ಟಿ ಮಾಡುವಾಗ, ಈ ರೀತಿಯಾಗಿ ಮೂಲ ಕೋಡಿಂಗ್ ಖರೀದಿ ಮಾಡಿ, ಅದನ್ನು ಬದಲಾವಣೆ ಮಾಡಿಕೊಳ್ಳುವುದು ಸಾಮಾನ್ಯ. ಆದ್ದರಿಂದ ತನ್ನ ಕೋಡ್ ಕದಿಯಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗೂಗಲ್ ಪ್ಲೇ ಸ್ಟೋರ್ನಿಂದ ಸದ್ಯ ಮಿತ್ರೋ ಆ್ಯಪ್ ತೆಗೆಯಲಾಗಿದೆ. ಗೂಗಲ್ ಸಂಸ್ಥೆಯು ಕೆಲವೊಂದು ದಾಖಲೆಗಳನ್ನು ಕೇಳಿದ್ದು, ಅದನ್ನು ನೀಡುತ್ತಿದ್ದೇವೆ. ಶೀಘ್ರದಲ್ಲಿ ಪುನಃ ಆ್ಯಪ್ ಪ್ಲೇಸ್ಟೋರ್ಗೆ ಬದಲಿಗೆ ಎಂದಿದ್ದಾರೆ.
ನಕಲಿ ಆರೋಗ್ಯಸೇತು ಆ್ಯಪ್ ಬಿಡುಗಡೆ!
ಇನ್ನೊಂದೆಡೆ, ಭಾರತದ ಆರೋಗ್ಯ ಸೇತು ಆ್ಯಪ್‌ನ ಜನಪ್ರಿಯತೆ ನೋಡಿ ಕುಗ್ಗಿ ಹೋಗಿರುವ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿ ತೋರಿಸಿ ನಕಲಿ ‘ಆರೋಗ್ಯಸೇತು ಆ್ಯಪ್ ಬಿಡುಗಡೆ ಮಾಡಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಡೌನ್‌ಲೋಡ್ ಕಂಡಿರುವ, ವಿಶ್ವದ ಟಾಪ್ ಎಂಟು ಆ್ಯಪ್ಗಳ ಪಟ್ಟಿಯಲ್ಲಿರುವ ಆರೋಗ್ಯಸೇತುವಿನ ನಕಲಿ ಆವೃತ್ತಿಯನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
ಈ ಮೂಲಕ ಪಾಕಿಸ್ತಾನದ ಹ್ಯಾಕರ್‌ಗಳು ಭಾರತೀಯ ಪ್ರಜೆಗಳ ಹಾಗೂ ಸೇನೆಯ ಮಾಹಿತಿ ಕದಿಯಲು ಮುಂದಾಗಿದ್ದಾರೆ ಎಂದು ಮಹಾರಾಷ್ಟ್ರದ ಸೈಬರ್ ಇಲಾಖೆಯ ಐಜಿ ಯಶಸ್ವಿ ಯಾದವ್ ಎಚ್ಚರಿಸಿದ್ದಾರೆ.
ಆದ್ದರಿಂದ ಈ ನಕಲಿ ಆ್ಯಪ್ ತಡೆಗಟ್ಟಲು ಕೆಲವೊಂದು ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಅದೇನೆಂದರೆ:
* ಅಸಲಿ ಆರೋಗ್ಯ ಸೇತುವಿನ ಎಕ್ಸ್‌ಟೆನ್ಷನ್ ಫೈಲ್‌ನ ಹೆಸರು gov.in ಎಂದು ಇದೆ. ನಕಲಿ ಆ್ಯಪ್‌ನ ಎಕ್ಸ್‌ಟೆನ್ಷನ್ ಫೈಲ್‌ನ ಹೆಸರು Apk ಅಂತ ಇರುತ್ತದೆ.
* ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್‌ನಲ್ಲಿ ಮಾತ್ರವೇ ಆರೋಗ್ಯ ಸೇತು ಡೌನ್‌ಲೋಡ್ ಮಾಡಿಕೊಳ್ಳಬೇಕು
* ಆರೋಗ್ಯ ಸೇತು ಹೆಸರಿನಲ್ಲಿ ಬರುವ ಯಾವುದೇ ಮೆಸೇಜ್ನಲ್ಲಿ ಇರುವ ಲಿಂಕ್ಗಳನ್ನು ಡೌನ್‌ಲೋಡ್ ಮಾಡಬಾರದು. ಲಿಂಕ್ ಕ್ಲಿಕ್ಕಿಸಲೇಬಾರದು.
* ಮೊಬೈಲ್‌ಗೆ ಅನುಮಾನಾಸ್ಪದ ಲಿಂಕ್ ಬಂದರೆ ಸೈಬರ್ ಪೊಲೀಸರಿಗೆ ಮಾಹಿತಿ ನೀಡಬೇಕು. (ಏಜೆನ್ಸೀಸ್)