ಎಐಸಿಸಿ ಕಾರ್ಯದರ್ಶಿ ಎನ್​.ಎಸ್. ಬೋಸರಾಜು 
ನ್ಯೂಸ್

ಸಚಿವಗಿರಿಗಾಗಿ ಭುಗಿಲೆದ್ದ ಅಸಮಾಧಾನ; ಶಾಸಕರಿಬ್ಬರಿಂದ ಎಐಸಿಸಿ ಅಧ್ಯಕ್ಷರಿಗೆ ಪತ್ರ

ರಾಯಚೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿನ ಸಚಿವಗಿರಿಗಾಗಿ ಕಾಂಗ್ರೆಸ್​ನಲ್ಲಿ ಈಗಾಗಲೇ ಭಾರಿ ಮೇಲಾಟ ಉಂಟಾಗಿದ್ದು, ಇದೀಗ ಶಾಸಕರಿಬ್ಬರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮಾತ್ರವಲ್ಲ ಎಐಸಿಸಿ ಕಾರ್ಯದರ್ಶಿ ವಿರುದ್ಧ ಎಐಸಿಸಿ ಅಧ್ಯಕ್ಷರಿಗೆ ಪತ್ರವನ್ನೂ ಬರೆದು ಮನವಿ ಮಾಡಿಕೊಳ್ಳಲಾಗಿದೆ.

ಇನ್ನೊಂದು ಸುತ್ತಿನ ಸಚಿವರ ಆಯ್ಕೆಗೆ ಸಂಭಾವ್ಯರ ಪಟ್ಟಿಯಲ್ಲಿ ಎಐಸಿಸಿ ಕಾರ್ಯದರ್ಶಿ ಎನ್​.ಎಸ್.ಬೋಸರಾಜ್ ಅವರ ಹೆಸರಿದೆ ಎಂಬ ಹಿನ್ನೆಲೆಯಲ್ಲಿ ಈ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಬೋಸರಾಜ್ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆಯಲಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹಾಗೂ ಇನ್ನಿಬ್ಬರು ಮುಖಂಡರಾದ ಎ.ವಸಂತ್ ಕುಮಾರ್, ಅಸ್ಲಂ ಪಾಷಾ ಪತ್ರ ಬರೆದಿದ್ದಾರೆ.

ಮಂತ್ರಿಗಿರಿ ರೇಸ್​​ನಲ್ಲಿರುವ ಬೋಸರಾಜ್ ಅವರು ಎಂಎಲ್​ಸಿ ಸ್ಥಾನದ ಮೂಲಕ ಸಚಿವರಾಗಲು ಲಾಬಿ ನಡೆಸುತ್ತಿದ್ದು, ಅವರಿಗೆ ಸ್ಥಾನ ಸಿಗುವುದು ಖಚಿತ ಎನ್ನಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಈ ನಾಲ್ವರು, ಬೋಸರಾಜ್ ವಿರುದ್ಧ ಪಕ್ಷವಿರೋಧಿ ಕಾರ್ಯದ ಆರೋಪ ಹೊರಿಸಿದ್ದಾರೆ. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪಿಸಿರು ಇವರು, ಬೋಸರಾಜ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.