ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲ್ವೇ ಟರ್ಮಿನಲ್ ಇದೀಗ ಮತ್ತಷ್ಟು ವಿಸ್ತಾರಗೊಂಡಿದ್ದು, ಇಂದು ಈ ಅನುಭವವನ್ನು ಪಡೆಯಲು ಖುದ್ದಾಗಿ ವಿಧಾನಸೌಧ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ವಿಧಾನಸೌಧದಿಂದ ಮೈಲಸಂದ್ರಕ್ಕೆ ತೆರಳಿದರು. ಪ್ರಯಾಣದ ಕುರಿತಂತೆ ಟ್ವಿಟರ್ ಖಾತೆಯಲ್ಲಿ ತಮ್ಮ ಅಭಿಪ್ರಾಯವನ್ನು ಈ ರೀತಿ ತಿಳಿಸಿದ್ದಾರೆ.
'ಖುಷಿ ತಂದ ನಮ್ಮ ಮೆಟ್ರೋ ಪ್ರಯಾಣ' ಎಂಬ ಶೀರ್ಷಿಕೆಯಡಿ ಟ್ವೀಟ್ ಮಾಡಿದ ಸಚಿವರು, "ಕೆಂಗೇರಿ ಸಮೀಪದ ಮೈಲಸಂದ್ರದಲ್ಲಿ ಬುಧವಾರ ನಿಗದಿಯಾಗಿದ್ದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಧಾನಸೌಧದಿಂದ ಕೆಂಗೇರಿ ಬಸ್ ಟರ್ಮಿನಲ್ವರೆಗೆ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು ಖುಷಿ ತಂದಿದೆ" ಎಂದರು.
"ದೇಶದ ಬೇರೆ ಬೇರೆ ಭಾಗಗಳಲ್ಲಿ ಮೆಟ್ರೋದಲ್ಲಿ ಸಂಚರಿಸಿ, ಅನುಭವ ಪಡೆದಿದ್ದೇನೆ. ಇಂದು ವಿಧಾನಸೌಧದಿಂದ ಮೈಲಸಂದ್ರಕ್ಕೆ ಕೇವಲ 30 ನಿಮಿಷಗಳಲ್ಲಿ ತಲುಪಿದೆ. ಮೆಟ್ರೋ ಸೌಲಭ್ಯವು ನಗರದ ಸಂಚಾರ ವ್ಯವಸ್ಥೆಯ ರೂಪುರೇಷೆಗಳನ್ನೇ ಆಮೂಲಾಗ್ರವಾಗಿ ಬದಲಿಸುತ್ತಿದೆ" ಎಂದು ಹೇಳಿದರು.
"ಬೆಂಗಳೂರಿನ ಉತ್ಪಾದಕತೆ ಗಣನೀಯವಾಗಿ ಹೆಚ್ಚಲಿದೆ. ಶಬ್ದ, ಧೂಳು ಮತ್ತು ಇಂಗಾಲದ ಮಾಲಿನ್ಯಗಳಿಗೆ ಪರಿಹಾರವಾಗಿದೆ. ಆರೋಗ್ಯದ ಸಮಸ್ಯೆಗಳಿಂದಲೂ ತಕ್ಕ ಮಟ್ಟಿಗೆ ಪಾರಾಗಬಹುದು" ಎಂದು ಟ್ವೀಟ್ ಮಾಡಿ ತಿಳಿಸಿದರು.