Marriage Fraud : ಮದುವೆ ವಂಚನೆ ಎಂಬ ವಿಷಯ ಏನಾದರೂ ಇದ್ದಿದ್ದರೆ ಈ 21 ವರ್ಷದ ಯುವತಿ ಖಂಡಿತ ಅದರಲ್ಲಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದಳು. ಚಿಕ್ಕ ವಯಸ್ಸಿನಲ್ಲೇ ಬರೋಬ್ಬರಿ 12 ಜನರನ್ನು ಮದುವೆಯಾಗಿ ಮಹಾ ವಂಚನೆ ಮಾಡುವ ಮೂಲಕ ಈಕೆ ಎಲ್ಲರ ಹುಬ್ಬೇರಿಸಿದ್ದಾಳೆ.
ಗುಜರಾತಿನಲ್ಲಿ ಕಾಜಲ್ ಆಗಿ, ಹರಿಯಾಣದಲ್ಲಿ ಸೀಮಾ ಆಗಿ, ಬಿಹಾರದಲ್ಲಿ ನೇಹಾ ಆಗಿ ಮತ್ತು ಉತ್ತರ ಪ್ರದೇಶದಲ್ಲಿ ಸ್ವೀಟಿ ಆಗಿ ವಿವಿಧ ಹೆಸರಿನಲ್ಲಿ ಅನೇಕ ಮಂದಿಯನ್ನು ಈಕೆ ಮದುವೆ ಹೆಸರಲ್ಲಿ ವಂಚಿಸಿದ್ದಾಳೆ. ವಾಸ್ತವದಲ್ಲಿ, ಈಕೆಯ ಹೆಸರು ಗುಲ್ಶಾನಾ ರಿಯಾಜ್ ಖಾನ್. ಈಕೆ ಉತ್ತರ ಪ್ರದೇಶದ ಲಖನೌ ಮೂಲದವಳು. ಈಕೆಯ ಪ್ರತಿಯೊಂದು ಮದುವೆಯು ಸ್ಕ್ರಿಪ್ಟ್ ತಕ್ಕಂತೆ ನಡೆಯುತ್ತಿತ್ತು.
ಅಂದಹಾಗೆ, ಈ ಮಹಾ ವಂಚನೆ ಹಿಂದಿರುವುದು ಆಕೆ ಒಬ್ಬಳೇ ಅಲ್ಲ. ಆಕೆಯ ಗ್ಯಾಂಗ್‌ನ ಎಂಟು ಸದಸ್ಯರನ್ನು ಪೊಲೀಸರು ಇದೀಗ ಬಂಧನ ಮಾಡಿದ್ದಾರೆ. ಮದುವೆಯಾದ ಕೆಲವೇ ಕ್ಷಣಗಳಲ್ಲಿ ವರನ ಬೆಲೆಬಾಳುವ ವಸ್ತುಗಳೊಂದಿಗೆ ಕಣ್ಮರೆಯಾಗುವುದು ಈ ಯುವತಿಯ ಕಾರ್ಯ ವಿಧಾನವಾಗಿತ್ತು. 'ಡಾಕು ದುಲ್ಹನ್' ಎಂದು ಕರೆಯುವ ಗುಲ್ಶಾನಾಳನ್ನು ಗುರುವಾರ ಅಂಬೇಡ್ಕರ್ ನಗರದ ಬಾಷ್ಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಸದಹ ಗ್ರಾಮದ ಬಳಿ ಬಂಧಿಸಲಾಯಿತು. ಗ್ಯಾಂಗ್‌ನ ಎಂಟು ಸದಸ್ಯರೊಂದಿಗೆ ಆಕೆಯನ್ನು ಬಂಧಿಸಲಾಯಿತು. ಈ ಗ್ಯಾಂಗ್ ಐದು ಮಹಿಳೆಯರು ಮತ್ತು ನಾಲ್ವರು ಪುರುಷರನ್ನು ಒಳಗೊಂಡಿದೆ. ಗಂಡು ಮಕ್ಕಳಿಗೆ ಸೂಕ್ತವಾದ ವಧುವನ್ನು ಹುಡುಕಲು ಹೆಣಗಾಡುತ್ತಿರುವ ದುರ್ಬಲ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಅನೇಕ ರಾಜ್ಯಗಳಲ್ಲಿ ಸಂಘಟಿತ ವಿವಾಹ ದಂಧೆಯನ್ನು ಈ ಗ್ಯಾಂಗ್ ನಡೆಸುತ್ತಿತ್ತು.
ಪೊಲೀಸರ ಹೇಳಿಕೆ ಪ್ರಕಾರ, ಈ ಗ್ಯಾಂಗ್ ಹಲವಾರು ರಾಜ್ಯಗಳಲ್ಲಿ ಸಂಘಟಿತ ವಿವಾಹ ಜಾಲವನ್ನು ನಡೆಸುತ್ತಿತ್ತು. ಮದುವೆ ವೆಬ್ಸೈಟ್ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಪುತ್ರರಿಗೆ ವಧು ಹುಡುಕಲು ಹೆಣಗಾಡುವ ಕುಟುಂಬಗಳನ್ನೇ ಈ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು. ಗುಲ್ಶಾನಾ, ಅನೇಕ ಹೆಸರುಗಳನ್ನು ಬದಲಾಯಿಸಿಕೊಂಡು, ಸಂಭಾವ್ಯ ವಧುವಿನಂತೆ ನಟಿಸಿ, ವರನ ಕುಟುಂಬದ ವಿಶ್ವಾಸವನ್ನು ಗಳಿಸುತ್ತಿದ್ದಳು.
ಮದುವೆಗೂ ಮೊದಲೇ ಹಣದ ಮಾತುಕತೆ ನಡೆಯುತ್ತಿತ್ತು. ಎಲ್ಲರೂ ಒಪ್ಪಿದ ಬಳಿಕ ಅದ್ಧೂರಿ ವಿವಾಹ ನೆರವೇರುತ್ತಿತ್ತು. ಮದುವೆಯಾದ ಕೆಲವೇ ಕ್ಷಣಗಳಲ್ಲಿ ಗ್ಯಾಂಗ್‌ನ ಸದಸ್ಯರು ವಧುವನ್ನು ಕರೆದೊಯ್ಯುತ್ತಿದ್ದರು. ಹೋಗುವಾಗ ವರನ ಆಭರಣಗಳು ಸೇರಿದಂತೆ ಇನ್ನಿತರ ದುಬಾರಿ ವಸ್ತುಗಳನ್ನು ಸಹ ಹೊತ್ತೊಯ್ಯುತ್ತಿದ್ದರು. ಈ ಬಗ್ಗೆ ವರನ ಕಡೆಯವರು ದೂರು ನೀಡುವ ಹೊತ್ತಿಗೆ ಇಡೀ ಗ್ಯಾಂಗ್ ತಮ್ಮ ಗುರುತನ್ನು ಬದಲಾಯಿಸಿಕೊಳ್ಳುತ್ತಿತ್ತು ಎಂದು ಲಖನೌ ಎಸ್‌ಪಿ ಕೇಶವ್ ಕುಮಾರ್ ತಿಳಿಸಿದ್ದಾರೆ.
ಅಂದಹಾಗೆ, ಗುಲ್ಶಾನಾ ಕಾನೂನುಬದ್ಧವಾಗಿ ರಿಯಾಜ್ ಖಾನ್ ಎಂಬುವರನ್ನು ಮದುವೆಯಾಗಿದ್ದಾಳೆ. ರಿಯಾಜ್ ಅವರು ಜಾನ್‌ಪುರದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿಯ ಸರಣಿ ಹಗರಣಗಳ ಬಗ್ಗೆ ತಿಳಿದಿದ್ದ ರಿಯಾಜ್ ಖಾನ್‌ಗೆ ವಂಚನೆಯಿಂದ ಬರುತ್ತಿದ್ದ ಹಣದಲ್ಲಿ ಶೇ. 5 ರಷ್ಟು ಪಾಲು ಸಿಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಿಯಾಣದ ರೋಹ್ಟಕ್ ನಿವಾಸಿ ಸೋನು ಎಂಬುವವರನ್ನು ವಂಚಿಸಿದ ನಂತರ ಗ್ಯಾಂಗ್‌ನ ರಹಸ್ಯ ಬಯಲಾಗಿದೆ. ಮದುವೆಯಾದ ಕೆಲವೇ ಗಂಟೆಗಳ ನಂತರ, ವಧು ಕಣ್ಮರೆಯಾದಾಗ, ಸೋನು ತುರ್ತು ಸಹಾಯವಾಣಿ 112 ಮೂಲಕ ಯುಪಿ ಪೊಲೀಸರನ್ನು ಸಂಪರ್ಕಿಸಿದರು. ತಡಮಾಡದೇ ತಕ್ಷಣ ತನಿಖೆಗೆ ಇಳಿದ ಅಂಬೇಡ್ಕರ್ ನಗರ ಪೊಲೀಸರು, ಒಬ್ಬ ಗ್ಯಾಂಗ್ ಸದಸ್ಯರನ್ನು ಹಿಡಿದರು. ಬಳಿಕ ಆತನನ್ನು ವಿಚಾರಣೆ ಮಾಡಿದಾಗ, ಆತ ಪೊಲೀಸರನ್ನು ಇತರರ ಬಳಿಗೆ ಕರೆದೊಯ್ದನು. ಬಳಿಕ ಎಲ್ಲರನ್ನೂ ಬಂಧಿಸಲಾಯಿತು.
ಬಂಧಿತರನ್ನು ಜಿಂದ್‌ನ ಮೋಹನ್‌ಲಾಲ್ (34), ರತನ್ ಕುಮಾರ್ ಸರೋಜ್ (32), ರಂಜನ್ ಅಲಿಯಾಸ್ ಅಶು ಗೌತಮ್ (22), ಜಾನ್‌ಪುರದ ಮಂಜು ಮಾಲಿ (29), ಅಂಬೇಡ್ಕರ್ ನಗರದ ರಾಹುಲ್ ರಾಜ್ (30), ಸನ್ನೋ ಅಲಿಯಾಸ್ ಸುನೀತಾ (36), ಪೂನಂ (33) ಮತ್ತು ರುಖ್ಸಾರ್ (21) ಎಂದು ಗುರುತಿಸಲಾಗಿದೆ. ಬಂಧಿತರಿಂದ 72,000 ರೂ. ನಗದು, ಒಂದು ಮೋಟಾರ್ ಸೈಕಲ್, 11 ಮೊಬೈಲ್ ಫೋನ್‌ಗಳು, ಒಂದು ಚಿನ್ನದ ಮಂಗಳಸೂತ್ರ ಮತ್ತು ಮೂರು ನಕಲಿ ಆಧಾರ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನಿಖಾಧಿಕಾರಿಗಳು ಹೇಳುವಂತೆ ಈ ಗ್ಯಾಂಗ್ ಸ್ಪಷ್ಟ ಪಾತ್ರಗಳನ್ನು ಹೊಂದಿತ್ತು. ಗುಲ್ಶಾನಾ ನೇತೃತ್ವದ ಮಹಿಳೆಯರು ವಂಚನೆಯ ರಂಗವನ್ನು ನಿರ್ವಹಿಸುತ್ತಿದ್ದರು. ಅಂದರೆ, ನಂಬಿಕೆಯನ್ನು ಬೆಳೆಸುವುದು, ನಕಲಿ ದಾಖಲೆಗಳನ್ನು ರಚಿಸುವುದು ಮತ್ತು ಕುಟುಂಬಗಳನ್ನು ಮನವೊಲಿಸುವುದು. ಇನ್ನು ಪುರುಷರು ಹೇಗೆ ತಪ್ಪಿಸಿಕೊಳ್ಳುಬೇಕೆಂದನ್ನು ಪ್ಲಾನ್ ಮಾಡುತ್ತಿದ್ದರು. ಈ ಗ್ಯಾಂಗ್ ವಿವಿಧ ರಾಜ್ಯಗಳಲ್ಲಿ ವಂಚನೆಯ ವಿವಾಹಗಳಿಗೆ ತನ್ನದೇಯಾದ ಜಾಲವನ್ನು ಸ್ಥಾಪಿಸಿದೆ.
ಮದುವೆ ವೆಬ್ಸೈಟ್ಗಳಲ್ಲಿ ವಧುಗಳನ್ನು ಹುಡುಕಾಡಲು ಪರದಾಡುವ ಕುಟುಂಬಗಳನ್ನೇ ಈ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು. ಬೇರೆ ಬೇರೆ ಹೆಸರುಗಳಲ್ಲಿ ತಮ್ಮ ಚಿತ್ರಗಳೊಂದಿಗೆ ಖಾತೆಗಳನ್ನು ತೆರೆಯುತ್ತಿದ್ದರು. ಆಸಕ್ತಿ ವ್ಯಕ್ತಪಡಿಸುವ ಪಾಲಕರೊಂದಿಗೆ ಮಾತನಾಡಿ ಮದುವೆಯನ್ನು ವಿಚಾರವನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಅಲ್ಲದೆ, ಮೊದಲು ಅವರಿಂದ ಉತ್ತಮ ಮೊತ್ತವನ್ನು ತೆಗೆದುಕೊಳ್ಳುತ್ತಿದ್ದರು. ಇದಾದ ನಂತರ ಅದ್ದೂರಿ ಮದುವೆಯಾಗಿ, ಕೆಲವೇ ಗಂಟೆಗಳು ಅಥವಾ ದಿನಗಳಲ್ಲಿ ಮೋಟಾರ್ ಸೈಕಲ್ ಗ್ಯಾಂಗ್, ವಧುವನ್ನು ಕಿಡ್ನಾಪ್ ಮಾಡುತ್ತಿತ್ತು. ಬಳಿಕ ಅವರ ಯಾವುದೇ ಕುರುಹು ಸಿಗದಂತೆ ಪರಾರಿಯಾಗುತ್ತಿದ್ದರು.
ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಕುಮಾರ್ ಹೇಳಿದರು. ಈ ಗ್ಯಾಂಗ್ ಕನಿಷ್ಠ 12 ಅಪರಾಧಗಳನ್ನು ಒಪ್ಪಿಕೊಂಡಿದೆ ಮತ್ತು ಹೆಚ್ಚಿನ ಸಂತ್ರಸ್ತರು ಮುಂದೆ ಬರುವ ನಿರೀಕ್ಷೆಯಿದೆ ಎಂದು ಕುಮಾರ್ ಅವರು ತಿಳಿಸಿದರು. (ಏಜೆನ್ಸೀಸ್)