ಪಂತ್​ ಬೀಸಿದ ರಭಸಕ್ಕೆ ಚೆಂಡಿನ ಜತೆ ಹಾರಿಹೋದ ಬ್ಯಾಟ್​: ಸಂಜೀವ್​ ಗೋಯೆಂಕಾ ರಿಯಾಕ್ಷನ್​ ವೈರಲ್! Sanjeev Goenka

Sanjeev Goenka
Published on

Sanjeev Goenka : ಭಾನುವಾರ (ಮೇ 04) ರಾತ್ರಿ ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್‌ಜೈಂಟ್ಸ್ ನಡುವೆ ನಡೆದ 18 ಐಪಿಎಲ್​ ಆವೃತ್ತಿಯ 54ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ರೋಚಕ ಜಯಗಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ಐದು ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು. ಬೃಹತ್ ಗುರಿಯನ್ನು ಬೆನ್ನಟ್ಟಲು ಕಣಕ್ಕೆ ಇಳಿದ ಲಖನೌ ತಂಡ ನಿಗದಿತ ಓವರ್‌ಗಳಲ್ಲಿ ಕೇವಲ 199 ರನ್ ಗಳಿಸುವ ಮೂಲಕ ಸೋಲುಂಡಿತು. ಲಖನೌ ತಂಡದ ನಾಯಕ ರಿಷಭ್ ಪಂತ್ ಮತ್ತೆ ರನ್ ಗಳಿಸುವಲ್ಲಿ ವಿಫಲರಾದರು.

ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡ, ಕಳಪೆ ಪ್ರದರ್ಶನವನ್ನು ಮುಂದುವರೆಸಿದೆ. ವಿಶೇಷವಾಗಿ ತಂಡದ ನಾಯಕ ರಿಷಭ್ ಪಂತ್ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಒಂದೇ ಒಂದು ಅರ್ಧಶತಕವನ್ನು ಹೊರತುಪಡಿಸಿದರೆ, ಪಂತ್ ಈ ಋತುವಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಪ್ಲೇಆಫ್‌ಗೆ ಹೋಗಲು ಬಹಳ ನಿರ್ಣಾಯಕವಾಗಿರುವ ಪಂದ್ಯದಲ್ಲಿ ಪಂತ್ ಅವರ ವೈಫಲ್ಯ ಮತ್ತೊಮ್ಮೆ ಮುಂದುವರೆಯಿತು. ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ಕ್ರೀಸ್‌ನಲ್ಲಿರುವಾಗ ರನ್ ಗಳಿಸಲು ಕಷ್ಟಪಟ್ಟ ಪಂತ್, ಪ್ರತಿ ರನ್‌ಗೂ ಶ್ರಮಿಸಿದರು.

ಪಂಜಾಬ್ ಕಿಂಗ್ಸ್ ಬೌಲರ್ ಓಮರ್ ಜಾಯ್ ಎಸೆದ ಪಂದ್ಯದ 8ನೇ ಓವರ್‌ನ ಐದನೇ ಎಸೆತವನ್ನು ಪಂತ್​, ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಿದರು. ಈ ವೇಳೆ ಪಂತ್​, ಬ್ಯಾಟ್ ಮೇಲಿನ ನಿಯಂತ್ರಣ ಕಳೆದುಕೊಂಡರು. ಬಾಲ್​ ಜೊತೆಗೆ ಬ್ಯಾಟ್ ಕೂಡ ಗಾಳಿಯಲ್ಲಿ ಮೇಲಕ್ಕೆ ಹಾರಿತು. ಬೌಂಡರಿ ಲೈನ್‌ನಲ್ಲಿ ಇದ್ದ ಶಶಾಂಕ್ ಸಿಂಗ್ ಕ್ಯಾಚ್ ಪಡೆದ ನಂತರ ಪಂತ್ ಪೆವಿಲಿಯನ್‌ಗೆ ಹೋಗಬೇಕಾಯಿತು.

ಪಂತ್​ ಔಟಾಗಿದ್ದನ್ನು ನೋಡಿ, ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ತುಂಬಾ ನಿರಾಶೆಗೊಂಡಂತೆ ಕಾಣುತ್ತಿತ್ತು. ಲಖನೌ ತಂಡ ಇದುವರೆಗೆ 11 ಪಂದ್ಯಗಳನ್ನು ಆಡಿದೆ. ಅದರಲ್ಲಿ ಐದು ಪಂದ್ಯಗಳನ್ನು ಮಾತ್ರ ಗೆದ್ದಿದೆ ಮತ್ತು 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ತಂಡದ ವಿರುದ್ಧದ ಸೋಲಿನಿಂದ ಲಖನೌ ತಂಡದ ಪ್ಲೇ-ಆಫ್ ಭರವಸೆ ಜಟಿಲವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net