ನ್ಯೂಸ್

ಅಪ್ರಾಪ್ತಳಿಗೆ ಲೈಂಗಿಕ ದೌರ್ಜನ್ಯ; ಚಲಿಸುತ್ತಿರುವ ರೈಲಿನಲ್ಲೇ ರೈಲ್ವೆ ನೌಕರನನ್ನು ಹೊಡೆದು ಕೊಂದ ಪ್ರಯಾಣಿಕರು

ನವದೆಹಲಿ: ಚಲಿಸುತ್ತಿರುವ ರೈಲಿನಲ್ಲಿ ಅಪ್ರಾಪ್ತ ವಯಸ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಪ್ರಯಾಣಿಕರೆ ಹೊಡೆದು ಕೊಲೆ ಮಾಡಿರುವ ಘಟನೆ ಬಿಹಾರದ ಬರೌನಿಯಿಂದ ನವದೆಹಲಿಗೆ ತೆರಳುವ ಹಮ್​ಸಫರ್​ ಎಕ್ಸ್​ಪ್ರೆಸ್​​ನಲ್ಲಿ ನಡೆದಿದೆ. ಮೃತನನ್ನು ಪ್ರಶಾಂತ್​ ಕುಮಾರ್​ (34) ಎಂದು ಗುರುತಿಸಲಾಗಿದ್ದು, ಈತ ರೈಲ್ವೆ ನೌಕರ ಎಂದು ವರದಿಯಾಗಿದೆ.

ಘಟನೆ ಕುರಿತು ಮಾತನಾಡಿರುವ ಕಾನ್ಪುರ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೃತ ಪ್ರಶಾಂತ್​ ಕುಮಾರ್​ ರೈಲ್ವೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದು, ಬಿಹಾರದ ಬರೌನಿಯಿಂದ ದೆಹಲಿಗೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಸಿವಾನ್‌ನ ಕುಟುಂಬವೊಂದು ಹಮ್ಸಫರ್ ಎಕ್ಸ್‌ಪ್ರೆಸ್ ಮೂರನೇ ಎಸಿ ಕೋಚ್‌ನಲ್ಲಿ ಬುಧವಾರ ಪ್ರಯಾಣಿಸುತ್ತಿರುವ ವೇಳೆ, ಅದೇ ಕೋಚ್‌ನಲ್ಲಿ ರೈಲ್ವೆ ಉದ್ಯೋಗಿ ಪ್ರಶಾಂತ್ ಕುಮಾರ್ ಪ್ರಯಾಣಿಸುತ್ತಿದ್ದ. ಆ ಕುಟುಂಬದ ಬಾಲಕಿಯನ್ನು ಪ್ರಶಾಂತ್​ ತನ್ನ ಸೀಟಿನಲ್ಲಿ ಕೂರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಬಾಲಕಿಯ ತಾಯಿ ವಾಶ್​ರೂಮ್​ಗೆ ಹೋದಾಗ ಪ್ರಶಾಂತ್​ ಆಕೆಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ಬಾಲಕಿ ನಡೆದ ಘಟನೆಯ ಬಗ್ಗೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಪ್ರಶಾಂತ್​ ವರ್ತನೆಯ ಬಳಿ ಬಾಲಕಿಯ ತಾಯಿ ತನ್ನ ಪತಿ, ಚಿಕ್ಕಪ್ಪ ಮತ್ತು ಕೋಚ್‌ನಲ್ಲಿದ್ದ ಇತರ ಪ್ರಯಾಣಿಕರಿಗೆ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಕುಟುಂಬಸ್ಥರು ಹಾಗೂ ಇತರೆ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಲ್ಲಿ ಹಲವು ಗಂಟೆಗಳ ಕಾಲ ಆತನನ್ನು ಮನಬಂದಂತೆ ಥಳಿಸಿದ್ದಾರೆ.

ಮಾರನೆಯ ದಿನ ಬೆಳಗಿನ ಜಾವ ರೈಲು ಉತ್ತರಪ್ರದೇಶದ ಕಾನ್ಪುರ ತಲುಪಿದಾಗ ಪ್ರಯಾಣಿಕರು ಸರ್ಕಾರಿ ರೈಲ್ವೆ ಪೊಲೀಸರಿಗೆ ಪ್ರಶಾಂತ್ ಕುಮಾರ್​ನನ್ನು ಒಪ್ಪಿಸಿದ್ದಾರೆ. ಥಳಿತಕ್ಕೊಳಗಾಗಿದ್ದ ಪ್ರಶಾಂತ್​ನನ್ನು ಕೂಡಲೇ ಪೊಲೀಸರು ವಶಕ್ಕೆ ಪಡದು ಆಸ್ಪತ್ರೆಗೆ ದಾಖಲಿಸಿದರಾದರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕಾನ್ಪುರ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.