ನ್ಯೂಸ್

ಒಂದು ವರ್ಷದಲ್ಲಿ ಈತನಿಗೆ ಹುಟ್ಟಿದ್ದು ಬರೋಬ್ಬರಿ 23 ಮಕ್ಕಳು! ನಾನೆಂದರೆ ಹೆಣ್ಣು ಮಕ್ಕಳೆಲ್ಲ ಮುಗಿಬೀಳುತ್ತಾರೆ, ನಾನೇನು ಮಾಡಲಿ ಎಂದ ಭೂಪ

ಕ್ಯಾನ್ಬೆರಾ: ಮೊದಲೆಲ್ಲ ಮಕ್ಕಳಿರಲವ್ವ ಮನೆ ತುಂಬಾ, ಆಮೇಲೆ ನಾವಿಬ್ಬರು ನಮಗಿಬ್ಬರು, ಈಗ ಮನೆಗೊಂದು ಮಗು ಅನ್ನುವಂತಾಗಿದೆ ಜೀವನ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಈ ಯಾವುದೇ ವಾಕ್ಯವೂ ಸರಿಹೊಂದುವುದೇ ಇಲ್ಲ. ಏಕೆಂದರೆ ಈತ ಒಂದೇ ವರ್ಷದಲ್ಲಿ ಬರೋಬ್ಬರಿ 23 ಮಕ್ಕಳ ತಂದೆಯಾಗಿದ್ದಾನೆ.

ಆಸ್ಟ್ರೇಲಿಯಾ ಮೂಲದ 40 ವರ್ಷದ ಅಲ್ಲೆನ್​ 23 ಮಕ್ಕಳ ತಂದೆಯಾಗಿರುವ ಪುಣ್ಯಾತ್ಮ. ಅಲ್ಲೆನ್​ಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ವಿವಾಹಿತ ಅಲ್ಲೆನ್​ ಮೊದಲು ಸ್ಪರ್ಮ್ಸ್(ವೀರ್ಯ)​ ಮಾರಾಟ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದನಂತೆ. ಆಮೇಲೆ ಅದೇ ಫುಲ್​ ಟೈಮ್​ ವರ್ಕ್​ ಆಗಿಬಿಟ್ಟಿದೆ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 23 ಹೆಣ್ಣು ಮಕ್ಕಳಿಗೆ ಸ್ಪರ್ಮ್ಸ್​ ಮಾರಾಟ ಮಾಡಿದ್ದಾನೆ. ನಾನೇನು ಮಾಡಲಿ, ಹೆಣ್ಣು ಮಕ್ಕಳಿಗೆ ನನ್ನ ಸ್ಪರ್ಮ್ಸ್​ ಅಂದರೆ ಇಷ್ಟವಂತೆ. ಅದಕ್ಕೇ ನನ್ನ ಮೇಲೆ ಮುಗಿಬೀಳುತ್ತಾರೆ ಎನ್ನುತ್ತಾನೆ ಈ ಭೂಪ. ಅಂದ ಹಾಗೇ ಇಂದಿಗೂ ಪ್ರತಿ ದಿನ ಕನಿಷ್ಟ ಮೂರು ಹೆಣ್ಣು ಮಕ್ಕಳು ಈತನಲ್ಲಿ ಸ್ಪರ್ಮ್ಸ್​ ಕೇಳುತ್ತಾರಂತೆ.

ಈ ರೀತಿಯ ಸ್ಪರ್ಮ್ಸ್ ಮಾರಾಟ ಕಾನೂನುಬಾಹಿರ. ಸರ್ಕಾರಿ ಪರವಾನಗಿ ಪಡೆದು 10 ಮಹಿಳೆಯರಿಗೆ ಮಾತ್ರವೇ ಸ್ಪರ್ಮ್ಸ್​ ಮಾರಾಟ ಅಥವಾ ದಾನ ಮಾಡುವ ಕಾನೂನನ್ನು ಆಸ್ಟ್ರೇಲಿಯಾ ಹೊಂದಿದೆ. ಆದರೆ ಈತ ಒಂದೇ ವರ್ಷದಲ್ಲಿ 23 ಮಕ್ಕಳ ಹುಟ್ಟಿಗೆ ಕಾರಣವಾಗಿದ್ದಾನೆ. ಇದೀಗ ಈತನನ್ನು ಬಂಧಿಸಲು ಆಸ್ಟ್ರೇಲಿಯಾ ಅಧಿಕಾರಿಗಳು ಮುಂದಾಗಿದ್ದಾರೆ. (ಏಜೆನ್ಸೀಸ್​)