ನ್ಯೂಸ್

ತಂಗಿಗೆ ಮಾಜಿ ಪ್ರಿಯತಮ ಟಾರ್ಚರ್​ ಮಾಡ್ತಿದ್ದ; ವಿಚಾರ ತಿಳಿದ ಅಣ್ಣ ಹೀಗಾ ಮಾಡೋದು?!

ಮುಂಬೈ: ಪ್ರೀತಿಯಿಂದ ಸಾಕಿದ್ದ ತಂಗಿಗೆ ಆಕೆಯ ಮಾಜಿ ಪ್ರೇಮಿ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಕಾರಣಕ್ಕೆ ಅಣ್ಣ ಕಾನೂನನ್ನು ಕೈಗೆ ತೆಗೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

ಥಾಣೆಯ ದೀಪಕ್​ ಮಹಂಕಲ್​ ಹೆಸರಿನ ಆರೋಪಿಯ ತಂಗಿ ಮಂಗೇಶ್​ ಕೇದಾರ್​ ಹೆಸರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಬಂದಿದ್ದು ಪ್ರೀತಿ ಮುರಿದುಬಿದ್ದಿದೆ. ಅಷ್ಟಾದರೂ ಮಂಗೇಶ್​ ಯುವತಿಯನ್ನು ಸುಮ್ಮನೆ ಬಿಟ್ಟಿಲ್ಲ. ಆಗಾಗ ಕರೆ ಮಾಡಿ ಕಿರುಕುಳ ನೀಡುತ್ತಿದ್ದನಂತೆ. ಈ ರೀತಿ ಮಂಗೇಶ್​ ತನ್ನ ತಂಗಿಗೆ ಕಾಡಿಸುತ್ತಿರುವ ವಿಚಾರ ದೀಪಕ್​ಗೆ ತಿಳಿದುಬಂದಿದೆ. ಮಂಗೇಶ್​ಗೆ ಬುದ್ಧಿ ಕಲಿಸುವ ನಿರ್ಧಾರವನ್ನು ಆತ ಮಾಡಿದ್ದಾನೆ.

ಮಂಗೇಶ್​ ಡಿಸೆಂಬರ್​ 31ರಂದು ಕುಟುಂಬದೊಂದಿಗೆ ಇರದೆ ತನ್ನ ಇನ್ನೊಂದು ಮಲಗುವ ನಿರ್ಧಾರ ಮಾಡಿದ್ದು, ಅಲ್ಲಿಗೆ ಹೋಗಿದ್ದಾನೆ. ಆ ದಿನದಂದು ಹೊಂಚು ಹಾಕಿ ಮಂಗೇಶ್​ನ ಹಿಂದೆ ಹೋದ ದೀಪಕ್​ ಕಲ್ಲಿನಿಂದ ಆತನಿಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಮನೆಗೆ ವಾಪಾಸು ಬಂದಿದ್ದಾನೆ. ಇತ್ತ ಮಂಗೇಶ್​ ಎಷ್ಟು ಹೊತ್ತಾದರೂ ಮನೆಗೆ ವಾಪಾಸು ಬರದಿದ್ದನ್ನು ಕಂಡು ಗಾಬರಿಗೊಂಡ ಕುಟುಂಬ ಮತ್ತೊಂದು ಮನೆಗೆ ತೆರಳಿ ನೋಡಿದಾಗ ಅಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.

ಕೊಲೆ ಮಾಡಿ ಬಂದ ದೀಪಕ್​ ಸುಮ್ಮನೆ ಕುಳಿತಿಲ್ಲ. ನಾನು ಕೊಲೆ ಮಾಡಿದೆ, ಇನ್ನು ನನ್ನ ತಂಗಿಗೆ ತೊಂದರೆಯಿಲ್ಲ ಎಂದು ನೆರೆಮನೆಯರ ಬಳಿ ಹೇಳಿಕೊಂಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಲು ನೋಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ದೀಪಕ್​ ಬಳಿ ಬಂದಿದ್ದು, ಆತನನ್ನು ಬಂಧಿಸಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. (ಏಜೆನ್ಸೀಸ್​)