ನ್ಯೂಸ್

VIDEO| ಪುಕ್ಕಟೆಯಾಗಿ ಸಿಕ್ತಿವೆ ಕಲರ್​ಫುಲ್​ ಕೋಳಿಮರಿಗಳು! ಕೈಗೆ ಸಿಕ್ಕಷ್ಟು ಹಿಡಿದುಕೊಳ್ಳಿ...

arunakunigal

ಹನೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ರಸ್ತೆಯಲ್ಲಿ ಹಾದು ಹೋಗುವಾಗ ಪ್ರಾಣಿ-ಪಕ್ಷಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಶನಿವಾರ ಬಣ್ಣಬಣ್ಣದ ಕೋಳಿ‌ಮರಿಗಳ ದರ್ಶನವಾಗಿದೆ.

ಹೂಪಿಳ್ಳೆ ಎಂದೇ ಕರೆಯುವ ಕೋಳಿಮರಿಗಳಿಗೆ ತಾವೆಲ್ಲಿದ್ದೇವೆ ಎಂಬುದರ ಅರಿವೇ ಇಲ್ಲ. ತನ್ನ ಮಾಲೀಕನ್ಯಾರು ಎಂಬುದೂ ಗೊತ್ತಿಲ್ಲ. ಪುಟ್ಟಪುಟ್ಟ- ಕಲರ್​ಫುಲ್​ ಮರಿಗಳು ಪಿಳಿಪಿಳಿ ಕಣ್ಣುಬಿಡುತ್ತ ಅತ್ತಿಂದಿತ್ತ ಹೋಡಾಡುತ್ತಿದ್ದವು. ಇವುಗಳ ಮಾಲೀಕ ಇಲ್ಲೇ ಎಲ್ಲೋ ಹೋಗಿರಬೇಕು ಎಂದು ಸುಮಾರು ಹೊತ್ತು ವಾಹನ ಸವಾರರು ಮತ್ತು ದಾರಿಹೋಕರು ಅಲ್ಲೇ ನಿಂತು ಕೋಳಿಮರಿಗಳ ಚಿನ್ನಾಟ ನೋಡುತ್ತ ನಿಂತಿದ್ದರೂ ಆ ಮಾಲೀಕ ಬರಲೇ ಇಲ್ಲ.

ವ್ಯಾಪಾರ ಮಾಡಲೆಂದು ಬಂದ ವ್ಯಕ್ತಿ 300ಕ್ಕೂ ಹೆಚ್ಚು ಕೋಳಿಮರಿಗಳನ್ನು ರಾಮಾಪುರ ವಲಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ. ಇವುಗಳ ಮಾಲೀಕ ಎಷ್ಟೊತ್ತಾದರೂ ಬಾರದ ಕಾರಣ ಕೆಲವರು, 'ಏ ಪುಕ್ಕಟೆಯಾಗಿ ಸಿಕ್ತಿವೆ ಕೋಳಿಮರಿಗಳು.. ಕೈಗೆ ಸಿಕ್ಕಷ್ಟು ಹಿಡಿದುಕೊಳ್ಳಿ...' ಎನ್ನುತ್ತಾ ಚೀಲ, ಬ್ಯಾಗ್​, ಕವರ್​ ಹಿಡಿದು ಕೋಳಿಮರಿಗಳನ್ನು ತುಂಬಿಕೊಂಡು ಹೋದರು.

ಕೋಳಿ ಮರಿಗಳಿಗೆ ರೋಗ ಬಂದಿರುವುದಕ್ಕೆ ವ್ಯಾಪಾರಿಗಳು ಕಾಡಿನ ರಸ್ತೆಯಲ್ಲಿ ಬಿಟ್ಟು ಹೋಗಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.