ಜೈಪುರ: ಸುಳ್ಳು ಹೇಳುವುದು ಕಾಂಗ್ರೆಸ್ಗೆ ಅಭ್ಯಾಸವಾಗಿದೆ. ಅವರ ಸುಳ್ಳು ಭರವಸೆಗಳಿಂದ ಜನರು ಬಳಲುವಂತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇಂದು ರಾಜಸ್ಥಾನದ ಜೈಪುರದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜಸ್ಥಾನದ ವಿಧಾನಸಭಾ ಚುನಾವಣಾ ಬಿಜೆಪಿ ಉಸ್ತುವಾರಿಯಾದ ನಂತರ ಇಂದು ಮೊದಲ ಬಾರಿಗೆ ರಾಜಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ಜೈಪುರದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿ, ಚುನಾವಣಾ ತಯಾರಿಯ ಕುರಿತು ಸಮಾಲೋಚನೆ ನಡೆಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ 19 ಸಾವಿರಕ್ಕೂ ಅಧಿಕ ರೈತರು ಕಾಂಗ್ರೆಸ್ನ ಸುಳ್ಳು ಭರವಸೆಗಳಿಂದಾಗಿ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಕೂಡ ಇದೇ ರೀತಿ ಆಗುತ್ತಿದೆ. ಕಾಂಗ್ರೆಸ್ನವರಿಗೆ ಸುಳ್ಳು ಹೇಳುವುದು ಅಭ್ಯಾಸವಾಗಿಬಿಟ್ಟಿದೆ ಎಂದು ಅವರು ಹಲವಾರ ವಿಚಾರಗಳನ್ನು ಉಲ್ಲೇಖಿಸಿದರು.
ಬರೀ ಆರು ತಿಂಗಳಿನಿಂದ ನಿರುದ್ಯೋಗಿಗಳಾಗಿರುವವರಿಗೆ ಆರ್ಥಿಕ ಸಹಾಯ ನೀಡುವಂಥ ವಿಚಿತ್ರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ವಿದ್ಯುತ್ ದರದಲ್ಲಿ ಭಾರಿ ಏರಿಕೆ ಆಗಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದ ಪ್ರಲ್ಹಾದ್ ಜೋಶಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದರು.
ರಾಜಸ್ಥಾನ ಬಿಜೆಪಿ ಘಟಕವು ಕಾಂಗ್ರೆಸ್ನಿಂದಾಗಿರುವ ಈ ಎಲ್ಲ ಸಮಸ್ಯೆಗಳ ವಿರುದ್ಧ ದನಿ ಎತ್ತಲಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ಕ್ರಮಕೈಗೊಳ್ಳಲಿದ್ದು, ನಾವು ಶೀಘ್ರದಲ್ಲೇ 2/3ರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದೇವೆ ಎಂದೂ ಜೋಶಿ ಹೇಳಿದರು.