More

    ವೃದ್ಧ ದಂಪತಿಯ ಹೊಸ ಮನೆ ಧ್ವಂಸ; ಜಾಗ ಕಬಳಿಸಲು ಜಿ.ಪಂ. ಮಾಜಿ ಸದಸ್ಯೆಯ ಪತಿಯ ಕೃತ್ಯ?

    ಆನೇಕಲ್: ವೃದ್ಧ ದಂಪತಿ ಮನೆಯಲ್ಲಿದ್ದಾಗ ರಾತ್ರೋರಾತ್ರಿ ಜೆಸಿಬಿ ಮೂಲಕ ಬಂದ 12ಕ್ಕೂ ಹೆಚ್ಚು ಜನರ ತಂಡ ಮನೆಯನ್ನು ಧ್ವಂಸ ಮಾಡಿದ್ದಲ್ಲದೆ, ವೃದ್ಧರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿರುವ ಘಟನೆ ಪರಪ್ಪನ ಅಗ್ರಹಾರದ ರಾಯಸಂದ್ರದಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ರಾಯಸಂದ್ರದಲ್ಲಿ ತಾಯಮ್ಮ ಹಾಗೂ ಸುಬ್ಬಪ್ಪ ವಾಸವಿದ್ದಾರೆ. ಗುರುವಾರ ತಡರಾತ್ರಿ ಜೆಸಿಬಿ ಜತೆಗೆ ಬಂದ ಜಿ.ಪಂ. ಮಾಜಿ ಸದಸ್ಯೆ ಪತಿ ದೊರೆಸ್ವಾಮಿ ಹಾಗೂ ತಂಡದವರು ದಾಂಧಲೆ ನಡೆಸಿದ್ದು, ಮದ್ಯ ರಾತ್ರಿ 2 ಗಂಟೆಗೆ ಜೆ.ಸಿ.ಬಿ ಮೂಲಕ ಮನೆ ಒಡೆದು ಹಾಕಿ ದೌರ್ಜನ್ಯ ಮೆರೆದಿದ್ದಾರೆ.

    ರಾಯಸಂದ್ರ ಸರ್ವೆ ನಂ.19/5ರ ಮನೆ ಹಾಗೂ ನಿವೇಶನ ಇದ್ದು ಒಂಬತ್ತು ಗುಂಟೆ ಜಾಗದಲ್ಲಿ ಮನೆ ಹಾಗೂ ಬಾಡಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಂಡು ತಾಯಮ್ಮ ಹಾಗೂ ಪತಿ ವಾಸವಿದ್ದರು. ಗುರುವಾರ ತಡರಾತ್ರಿ ಜೆಸಿಬಿ ಮೂಲಕ ಬಂದು ಹೊಸ ಮನೆ ಹಾಗೂ ಕಾಂಪೌಂಡ್ ಒಡೆದು ದಾಂಧಲೆ ಮಾಡಿದ್ದು, ಈ ಸಂದರ್ಭದಲ್ಲಿ ಮನೆಯ ಹೊರಗೆ ಜೆಸಿಬಿ ಮೂಲಕ ಹೊಸ ಮನೆಯನ್ನು ಧ್ವಂಸ ಮಾಡುವುದನ್ನು ನೋಡಿ ತಾಯಮ್ಮ ಮನೆಯ ಬಾಗಿಲು ತೆರೆದು ಹೊರಗೆ ಹೋಗಿದ್ದಾರೆ, ತಾಯಮ್ಮ ಹೊರಗೆ ಹೋಗುತ್ತಿದ್ದಂತೆ ಏಕಾಏಕಿ ಮಹಿಳೆ ಎನ್ನುವುದನ್ನು ಲೆಕ್ಕಿಸದೆ ಮನೆಯ ಒಳಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ಬಿಸಾಡಿದ್ದು ಕಿಟಕಿ ಬಾಗಿಲುಗಳನ್ನು ಒಡೆದು ಹಾಕಿ, ಬಳಿಕ ವೃದ್ಧರನ್ನು ಮನೆಯಲ್ಲಿ ಕೂಡಿ ಹಾಕಿ ಹೊರಭಾಗದಲ್ಲಿ ಬೀಗ ಹಾಕಿಕೊಂಡು ಹೋಗಿದ್ದಾರೆ.

    ಇದನ್ನೂ ಓದಿ: ಕಣ್ಣು ಮಿಟುಕಿಸಲಾಗದ್ದಕ್ಕೇ ಬ್ಯಾಂಕ್ ಖಾತೆ ಸಿಗದಂತಾದ ಮಹಿಳೆ!

    ಮನೆಯಲ್ಲಿ ಸಿಸಿ ಕ್ಯಾಮರಾವಿದ್ದು ಮಾಹಿತಿ ಪೊಲೀಸರಿಗೆ ಗೊತ್ತಾಗಬಾರದು ಎಂದು ಅದನ್ನು ಪುಡಿಗೈಯ್ದಿದ್ದಾರೆ. ವಿದ್ಯುತ್ ತಂತಿಗಳನ್ನು ಕೂಡ ತುಂಡು ಮಾಡಿದ್ದಾರೆ. ನಂತರ ಕಲ್ಲು ಹಾಗೂ ದೊಣ್ಣೆಗಳಿಂದ ಮನೆಯಲ್ಲಿದ್ದ ಟಿವಿ ಹಾಗೂ ಪಾತ್ರೆಗಳನ್ನು ಹೊಡೆದು ಹಾಕಿ, ಮನೆಯ ಕಿಟಕಿ ಬಾಗಿಲು ಒಡೆದು ಕಾರದ ಪುಡಿಯನ್ನು ಎರಚಿದ್ದಾರೆ.

    ಬಾಗಿಲು ತೆರೆದ ಬಾಲಕ: ರಾತ್ರಿ ಇಡೀ ವೃದ್ಧರು ಕೂಗಾಡಿದ್ದರೂ ಅಕ್ಕಪಕ್ಕದವರಿಗೆ ಗೊತ್ತಾಗಿರಲಿಲ್ಲ. ಬೆಳಗ್ಗೆ ಪಕ್ಕದ ಮನೆಯ ಬಾಲಕನೊಬ್ಬ ಮನೆಯ ಬಾಗಿಲು ತೆರೆದಿದ್ದು ಬಳಿಕ ಹೊರ ಬಂದಿದ್ದಾರೆ. ಬಳಿಕ ತನ್ನ ಮಗನಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಆತ ಮನೆ ಬಳಿ ಬಂದು ನೋಡಿದಾಗ ಹೊಸದಾಗಿ ನಿರ್ಮಾಣ ಮಾಡಿದ್ದ ಮನೆ ಸಂಪೂರ್ಣವಾಗಿ ನೆಲಸಮ ಮಾಡಲಾಗಿತ್ತು. ಮನೆಯಲ್ಲಿ ವಸ್ತುಗಳೆಲ್ಲವೂ ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

    ಇದನ್ನೂ ಓದಿ: ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?

    ಕೂಡಲೇ ಹತ್ತಿರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪರಪ್ಪನ ಅಗ್ರಹಾರ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಪ್ರಕರಣದ ಪ್ರಮುಖ ಆರೋಪಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಪತಿ ದೊರೆಸ್ವಾಮಿ ಹಾಗೂ ಸಹೋದರ ರಘು ಸೇರಿ 12ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ದೊರೆಸ್ವಾಮಿ ಹಾಗೂ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ವೃದ್ಧ ದಂಪತಿಯ ಹೊಸ ಮನೆ ಧ್ವಂಸ; ಜಾಗ ಕಬಳಿಸಲು ಜಿ.ಪಂ. ಮಾಜಿ ಸದಸ್ಯೆಯ ಪತಿಯ ಕೃತ್ಯ?

    ಈ ಹಿಂದೆಯೂ ಹಲ್ಲೆ: ಆರೋಪಿಗಳು ಮನೆಯಲ್ಲಿದ್ದ ಹಣ, ಮೊಬೈಲ್​​ಫೋನ್​ ಹಾಗೂ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳೆಲ್ಲವನ್ನು ಕೂಡ ಧ್ವಂಸ ಮಾಡಿದ್ದಾರೆ. ಎರಡು ಕುಟುಂಬದ ನಡುವೆ ಕೋರ್ಟ್‌ನಲ್ಲಿ ವ್ಯಾಜ್ಯವಿತ್ತು. ಪ್ರಕರಣ ಇತ್ಯರ್ಥವಾಗುವ ಮೊದಲೇ ದೊರೆಸ್ವಾಮಿ ಪುಡಿ ರೌಡಿಗಳನ್ನು ಜತೆಗೂಡಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ತಾಯಮ್ಮ ಕುಟುಂಬದವರು ಆರೋಪ ಮಾಡಿದ್ದಾರೆ. ಜಮೀನು ನನ್ನದು ಖಾಲಿ ಮಾಡು ಎಂದು ಈ ಹಿಂದೆಯೂ ದೊರೆಸ್ವಾಮಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಮನೆಗೆ ಕಾಂಪೌಂಡ್ ಹಾಕಿದ್ದಕ್ಕೆ ಮನೆ ಬಳಿ ಬಂದು ಗಲಾಟೆ ಮಾಡಿದ್ದು ಕಾಂಪೌಂಡ್ ಒಡೆದು ಹಾಕಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಜಮೀನನ್ನು ನಾವು ಬೇರೆಯವರಿಂದ ಖರೀದಿ ಮಾಡಿದ್ದು, ಇದಕ್ಕೆ ಸಂಪೂರ್ಣ ದಾಖಲೆಗಳಿವೆ. ಆದರೆ ದೊರೆಸ್ವಾಮಿ ಅವರ ಬಳಿ ಯಾವುದೇ ದಾಖಲೆ ಇಲ್ಲ. ಆದರೂ ಭೂಮಿಯನ್ನು ಲಪಟಾಯಿಸುವ ಕಾರಣದಿಂದ ಪದೇಪದೆ ನಮ್ಮನ್ನು ಬೆದರಿಸಿ ಓಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ನಮಗೆ ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯ ಒದಗಿಸಬೇಕು.
    | ತಾಯಮ್ಮ, ಮನೆ ಮಾಲೀಕರು

    ನನ್ನ ಹಾಗೂ ತಾಯಮ್ಮ ಕುಟುಂಬಸ್ಥರ ನಡುವೆ ಕೋರ್ಟ್‌ನಲ್ಲಿ ಪ್ರಕರಣವಿದೆ. ನಾನು ಮನೆ ಧ್ವಂಸ ಮಾಡಲು ಅಲ್ಲಿಗೆ ಹೋಗಿರಲಿಲ್ಲ. ಈ ಕೃತ್ಯ ಯಾರು ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ.
    | ದೊರೆಸ್ವಾಮಿ, ಜಿ.ಪಂ ಮಾಜಿ ಸದಸ್ಯೆ ಪತಿ

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts