ನ್ಯೂಸ್

ಚಂದ್ರನ ಮೇಲ್ಮೈಯಲ್ಲಿ ದುರಂತ ಅಂತ್ಯ ಕಂಡ ಲೂನಾ-25: ರಷ್ಯಾದ ಮುಂದಿನ ಚಂದ್ರ ಯೋಜನೆಗಳಿಗೆ ಬೇಕು ಇಲೆಕ್ಟ್ರಾನಿಕ್ಸ್ ಅಭಿವೃದ್ಧಿ

ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಉದ್ದೇಶದಿಂದ ತೆರಳಿದ್ದ ರಷ್ಯನ್ ರೊಬಾಟಿಕ್ ಬಾಹ್ಯಾಕಾಶ ನೌಕೆ ತನ್ನ ಹಾದಿಯಲ್ಲಿ ಭೂಮಿಯ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡು, ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಕೊನೆಯಾಗಿದೆ ಎಂದು ರಷ್ಯನ್ ಸರ್ಕಾರಿ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಮೋಸ್ ತಿಳಿಸಿದೆ. ಹಾಗೆ ನೋಡಿದರೆ ಕಡಿಮೆ ಅಪಾಯದ ಹಂತದಲ್ಲಿಯೇ ಲೂನಾ-25 ಪತನಗೊಂಡಿರುವುದು ಬಾಹ್ಯಾಕಾಶ ಅನ್ವೇಷಣೆಯಲ್ಲಿ ರಷ್ಯಾ ಮುಂದಿರುವ ಸವಾಲುಗಳನ್ನು ಇನ್ನಷ್ಟು ಹೆಚ್ಚಿಸಿವೆ.

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

1970ರ ದಶಕದ ಬಳಿಕ, ರಷ್ಯಾದ ಮೊದಲ ಚಂದ್ರನ ಮೇಲಿಳಿಯುವ ಯೋಜನೆಯಾದ ಲೂನಾ-25 ಲ್ಯಾಂಡರ್ ಕಳೆದ ವಾರ ಆಗಸ್ಟ್ 16, ಬುಧವಾರದಂದು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಪ್ರವೇಶಿಸಿತ್ತು. ಅದು ಸೋಮವಾರ, ಆಗಸ್ಟ್ 21ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯಬೇಕಾಗಿತ್ತು. ಆದರೆ ಶನಿವಾರ, ಮಾಸ್ಕೋ ಸಮಯದಲ್ಲಿ ಮಧ್ಯಾಹ್ನ 2:10ರ ವೇಳೆಗೆ ಒಂದು ಇಂಜಿನ್ ಕಾರ್ಯಾಚರಿಸಿ ಬಾಹ್ಯಾಕಾಶ ನೌಕೆಯನ್ನು ಲ್ಯಾಂಡಿಂಗ್ ನಡೆಸಲು ಪೂರಕವಾದ ಸ್ಥಿತಿಯಲ್ಲಿ ಇಡುವ ವೇಳೆಗೆ ಒಂದು 'ತುರ್ತು ಪರಿಸ್ಥಿತಿ' ತಲೆದೋರಿತು.

ಬಳಿಕ ಭಾನುವಾರ, ಆಗಸ್ಟ್ 20ರಂದು ಇಂಜಿನ್ ಉರಿಸಲು ಆರಂಭಿಸಿದ ಕೇವಲ 47 ನಿಮಿಷಗಳ ಬಳಿಕ, ರಾಸ್‌ಕಾಸ್ಮೋಸ್ ತಾನು ಬಾಹ್ಯಾಕಾಶ ನೌಕೆಯೊಡನೆ ಸಂಪರ್ಕ ಕಳೆದುಕೊಂಡಿರುವುದಾಗಿ ವರದಿ ಮಾಡಿತು. ಸಂವಹನವನ್ನು ಮರುಸ್ಥಾಪಿಸಲು ಮರಳಿ ಪ್ರಯತ್ನಗಳನ್ನು ನಡೆಸಲಾಯಿತಾದರೂ, ತನ್ನ ನಿರ್ಧರಿತ ಕಕ್ಷೆಯಿಂದ ಹೊರ ಸಾಗಿದ್ದ ಲೂನಾ-25 ಚಂದ್ರನ ಮೇಲ್ಮೈಗೆ ಅಪ್ಪಳಿಸಿ ನಾಶವಾಯಿತು. ಇದು ಸೆಪ್ಟೆಂಬರ್ 17, 2019ರಂದು ಭಾರತದ ಚಂದ್ರಯಾನ-2 ಚಂದ್ರನ ಮೇಲೆ ಪತನಗೊಂಡ ರೀತಿಯಲ್ಲಿ ಜರುಗಿತು.

ರಷ್ಯಾ ತಾನು ಈ ವೈಫಲ್ಯದ ಕುರಿತು ಸಮರ್ಪಕ ತನಿಖೆ ನಡೆಸಲು ಒಂದು ಸಮಿತಿಯನ್ನು ರಚಿಸುವುದಾಗಿ ಹೇಳಿದೆ. ನೂತನ ಬಾಹ್ಯಾಕಾಶ ಉಪಕರಣಗಳನ್ನು ಅಭಿವೃದ್ಧಿ ಪಡಿಸುವುದು ರಷ್ಯಾ ಪಾಲಿಗೆ ಸವಾಲಾಗಿದ್ದು, ಅದರಲ್ಲೂ ಬಾಹ್ಯಾಕಾಶದ ಕಠಿಣವಾದ ವಾತಾವರಣದಲ್ಲಿ ನಿರಂತರವಾಗಿ ಕಾರ್ಯಾಚರಿಸುವ ಇಲೆಕ್ಟ್ರಾನಿಕ್ಸ್ ನಿರ್ಮಾಣ ಅತಿದೊಡ್ಡ ಸಮಸ್ಯೆಯಾಗಿದೆ. ರಷ್ಯಾದ ಬಾಹ್ಯಾಕಾಶ ಯೋಜನೆಗಳ ಮಾಹಿತಿ ಒದಗಿಸುವ RussianSpaceWeb.com ಸ್ಥಾಪಕರಾದ ಅನಾಟಲಿ ಜಾಕ್ ಈ ಕುರಿತು ಮಾತನಾಡಿದ್ದು, "ಬಾಹ್ಯಾಕಾಶದಲ್ಲಿ ಸುಧಾರಿತ ಇಲೆಕ್ಟ್ರಾನಿಕ್ಸ್ ವ್ಯವಸ್ಥೆಗಳಿಲ್ಲದೆ ಅತ್ಯಂತ ದೀರ್ಘಕಾಲ ಪರಿಣಾಮಕಾರಿಯಾಗಿ ಸಂಚರಿಸಲು ಸಾಧ್ಯವಿಲ್ಲ. ಸೋವಿಯತ್ ಇಲೆಕ್ಟ್ರಾನಿಕ್ಸ್ ಸಹ ಸತತವಾಗಿ ಹಿಂದುಳಿದ ವ್ಯವಸ್ಥೆಗಳಾಗಿದ್ದವು. ಅವುಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಶ್ಚಾತ್ಯ ಜಗತ್ತಿಗೆ ಹೋಲಿಸಿದರೆ ಹಿಂದಿದ್ದವು. ವಾಸ್ತವವಾಗಿ ನೋಡುವುದಾದರೆ, ಈ ಸಮಸ್ಯೆ ಸಂಪೂರ್ಣ ರಷ್ಯನ್ ಬಾಹ್ಯಾಕಾಶ ಕಾರ್ಯಕ್ರಮಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ" ಎಂದಿದ್ದಾರೆ.

ಲೂನಾ-25 ಯೋಜನೆಯ ಉದ್ದೇಶ

ಆಗಸ್ಟ್ 11ರಂದು ಉಡಾವಣೆಗೊಂಡ ಲೂನಾ-25 ಯೋಜನೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಜಗತ್ತಿನ ಮೊದಲ ಯೋಜನೆಯಾಗಲು ಪ್ರಯತ್ನ ನಡೆಸಿತ್ತು. ಜಗತ್ತಿನ ಹಲವಾರು ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಕುರಿತು ಅಪಾರ ಆಸಕ್ತಿ ಹೊಂದಿದ್ದು, ಅಲ್ಲಿ ಮಂಜುಗಡ್ಡೆಯ ರೂಪದಲ್ಲಿ ಇರಬಹುದಾದ ನೀರು ಭವಿಷ್ಯದಲ್ಲಿ ಗಗನಯಾತ್ರಿಗಳ ನೆರವಿಗೆ ಲಭ್ಯವಾಗಲಿದೆ ಎಂದು ನಂಬಿಕೆ ಹೊಂದಿವೆ. ಲೂನಾ-25ರ ಪ್ರಾಥಮಿಕ ಗುರಿ ಚಂದ್ರನ ಮೇಲೆ ಲ್ಯಾಂಡಿಂಗ್ ನಡೆಸುವ ತಂತ್ರಜ್ಞಾನವನ್ನು ಪರೀಕ್ಷಿಸುವುದಾಗಿತ್ತು.

 ಸಾಮಾನ್ಯವಾಗಿರುವ ಅಪಾಯಗಳು

ಚಂದ್ರನ ಮೇಲ್ಮೈ ಅನ್ವೇಷಣೆಗೆ ಯಾವುದಾದರೂ ಯೋಜನೆಯನ್ನು ಕೈಗೊಳ್ಳುವಾಗ, ಅದರಲ್ಲಿ ಎರಡು ಅತಿಹೆಚ್ಚು ಚಿಂತೆ ಉಂಟುಮಾಡುವ ಹಂತಗಳೆಂದರೆ, ಭೂಮಿಯಿಂದ ರಾಕೆಟ್‌ನ ಉಡಾವಣೆ ಮತ್ತು ಚಂದ್ರನ ಮೇಲೆ ಲ್ಯಾಂಡಿಂಗ್ ನಡೆಸುವುದು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ, ಚಂದ್ರನ ಅಂಗಳದಲ್ಲಿ ಇಳಿಯಲು ಮೂರು ಪ್ರತ್ಯೇಕ ಯೋಜನೆಗಳನ್ನು ನಡೆಸಲಾಗಿದೆ. ಭಾರತ, ಇಸ್ರೇಲಿನ ಲಾಭರಹಿತ ಸಂಸ್ಥೆ, ಹಾಗೂ ಒಂದು ಜಪಾನಿ ಕಂಪನಿ ನಡೆಸಿದ ಮೂರು ಪ್ರತ್ಯೇಕ ಯೋಜನೆಗಳು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಪ್ರವೇಶಿಸಿದರೂ, ಅಂತಿಮವಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಹಂತದಲ್ಲಿ ವೈಫಲ್ಯ ಅನುಭವಿಸಿದವು.

ಕಕ್ಷೀಯ ಇಂಜಿನ್ ಫೈರಿಂಗ್ ಸಂದರ್ಭದಲ್ಲಿ ಯೋಜನೆಗಳು ತಪ್ಪಾದಾಗ ಅದಕ್ಕೆ ಪ್ರಮುಖವಾಗಿ ಉತ್ಪಾದನಾ ಗುಣಮಟ್ಟದ ಕೊರತೆ ಮತ್ತು ಕಡಿಮೆ ಪರೀಕ್ಷೆಗಳು ಕಾರಣವಾಗಿರುತ್ತವೆ. ರಷ್ಯಾದ ಮಹತ್ವದ ಅಂತರ್ ಗ್ರಹ ಯೋಜನೆಯಾದ, 2011ರ ಫೋಬೋಸ್ ಗ್ರಂಟ್ ವೈಫಲ್ಯವಾಗುವಲ್ಲೂ ಇವೇ ಕಾರಣಗಳಾಗಿದ್ದವು. ಇನ್ನೊಂದು ಕಾರಣವೆಂದರೆ, ಅದು ಮಾನವರೆಸಗುವ ತಪ್ಪುಗಳು. ಈ ಕಾರಣದಿಂದಲೂ ಮುಜುಗರಕ್ಕೀಡು ಮಾಡುವ ಘಟನೆಗಳು ಜರುಗಬಲ್ಲವು. 1999ರ ನಾಸಾದ ಮಾರ್ಸ್ ಕ್ಲೈಮೇಟ್ ಆರ್ಬಿಟರ್ ಯೋಜನೆಯಲ್ಲಿ ಮೆಟ್ರಿಕ್ ಮತ್ತು ಇಂಪೀರಿಯಲ್ ಯುನಿಟ್‌ಗಳ ನಡುವಿನ ಗೊಂದಲದ ಕಾರಣದಿಂದ ಈ ಯೋಜನೆ ಮಂಗಳನ ವಾತಾವರಣದಲ್ಲಿ ನಶಿಸಿಹೋಯಿತು.

ಲೂನಾ-25 ಯೋಜನೆಯ ವೈಜ್ಞಾನಿಕ ಚಟುವಟಿಕೆಗಳ ಜವಾಬ್ದಾರಿ ಹೊಂದಿದ್ದ, ರಷ್ಯನ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಯ ಸ್ಪೇಸ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಹಿರಿಯ ವಿಜ್ಞಾನಿಯಾದ ನೇತನ್ ಈಸ್‌ಮಂಟ್ ಅವರು ಬಾಹ್ಯಾಕಾಶ ನೌಕೆಯ ಇಂಜಿನ್ ವಿನ್ಯಾಸಗೊಳಿಸಿದ ರೀತಿಯಲ್ಲಿ, ಉದ್ದೇಶಕ್ಕೆ ಅನುಗುಣವಾಗಿ ಬಾಹ್ಯಾಕಾಶ ನೌಕೆಯ ಪಥವನ್ನು ಸರಿಪಡಿಸಲು ಕಾರ್ಯಾಚರಿಸಲಿಲ್ಲ ಎಂದಿದ್ದಾರೆ. "ನಾನು ಮತ್ತು ಇತರ ಬಾಹ್ಯ ವಿಶ್ಲೇಷಕರು ಗಮನಿಸಿರುವಂತೆ, ಯೋಜನೆಯ ಪಥ ಸರಿಪಡಿಸುವಿಕೆ ಉದ್ದೇಶಿತ ನಿಯತಾಂಕಗಳಿಂದ ಕೊಂಚ ಬದಲಾವಣೆ ಹೊಂದಿದೆ" ಎಂದಿದ್ದು, ತಾನು ಈ ಯೋಜನೆಯಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯೋಜನೆಯ ನಿಯಂತ್ರಕಗಳು ಪರಿಸ್ಥಿತಿಯನ್ನು ಅಂತಿಮ ಚಲನೆಯ ತನಕವೂ ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದವು ಎಂದು ಡಾ. ಈಸ್‌ಮಂಟ್ ವಿವರಿಸಿದ್ದಾರೆ. ಆದರೆ, ಆ ಕೊನೆಯ ಉರಿಯುವಿಕೆ ಲೂನಾ-25ನ್ನು ಲ್ಯಾಂಡಿಂಗ್ ಪೂರ್ವವಾಗಿ, ಚಂದ್ರನ ಮೇಲ್ಮೈಯಿಂದ 11 ಕಿಲೋಮೀಟರ್ ಒಳಗೆ ಚಲಿಸುವ ಕಕ್ಷೆಯಲ್ಲಿ ಇರಿಸಬೇಕಾಗಿತ್ತು. ಇದಕ್ಕಾಗಿ ಒಂದಷ್ಟು ಹೆಚ್ಚಿನ ಒತ್ತು ಬೇಕಾಗಿದ್ದು, ಅದು ಉದ್ದೇಶಿತ ಪ್ರಮಾಣದಲ್ಲಿ ಲಭ್ಯವಾಗಲಿಲ್ಲ. "ಯೋಜನೆಯ ಈ ಹಂತದಲ್ಲಿ ಬ್ರೇಕಿಂಗ್ ಥ್ರಸ್ಟ್ ಒಂದೋ ಅಸಮರ್ಪಕವಾಗಿ ಹೊಂದಿಸಲ್ಪಟ್ಟಿತ್ತು, ಅಥವಾ ಹೆಚ್ಚಾಗಿತ್ತು" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಯೋಜನಾ ವೈಫಲ್ಯದ ಪರಿಣಾಮಗಳು

ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ರಷ್ಯನ್ ಬಾಹ್ಯಾಕಾಶ ಅನ್ವೇಷಣೆಗಳನ್ನು, ಅದರ ಯಶಸ್ಸನ್ನು ತನ್ನ ರಾಜಕೀಯ ಪ್ರಭಾವವನ್ನು ಹೆಚ್ಚಿಸಲು ಬಳಸಿಕೊಳ್ಳುವ ಉದ್ದೇಶ ಹೊಂದಿದ್ದರು. ಆದರೆ ಈಗ ಲೂನಾ-25 ಯೋಜನೆಯ ವೈಫಲ್ಯ ಅವರ ಉದ್ದೇಶ ಈಡೇರದಂತೆ ಮಾಡಿದೆ. ರಷ್ಯಾ ತನ್ನ ಪ್ರಜೆಗಳು ರಷ್ಯಾ ಒಂದು ಶಕ್ತಿಶಾಲಿ ರಾಷ್ಟ್ರವಾಗಿದ್ದು, ಅದರ ಯಶಸ್ಸಿನ ಕುರಿತು ಹೊಟ್ಟೆಕಿಚ್ಚು ಮತ್ತು ಭಯ ಹೊಂದಿರುವ ಅಮೆರಿಕಾ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ತಮಗೆ ಅಡ್ಡಗಾಲು ಹಾಕುತ್ತಿವೆ ಎಂದು ನಂಬಿಸುತ್ತಾ ಬಂದಿತ್ತು. ರಷ್ಯಾಗೆ ಜಾಗತಿಕ ಸಂಬಂಧಗಳನ್ನು ಮರು ರೂಪಿಸಲು ಸರ್ಕಾರಿ ನಿಯಂತ್ರಿತ ಬಾಹ್ಯಾಕಾಶ ಸಂಸ್ಥೆ ಬಹಳ ಮುಖ್ಯವಾಗಿತ್ತು.

ಲೂನಾ-25 ಯೋಜನೆಯ ಕುರಿತ ವರದಿಗಳನ್ನು ನಿಯಂತ್ರಿಸಲಾಗಿತ್ತು. ಅದು ಈಗ ಯೋಜನೆಯ ವೈಫಲ್ಯದ ನಂತರವೂ ಮುಂದುವರಿದಿದೆ. ರಷ್ಯಾದ ಸರ್ಕಾರಿ ನಿಯಂತ್ರಿತ ಚಾನೆಲ್ 1 ನಲ್ಲಿ ಭಾನುವಾರ ರಾತ್ರಿಯ ವಾರ್ತಾ ಪ್ರಸಾರದಲ್ಲೂ ಲೂನಾ-25 ಯೋಜನೆಯ ದುರಂತ ಅಂತ್ಯದ ಕುರಿತು ಕೇವಲ 40 ಸೆಕೆಂಡುಗಳ ವರದಿ ಪ್ರಸಾರ ಮಾಡಲಾಯಿತು. "ಲೂನಾ-25 ಯೋಜನೆ ಈಗ ಕೊನೆಗೊಂಡಿದೆ. ಈ ಯೋಜನೆಯ ಮೂಲಕ ವಿಜ್ಞಾನಿಗಳಿಗೆ ಚಂದ್ರನ ಮೇಲ್ಮೈ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳು ಲಭ್ಯವಾಗಿದೆ" ಎಂದು ವಾರ್ತಾ ವಾಚಕರು ಹೇಳಿದ್ದರು.

ಭಾರತದ ಮುಂದೆ ಈಗ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಅವಕಾಶವಿದೆ. ಜುಲೈ 14ರಂದು ಉಡಾವಣೆಗೊಂಡ ಭಾರತದ ಚಂದ್ರಯಾನ-3 ಚಂದ್ರನ ಕಡೆಗೆ ದೀರ್ಘವಾದರೂ, ಇಂಧನ ದಕ್ಷತೆಯ ಪಥವನ್ನು ಆಯ್ದುಕೊಂಡಿತ್ತು. ಈಗ ಲ್ಯಾಂಡಿಂಗ್ ಪ್ರಯತ್ನ ಆಗಸ್ಟ್ 23ರ ಬುಧವಾರ ನಡೆಯಲಿದೆ. ಇಸ್ರೋ ವಕ್ತಾರರು ರಷ್ಯಾದ ಲ್ಯಾಂಡರ್ ಪತನವನ್ನು ದುರದೃಷ್ಟಕರ ಎಂದಿದ್ದು, ಪ್ರತಿಯೊಂದು ಬಾಹ್ಯಾಕಾಶ ಯೋಜನೆಯೂ ಸಾಕಷ್ಟು ಅಪಾಯಗಳು ಹಾಗೂ ತಾಂತ್ರಿಕ ಅಂಶಗಳನ್ನು ಒಳಗೊಂಡಿರುತ್ತವೆ ಎಂದಿದ್ದಾರೆ.