ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದ ತಪನ್ ಮಿಶ್ರಾ ಅವರಿಗೆ ಮೂರು ವರ್ಷಗಳ ಹಿಂದೆ ವಿಷವುಣಿಸಿದ ಭಯಾನಕ ರಹಸ್ಯವೊಂದನ್ನು ಸ್ವತಃ ಮಿಶ್ರಾ ಅವರೇ ಜನರ ಮುಂದೆ ತೆರೆದಿಟ್ಟಿದ್ದಾರೆ.
2017, ಮಾರ್ಚ್ 23ರಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಪ್ರಚಾರ ಸಂದರ್ಶನ ವೇಳೆ ಮಾರಣಾಂತಿಕ ಆರ್ಸೆನಿಕ್ ಟ್ರೈಆಕ್ಸೈಡ್ ವಿಷವನ್ನು ಗೊತ್ತಿಲ್ಲದೆಯೇ ನನಗೆ ನೀಡಿದ್ದರು ಎಂದು ಮಿಶ್ರಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಬಹುಶಃ ವಿಷವನ್ನು ಸ್ನ್ಯಾಕ್ಸ್ ಸೇವನೆಯ ಬಳಿಕ ಊಟದ ಸಮಯದಲ್ಲಿ ದೋಸೆಯ ಚಟ್ನಿಯಲ್ಲಿ ಬೆರೆಸಿದ್ದರು ಎಂದು ಮಿಶ್ರಾ ಹೇಳಿದ್ದಾರೆ.
ಮಿಶ್ರಾ ಅವರು ಪ್ರಸ್ತುತ ಇಸ್ರೋದ ಹಿರಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಈ ತಿಂಗಳ ಅಂತ್ಯದಲ್ಲಿ ಅವರು ನಿವೃತ್ತಿ ಹೊಂದಲಿದ್ದಾರೆ. ಸಲಹೆಗಾರರಾಗುವ ಮುನ್ನ ಇಸ್ರೋದ ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಷನ್ ಸೆಂಟರ್ನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ತಮ್ಮ ಫೇಸ್ಬುಕ್ನಲ್ಲಿ ಬಹು ದಿನಗಳ ರಹಸ್ಯವನ್ನು ಬರೆದುಕೊಂಡಿದ್ದಾರೆ. "ಲಾಂಗ್ ಕೆಪ್ಟ್ ಸೀಕ್ರೆಟ್" ಎಂಬ ಶೀರ್ಷಿಕೆಯೊಂದಿಗೆ ಮೂರು ವರ್ಷಗಳ ಹಿಂದಿನ ರಹಸ್ಯವನ್ನು ಮಿಶ್ರಾ ತಿಳಿಸಿದ್ದಾರೆ. ವಿಷಪ್ರಾಶನ ಬಳಿಕ ವೈದ್ಯರ ಸೂಕ್ತ ಕಾಲದ ನೆರವಿನಿಂದಾಗಿ ಚೇತರಿಸಿಕೊಂಡೆ ಎಂದು ಹೇಳಿದ್ದಾರೆ.
ವಿಷಪ್ರಾಸನ ಬಳಿಕ ಉಸಿರಾಟದ ತೊಂದರೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಿತು. ಚರ್ಮದಲ್ಲಿ ಗಂಭೀರವಾದ ಬದಲಾವಣೆ ಮತ್ತು ಶಿಲೀಂಧ್ರಗಳ ಸೋಂಕು ಉಂಟಾಯಿತು ಎಂದು ಬರೆದುಕೊಂಡಿರುವ ಮಿಶ್ರಾ ತಮ್ಮ ಮೆಡಿಕಲ್ ವರದಿಯನ್ನು ಪೋಸ್ಟ್ ಮಾಡಿದ್ದಾರೆ. ನವದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನೀಡಿದ ವರದಿಯಾಗಿದೆ.
ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ನಿರ್ಮಿಸುವಲ್ಲಿನ ಪರಿಣತಿ ಹಾಗೂ ಬಹುದೊಡ್ಡ ಮಿಲಿಟರಿ ಮತ್ತು ವಾಣಿಜ್ಯ ಮಹತ್ವದ ವಿಮರ್ಶಾತ್ಮಕ ಕೊಡುಗೆ ಹೊಂದಿರುವ ವಿಜ್ಞಾನಿಯನ್ನು ನಾಶ ಮಾಡುವ ಉದ್ದೇಶದಿಂದ ನಡೆದ ಬೇಹುಗಾರಿಕೆ ದಾಳಿಯಂತೆ ತೋರುತ್ತದೆ ಎಂದು ಆರೋಪಿಸಿರುವ ಮಿಶ್ರಾ, ಈ ಘಟನೆಯನ್ನು ಕೇಂದ್ರ ಸರ್ಕಾರ ತನಿಖೆಗೆ ಮಾಡಬೇಕೆಂದು ಬಯಸುತ್ತೇನೆಂದಿದ್ದಾರೆ. (ಏಜೆನ್ಸೀಸ್)