Lokayukta Raid : ರಾಜ್ಯದಲ್ಲಿ ಭ್ರಷ್ಟರ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಗೆ ಇನ್ನಷ್ಟು ಚುರುಕು ನೀಡಿದ್ದಾರೆ. ಇಂದು (ನ. 12) ಬೆಳ್ಳಂಬೆಳಗ್ಗೆ ಮಂಡ್ಯ, ಹಾವೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದು, ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.
ಹಾವೇರಿಯಲ್ಲಿ ಜಿಲ್ಲೆಯಲ್ಲಿ ಒಂಭತ್ತು ತಂಡಗಳಿಂದ ವಿವಿಧೆಡೆ ದಾಳಿ ನಡೆದಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಕಾಶೀನಾಥ ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಹಾಗೂ ರಾಣೆಬೆನ್ನೂರ ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಜ್ಯೋತಿ ಶಿಗ್ಲಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾಶೀನಾಥ ಭಜಂತ್ರಿಯ ಹಿರೇಕೆರೂರ ಉಪ ವಿಭಾಗದ ಕಚೇರಿ, ಹಾವೇರಿನಗರದ ಏಳು ಮನೆಗಳು, ಮುಂಡಗೋಡದ ಫಾಮ್೯ ಹೌಸ್ ಮೇಲೆ ದಾಳಿ ನಡೆಸಿರುವ ಲೋಕಾ ತಂಡ ಭಾರಿ ಪ್ರಮಾಣದ ಆಸ್ತಿ ಪತ್ರಗಳು, ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದೆ.
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ರೀನಿವಾಸ ಆಲದಾರ್ತಿಯ ರಾಣೆಬೆನ್ನೂರ ನಗರದ ಮನೆ, ಹಾವೇರಿಯ ಕಚೇರಿ, ಜ್ಯೋತಿ ಶಿಗ್ಲಿ ಮನೆಯ ಮೇಲೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ದಾಖಲೆ ವಶಪಡಿಸಿಕೊಂಡಿದ್ದಾರೆ.
ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಬಿ.ಪಿ. ನೇತೃತ್ವದಲ್ಲಿ ದಾವಣಗೆರೆ, ಶಿವಮೊಗ್ಗ, ಇತರ ಜಿಲ್ಲೆಗಳ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಪರಿಶೀಲನೆ ಮುಂದುವರಿದಿದೆ.
ಅಕ್ರಮ ಆಸ್ತಿ ಆರೋಪದ ಮೇಲೆ ರಾಮನಗರ ನಗರಸಭೆ ಆಯುಕ್ತ ನಾಗೇಶ್ ಅವರ ಶ್ರೀರಂಗಪಟ್ಟಣ ಹಾಗೂ ಶಿವಮೊಗ್ಗ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ಮಾಡಿದ್ದಾರೆ. ನಾಗೇಶ್ ಅವರು ಈ ಹಿಂದೆ ಮಂಡ್ಯದ ಶ್ರೀರಂಗಪಟ್ಟಣದ ತಹಸೀಲ್ದಾರ್ ಆಗಿದ್ದರು. ಈ ವೇಳೆ ಶ್ರೀರಂಗಪಟ್ಟಣದ ಡಾಲರ್ಸ್ ಕಾಲನಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿದ್ದಾರೆ. ಆ ಅಪಾರ್ಟ್ಮೆಂಟ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಮೈಸೂರು ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಕಾಂಗ್ರೆಸ್ ಶಾಸಕನ ಆಪ್ತ ಲಾಕ್
ಮಂಡ್ಯದಲ್ಲಿ ಲಂಚ ಪಡೆಯುವಾಗ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡನ ಆಪ್ತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 50 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶೌಚಾಲಯ ಕಾಮಗಾರಿ ಬಿಲ್ ಕೊಡಿಸಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಮಂಡ್ಯದ ಕಿಂಗ್ಸ್ ಕಾಫಿ ಕೆಫೆಯಲ್ಲಿ ಗುತ್ತಿಗೆದಾರ ಚನ್ನಬಸವೇಗೌಡ ಎಂಬುವರಿಂದ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಚನ್ನಬಸವೇಗೌಡ ಅವರು ಕೋಲಕಾರನದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದರು. ಈ ಕಾಮಗಾರಿಯ ಐದುವರೆ ಲಕ್ಷ ಬಿಲ್ ಪಾವತಿ ಮಾಡಿಸಲು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. 10 ಪರ್ಸೆಂಟೇಜ್ ಲಂಚ ಕೊಡುವಂತೆ ಅನಿಲ್ ಡಿಮ್ಯಾಂಡ್ ಮಾಡಿದ್ದರು. ಲಂಚ ಪಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆಯುವ ದೃಶ್ಯವೂ ಲಭ್ಯ.