ಬೆಂಗಳೂರು: ಮುಜರಾಯಿ ದೇವಸ್ಥಾನದಲ್ಲಿ ಭಕ್ತರು ಸಲ್ಲಿಸುವ ಕಾಣಿಕೆಯ ಹಣವನ್ನು ಅನ್ಯ ಧರ್ಮದವರಿಗೆ ಧಾರೆ ಎರೆಯಲಾಗುತ್ತಿದೆ ಎಂಬ ಗುರುತರ ಆರೋಪ ಎದುರಿಸುತ್ತಿರುವ ಸರ್ಕಾರ, ಆ ಕಳಂಕದಿಂದ ಹೊರಬರಲು ರಾಜ್ಯದಲ್ಲಿರುವ ಎಲ್ಲ ಮುಜರಾಯಿ ದೇವಸ್ಥಾನದ ಮುಂದೆ ವಿಶೇಷ ಬೋರ್ಡ್ ಹಾಕಲು ಉದ್ದೇಶಿಸಿದೆ.
ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಯಲ್ಲಿ 34564 ಅಧಿಸೂಚಿತ ಸಂಸ್ಥೆಗಳಿವೆ. ಇದರಲ್ಲಿ ಪ್ರವರ್ಗ ಎ ಅಡಿಯಲ್ಲಿ 205, ಪ್ರವರ್ಗ ಬಿ ಅಡಿಯಲ್ಲಿ 193 ಹಾಗೂ ಪ್ರವರ್ಗ ಸಿ ಅಡಿಯಲ್ಲಿ 34166 ದೇವಸ್ಥಾನಗಳಿವೆ. ಈ ದೇವಸ್ಥಾನಗಳ ಮುಂದೆ ಡಿಸೆಂಬರ್ ಬಳಿಕ ಹಂತಹಂತವಾಗಿ ಬೋರ್ಡ್ ಹಾಕಲಾಗುತ್ತದೆ.
ಬೋರ್ಡ್‌ನಲ್ಲಿ ಜಾಗೃತಿ
ಈ ಮುಜರಾಯಿ ದೇವಸ್ಥಾನದ ಹಣವನ್ನು ಈ ದೇವಸ್ಥಾನದ ಅಭಿವೃದ್ಧಿಗೇ ಬಳಸುತ್ತೇವೆ. ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ದೇವಳಕ್ಕೆ ಬರುವ ಭಕ್ತರಿಗೆ ಎದ್ದು ಕಾಣುವಂತೆ ಹಾಕಲಾಗುತ್ತದೆ.
ಈ ಮೂಲಕ ಭಕ್ತರಲ್ಲಿ ಮೂಡಿರುವ ಸಂಶಯ ದೂರ ಮಾಡುವುದು ಮುಜರಾಯಿ ಇಲಾಖೆ ಉದ್ದೇಶವಾಗಿದೆ.
ಸರ್ಕಾರಕ್ಕೆ ಸಂಕಟ
ಮುಜರಾಯಿ ದೇವಸ್ಥಾನದ ಹಣವನ್ನು ಅನ್ಯ ಧರ್ಮದ ಧಾರ್ಮಿಕ ಸಂಸ್ಥೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ವಿಧಾನ ಮಂಡಲ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಅನುದಾನ ಬಿಡುಗಡೆ ಪಟ್ಟಿಯಲ್ಲಿ ಚರ್ಚ್, ಮಸೀದಿ ಹೆಸರೂ ಪ್ರಸ್ತಾಪವಾಗಿದ್ದನ್ನು ಇಟ್ಟುಕೊಂಡು ಶಾಸಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆಡಳಿತ ಪಕ್ಷಕ್ಕೆ ಮುಜುಗರ ತರುವಂತೆ ಚರ್ಚೆಗಳೂ ನಡೆದಿವೆ. ಅಲ್ಲದೇ ಪದೇಪದೆ ಚರ್ಚೆ ಮುನ್ನೆಲೆ ಬರುತ್ತಿದೆ. ಇದೇ ಕಾರಣಕ್ಕೆ ಬೋರ್ಡ್ ಹಾಕುವ ತೀರ್ಮಾನಕ್ಕೆ ಬರಲಾಗಿದೆ. ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಧಾರ್ಮಿಕ ದತ್ತಿ ಪರಿಷತ್ ಸಭೆಯಲ್ಲಿ ಈ ಕುರಿತು ನಿರ್ಣಯಕ್ಕೆ ಬರಲಾಗಿದೆ. ನಡಾವಳಿಯೂ ಸಿದ್ಧವಾಗಿದೆ.
ಲೆಕ್ಕಪತ್ರ ಬಹಿರಂಗ
ಸದ್ಯಕ್ಕೆ ಸರ್ಕಾರದ ನಿಲುವನ್ನು ಬೋರ್ಡ್‌ನಲ್ಲಿ ಹಾಕುವುದು. ಮುಂದಿನ ದಿನಗಳಲ್ಲಿ ಪ್ರತಿ ದೇವಸ್ಥಾನದ ವಾರ್ಷಿಕ ಲೆಕ್ಕಚಾರವನ್ನು ಜನರ ಮುಂದಿಡುವ ಆಲೋಚನೆಯೂ ಇದೆ. ಇದಕ್ಕೊಂದು ವ್ಯವಸ್ಥೆ ರೂಪಿಸಿದ ಬಳಿಕ ಈ ಕ್ರಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಪ್ರತಿ ವರ್ಷ ಆಯಾ ದೇವಸ್ಥಾನಕ್ಕೆ ಬರುವ ಆದಾಯ ಎಷ್ಟು, ಯಾವದಕ್ಕೆಲ್ಲ ಖರ್ಚು ಮಾಡಲಾಗಿದೆ, ಉಳಿದ ಠೇವಣಿ ಹಣ ಎಷ್ಟು ಎಂದು ಬಹಿರಂಗ ಮಾಡುವ ಇರಾದೆ ಇದೆ.
ದೇವಸ್ಥಾನಗಳೆಷ್ಟು?
1. ವಾರ್ಷಿಕ 25 ಲಕ್ಷ ರೂ. ವರಮಾನ ಹೊಂದಿರುವ ದೇವಸ್ಥಾನ- 205 (ಪ್ರವರ್ಗ ಎ)
2. ವಾರ್ಷಿಕ 5 ಲಕ್ಷ ರೂ.ನಿಂದ 25 ಲಕ್ಷ ವರೆಗೆ ವರಮಾನ ಇರುವ ದೇವಳ- 193 (ಪ್ರವರ್ಗ ಬಿ)
3. ವಾರ್ಷಿಕ 5 ಲಕ್ಷ ರೂ.ಮೀರದ ವರಮಾನ ಇರುವ ಸಂಸ್ಥೆಗಳು- 34166 (ಪ್ರವರ್ಗ ಸಿ)
ವೆಚ್ಚ ಹೇಗೆ?
ರಾಜ್ಯದಲ್ಲಿರುವ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಂದ ಬರುವ ಆದಾಯಗಳನ್ನು ಆಯಾಯ ದೇವಾಲಯದ ಖಾತೆಯಲ್ಲೇ ನಿರ್ವಹಿಸಿ, ಆಯಾಯ ದೇವಾಲಯಗಳ ದೈನಂದಿನ ಪೂಜಾ ಕೈಂಕರ್ಯ, ನಿತ್ಯ ಕಟ್ಲೆ, ಹೆಚ್ಚು ಕಟ್ಲೆ, ಸಿಬ್ಬಂದಿ ವೆಚ್ಚ, ಭಕ್ತಾದಿಗಳಿಗೆ ಮೂಲಸೌಕರ್ತ ಕಲ್ಪಿಸುವ, ಜೀರ್ಣೋದ್ಧಾರ ಮುಂತಾದ ವೆಚ್ಚಗಳಿಗೆ ಕರ್ನಾಟಕ ಹಿಂದೂ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯ 1997ರ ಕಲಂ 36ರಂತೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡು ಆಯವ್ಯಯದಂತೆ ವೆಚ್ಚ ಭರಿಸಲಾಗುತ್ತಿದೆ ಎಂಬುದು ಮುಜರಾಯಿ ಇಲಾಖೆ ವಿವರಣೆ.
ಮುಖ್ಯಾಂಶ
ಪ್ರವರ್ಗ ಎ ಮತ್ತು ಬಿ ಅಧಿಸೂಚಿತ ಸಂಸ್ಥೆಗಳಲ್ಲಿ 2020-21ರಿಂದ 2023ರ ನವೆಂಬರ್ ವರೆಗೆ ವಿವಿಧ ಸೇವೆಗಳಿಂದ ಮತ್ತು ಹುಂಡಿಗಳಿಂದ 1975.88 ಕೋಟಿ ರೂ. ಸಂಗ್ರಹವಾಗಿತ್ತು.
ಅನಗತ್ಯ ಅಪಪ್ರಚಾರ ತಡೆಯುವ ಉದ್ದೇಶದಿಂದ ಬೋರ್ಡ್ ಹಾಕಲು ನಿರ್ಧರಿಸಲಾಗಿದೆ. ಇದರ ಜತೆ ಸ್ವಚ್ಛತೆ, ಮೊಬೂಲ್ ಬಳಕೆ ನಿಷಿದ್ಧ ಸೇರಿ ಜಾಗೃತಿ ಫಲಕ, ಸರ್ಕಾರ ಜಾರಿಗೆ ತಂದ ಕಾರ್ಯಕ್ರಮದ ಮಾಹಿತಿಯನ್ನೂ ಪ್ರಕಟಿಸಲಾಗುತ್ತದೆ.
– ರಾಮಲಿಂಗಾ ರೆಡ್ಡಿ, ಮುಜರಾಯಿ ಸಚಿವ