ನ್ಯೂಸ್

ನಟ ಶಿವಕಾರ್ತಿಕೇಯನ್ ದತ್ತು ಪಡೆದ ಸಿಂಹ ಮೃಗಾಲಯದಿಂದ ರಾತ್ರೋರಾತ್ರಿ ನಾಪತ್ತೆ: ನಂತರ ನಡೆದಿದ್ದೇನು? Lion

Lion : ಬೆಂಗಳೂರಿನಿಂದ ತಮಿಳುನಾಡಿನ ವಂಡಲೂರು ಮೃಗಾಲಯಕ್ಕೆ ತರಲಾದ ಸಿಂಹವೊಂದು ರಾತ್ರೋರಾತ್ರಿ ಕಾಣೆಯಾಗುವ ಮೂಲಕ ಕೆಲ ಕಾಲ ಆತಂಕ ಮೂಡಿಸಿದ ಪ್ರಸಂಗ ಜರುಗಿದೆ.

ಶೆರಿಯಾರ್ ಹೆಸರಿನ ಐದು ವರ್ಷದ ಗಂಡು ಸಿಂಹವನ್ನು ಗುರುವಾರ (ಅ.02) ಮೊದಲ ಬಾರಿಗೆ ಸಫಾರಿ ವಲಯಕ್ಕೆ ಬಿಡಲಾಯಿತು. ಆದರೆ, ಹಿಂತಿರುಗುವ ಸಮಯ ಕಳೆದರೂ ಸಿಂಹ ಮಾತ್ರ ಬೋನಿಗೆ ವಾಪಸ್ಸಾಗಲಿಲ್ಲ. ಶನಿವಾರ ಸಂಜೆಯವರೆಗೂ ಸಿಂಹ ಬೋನಿಗೆ ಹಿಂತಿರುಗಲಿಲ್ಲ ಎಂದು ವರದಿಯಾಗಿದೆ. ಇದರಿಂದ ಆಘಾತಗೊಂಡ ಮೃಗಾಲಯದ ಸಿಬ್ಬಂದಿ, ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು.

ಕೆಲಕಾಲ ನಾಪತ್ತೆಯಾಗಿದ್ದ ಸಿಂಹ, ತಮಿಳು ನಟ ಶಿವಕಾರ್ತಿಕೇಯನ್ ದತ್ತು ಪಡೆದ ಸಿಂಹವಾಗಿದೆ. ನಾಪತ್ತೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಮೃಗಾಲಯದ ಅಧಿಕಾರಿಗಳು ತಕ್ಷಣವೇ ಶೋಧ ತಂಡಗಳನ್ನು ಸಫಾರಿ ವಲಯಕ್ಕೆ ನಿಯೋಜಿಸಲಾಯಿತು ಮತ್ತು ಅಕ್ಟೋಬರ್ 4 ರಂದು ಶೆರಿಯಾರ್ ಸಿಂಹ ಸಫಾರಿ ವಲಯದೊಳಗೆ ಕಾಣಿಸಿಕೊಂಡಿತು. ಇದರಿಂದ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.

ಇನ್ನು ಸಿಂಹದ ಪಗ್‌ಮಾರ್ಕ್‌ಗಳು ಮತ್ತು ಕೆಲವು ಗುರುತುಗಳು ಸ್ಥಳದಲ್ಲಿ ಪತ್ತೆಯಾಗಿದ್ದು, ಆತ ತನ್ನ ಪರಿಸರವನ್ನು ಅನ್ವೇಷಿಸುತ್ತಿದ್ದ ಎಂಬುದನ್ನು ಸೂಚಿಸುತ್ತದೆ. ಇದು ಎಳೆಯ ಸಿಂಹಗಳಲ್ಲಿ ಕಂಡುಬರುವ ಸಾಮಾನ್ಯ ನಡವಳಿಕೆ ಎಂದು ತಜ್ಞರು ಹೇಳಿದ್ದಾರೆ. ಸಿಂಹವನ್ನು ಪತ್ತೆಹಚ್ಚುವವರೆಗೂ ಸಫಾರಿ ಪ್ರದೇಶಕ್ಕೆ ಸಂದರ್ಶಕರ ಭೇಟಿಯನ್ನು ನಿಷೇಧಿಸಲಾಗಿತ್ತು.

ರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ 2023ರಲ್ಲಿ ಕರ್ನಾಟಕದ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಶೆರಿಯಾರ್​ ಸಿಂಹವನ್ನು ವಂಡಲೂರಿಗೆ ತರಲಾಯಿತು. ಇಲ್ಲಿನ ಸಿಂಹ ಸಫಾರಿ ಪ್ರದೇಶದಲ್ಲಿ ಪ್ರಸ್ತುತ ಆರು ಸಿಂಹಗಳಿವೆ. ಇವುಗಳಲ್ಲಿ ಎರಡನ್ನು ಮಾತ್ರ ಸಂದರ್ಶಕರು ನೋಡಲು ಅನುಮತಿಸಲಾಗಿದೆ. ಉಳಿದವುಗಳನ್ನು ಪಂಜರಗಳಲ್ಲಿ ಇರಿಸಲಾಗಿದೆ.

ಅರಿಗ್ನರ್ ಅಣ್ಣಾ ಝೂಲಾಜಿಕಲ್ ಪಾರ್ಕ್ ತಮಿಳುನಾಡಿನ ಚೆಂಗಲ್ಪೇಟೆ ಜಿಲ್ಲೆಯ ವಂಡಲೂರಿನಲ್ಲಿದೆ. ಸುಮಾರು 1500 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನವು ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡದಾಗಿದೆ. ಈ ಉದ್ಯಾನವನವು 2400 ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ವಂಡಲೂರು ಮೃಗಾಲಯವು ಹುಲಿಗಳು, ಸಿಂಹಗಳು, ಕರಡಿಗಳು, ಆನೆಗಳು, ಜಿರಾಫೆಗಳು, ಜಿಂಕೆಗಳು, ಎಮ್ಮೆಗಳು ಮತ್ತು ಹಲವಾರು ಜಾತಿಯ ಪಕ್ಷಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪ್ರಾಣಿಗಳಿಗೆ ನೆಲೆಯಾಗಿದೆ. (ಏಜೆನ್ಸೀಸ್​)