ನ್ಯೂಸ್

ಉಚಿತ ವಿದ್ಯುತ್​ ಪಡೆಯಲು ಷರತ್ತುಗಳು ಅನ್ವಯ: ಸಚಿವ ಜಾರ್ಜ್​

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜೂನ್​ 1ರಂದು ಜಾರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡಿದೆ.

ಗೃಹಜ್ಯೋತಿ ಯೋಜನೆ ಕುರಿತು ಸಾರ್ವಜನಿಕ ವಲಯಗಳಲ್ಲಿ ಹಲವು ಅನುಮಾನಗಳಿದ್ದು ಈ ಕುರಿತಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್​ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಕರಾರು ಪತ್ರ ಕಡ್ಡಾಯ

ಈ ಕುರಿತು ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಜಾರ್ಜ್​ ರಾಜ್ಯದಲ್ಲಿ 200ಯೂನಿಟ್​ಗಿಂತ ಕಡಿಮೆ ವಿದ್ಯುತ್​ ಬಳಕೆ ಮಾಡುವ 2.16 ಕೋಟಿ ಜನರಿದ್ದಾರೆ. 2 ಲಕಷಕ್ಕಿಂತ ಹೆಚ್ಚಿನ ಗ್ರಾಹಕರು 200 ಯೂನಿಟ್​ಗಿಂತ ಹೆಚ್ಚಿನ ವಿದ್ಯುತ್​ ಬಳಕೆ ಮಾಡುತ್ತಾರೆ.

ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಸೇವಾಸಿಂಧು ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಪ್ರತ್ಯೇಕ ಆ್ಯಪ್​ ಒಂದನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಸ್ವಂತ ಮನೆ ಅಥವಾ ಬಾಡಿಗೆ ಮನೆ ಇರಲಿ ಅರ್ಜಿ ಸಲ್ಲಿಸುವಾಗ ಕರಾರು ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಷರತ್ತು ಅನ್ವಯ

ಹೊಸದಾಗಿ ಮನೆ ಕಟ್ಟಿದವರಿಗೆ, ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ಇರುವವರಿಗೆ ಈ ಯೋಜನೆ ಸದ್ಯಕ್ಕೆ ಜಾರಿಯಾಗುವುದಿಲ್ಲ. ಇದರ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಸ್ಪಷ್ಟತೆಯನ್ನು ನೀಡುತ್ತೇವೆ. ಬೇರೆ ರಾಜ್ಯಗಳಿಂದ ಬಂದು ಇಲ್ಲಿ ವಾಸ ಇರುವವರಿಗೆ ಈ ಯೋಜನೆಯ ಲಾಭವನ್ನು ಪಡೆಯಬಹುದು. ಆದರೆ, ಆಧಾರ್​ ಗುರುತಿನ ಚೀಟಿಯಲ್ಲಿ ಇಲ್ಲಿನ ವಿಳಾಸ ನಮೂದಿಸಿರಬೇಕು ಇಲ್ಲವಾದಲ್ಲಿ ಕಡ್ಡಾಯವಾಗಿ ಕರಾರು ಪತ್ರ ಸಲ್ಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ವಿದ್ಯುತ್​ ದರ ಏರಿಕೆ ಕುರಿತು ಪ್ರತಿಕ್ರಿಯಿಸಿ ನಮ್ಮ ಸರ್ಕಾರದ ಅವಧಿಯಲ್ಲಿ ದರ ಏರಿಕೆ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ವಿದ್ಯುತ್​ ದರ ಏರಿಕೆ ಮಾಡಲಾಗಿತ್ತು. ಚುನಾವಣೆ ಇದ್ದ ಕಾರಣ ಆದೇಶ ಜಾರಿಯಾಗಿರಲಿಲ್ಲ. ಚುನಾವಣೆ ಮುಗಿದ ಬೆನ್ನಲ್ಲೇ ಹೊಸ ದರ ಜಾರಿಗೆ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್​ ದರ ಏರಿಕೆ ಮಾಡಿಲ್ಲ. ಕಾಂಗ್ರೆಸ್​ ಪಕ್ಷವು ಬಡವರು ಹಾಗೂ ಮಧ್ಯಮ ವರ್ಗದ ಜನರನ್ನು ರಕ್ಷಣೆ ಮಾಡುತ್ತಿದೆ. ಬಡವರು ಬಿಲ್​ ಕಟ್ಟುವುದೇ ಬೇಡ ಎಂದು ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್​ ತಿಳಿಸಿದ್ದಾರೆ.