ಅನ್ನ ತಿಂದು ಮುಗಿಸುವ ಮುನ್ನವೇ ಪಾಯಸ ಬಡಿಸಿದ್ದಕ್ಕೆ ರಣಾಂಗಣವಾದ ಕಲ್ಯಾಣ ಮಂಟಪ!

Payasa
Published on

ಚೆನ್ನೈ: ಪಾಯಸದ ವಿಚಾರಕ್ಕೆ ನಿಶ್ಚಿತಾರ್ಥ ಸಮಾರಂಭದಲ್ಲಿ ವಧು ಮತ್ತು ವರನ ಸಂಬಂಧಿಕರು ಕಿತ್ತಾಡಿಕೊಂಡಿರುವ ಘಟನೆ ತಮಿಳುನಾಡಿನ ಮೈಲಾಡುತೊರೈ ಜಿಲ್ಲೆಯ ಸಿರ್ಕಾಜಿಯಲ್ಲಿ ನಡೆದಿದೆ.

ಸಿರ್ಕಾಜಿಯ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದ ಬಳಿಕ ಸಂಬಂಧಿಕರು ಊಟಕ್ಕೆ ಕುಳಿತಿದ್ದರು. ಈ ವೇಳೆ ಅನ್ನ ತಿಂದು ಮುಗಿಸುವ ಮುನ್ನವೇ ಪಾಯಸ ಬಡಿಸಿದ್ದು, ವರನ ಸಂಬಂಧಿಕರಿಗೆ ಇಷ್ಟವಾಗಲಿಲ್ಲ. ಅಲ್ಲದೆ, ಪಾಯಸದ ರುಚಿ ಬಗ್ಗೆಯೂ ಅಸಮಾಧಾನವಿತ್ತು. ಈ ಬಗ್ಗೆ ವಧುವಿನ ಕಡೆಯವರನ್ನು ಪ್ರಶ್ನಿಸಿದಾಗ ವಾಗ್ವಾದ ಉಂಟಾಯಿತು.

ವಾಗ್ವಾದದ ನಡುವೆ ತಾಳ್ಮೆ ಕಳೆದುಕೊಂಡ ವರನ ಸಂಬಂಧಿಕರು ಪಾಯಸವನ್ನು ವಧುವಿನ ಸಂಬಂಧಿಕರತ್ತ ಎರಚಿದರು. ಇದರಿಂದ ವಧುವಿನ ಕಡೆಯವರು ಆಕ್ರೋಶಗೊಂಡರು. ನಂತರ ಎರಡು ಕಡೆಯವರು ಕಲ್ಯಾಣ ಮಂಟಪದಲ್ಲೇ ಬಡಿದಾಡಿಕೊಂಡರು. ಊಟದ ಹಾಲ್​ನಲ್ಲಿದ್ದ ಪೀಠೋಪಕರಣಗಳಲ್ಲಿ ಹೊಡೆದಾಡಿಕೊಂಡಿದ್ದಾರೆ.

ಗಲಾಟೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಿರ್ಕಾಜಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಲಾಟೆಯನ್ನು ತಣ್ಣಗಾಗಿಸಿದರು. ಆದರೆ, ಗಲಾಟೆಗೆ ಸಂಬಂಧಿಸಿದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಗಲಾಟೆ ಸಂಬಂಧ ಯಾರೂ ದೂರು ನೀಡದೇ ಇರುವುದರಿಂದ ಯಾವುದೇ ದೂರು ದಾಖಲಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net