ಕಾರವಾರ: ಸ್ಕೂಲ್ ಬ್ಯಾಗ್ನಲ್ಲಿ, ಶೂ ಒಳಗೆ, ಮನೆಯಲ್ಲಿ ಇಲ್ಲವೇ ಬೈಕ್ನಲ್ಲಿ ಹಾವು ಕಾಣಿಸಿಕೊಂಡು ಸಾರ್ವಜನಿಕರು ಬೆಚ್ಚಿ ಬಿದ್ದಂಥ ಪ್ರಕರಣಗಳು ಹಲವು ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ಕಾರಿನಲ್ಲಿ ಕಾಳಿಂಗ ಸರ್ಪವೊಂದು ಕಂಡುಬಂದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದ ಕ್ಯಾಸಲ್ ರಾಕ್ ಸಮೀಪದ ಖಾಂಡೆವಾಡಿ ಗ್ರಾಮದ ನಾಲ್ವರು ಸಹೋದರರು ಸಂಚರಿಸಿದ್ದ ಕಾರಿನಲ್ಲಿ ಈ ಕಾಳಿಂಗ ಸರ್ಪ ಜೊತೆಗೇ ಇದ್ದಿದ್ದು, ನಂತರ ಈ ವಿಷಯ ಗೊತ್ತಾಗಿದೆ. ಅಷ್ಟರಲ್ಲಾಗಲೇ ಇವರು ಕಾಳಿಂಗ ಸರ್ಪದೊಂದಿಗೆ ಸುಮಾರು 50 ಕಿ.ಮೀ. ಸಂಚರಿಸಿದ್ದರು.
ಇವರು ಜಗಲಬೇಟ ಸಮೀಪ ಮೆಸ್ಟ್ ಬಿರೋಡಾ ದತ್ತಾತ್ರೇಯ ದೇವಸ್ಥಾನಕ್ಕೆ ಆಗಮಿಸಿ ಕಾರು ನಿಲುಗಡೆ ಮಾಡಿದಾಗ ಬೆಕ್ಕೊಂದು ಕಾರಿನ ಸುತ್ತ ಸುತ್ತುತ್ತಿತ್ತು. ಅದನ್ನು ನೋಡಿ ಅನುಮಾನದಿಂದ ಹುಡುಕಿದಾಗ ಕಾರಿನ ಹಿಂದಿನ ಗಾಲಿಗಳ ನಡುವೆ 10 ಅಡಿ ಉದ್ದದ ಕಾಳಿಂಗ ಸರ್ಪ ಇರುವುದು ಪತ್ತೆಯಾಗಿದೆ. ನಂತರ ಸ್ಥಳೀಯ ಅರಣ್ಯಾಧಿಕಾರಿಗಳು 2 ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್ಬ್ಯಾಗ್ನಲ್ಲಿ ನಾಗರಹಾವು!
ಇತ್ತೀಚೆಗೆ ಕೊಡಗು ಜಿಲ್ಲೆಯ ಮನೆಯೊಂದರ ದೇವರಕೋಣೆಯಲ್ಲೇ ಕಾಳಿಂಗ ಸರ್ಪ ಕಂಡು ಬಂದಿತ್ತು. ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನ ಸ್ಕೂಲ್ ಬ್ಯಾಗ್ನಲ್ಲಿ ನಾಗರಹಾವು ಪತ್ತೆಯಾಗಿತ್ತು.