ನ್ಯೂಸ್

ನಿಮ್ಮಪ್ಪನಾಣೆ ಸಾಧ್ಯವಿಲ್ಲ... Bigg Bossಗೆ ಸವಾಲೊಡಿದ್ದ ಜಗದೀಶ್​ಗೆ ಕಿಚ್ಚನ ಖಡಕ್​ ಸಂದೇಶ

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ 11ನೇ (Bigg Boss) ಆವೃತ್ತಿ ಶುರುವಾಗಿ ಒಂದು ವಾರಗಳು ಕಳೆದಿದ್ದು, ಫಿನಾಲೆ ಸಮಯದಲ್ಲಿ ಸ್ಪರ್ಧಿಗಳ (Contestants) ಉಂಟಾಗಬೇಕಿದ್ದ ಜಗಳ ಆರಂಭದಲ್ಲೇ ಶುರುವಾಗಿರುವುದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇನ್ನೂ ಬಿಗ್​ಬಾಸ್​ 11ನೇ ಆವೃತ್ತಿಯ ಮೊದಲ ಪಂಚಾಯ್ತಿ ನಡೆಸಿಕೊಟ್ಟ ಕಿಚ್ಚ ಸುದೀಪ್​ (Kichcha Sudeep) ಸ್ಫರ್ಧಿಗಳಿಗೆ ಫುಲ್​ ಕ್ಲಾಸ್​ ತೆಗೆದುಕೊಂಡಿದ್ದಾರೆ. ವಿಶೇಷವಾಗಿ ಜಗದೀಶ್​ (Jagadish) ಅವರಿಗೆ ಮಾತಿನ ಮೂಲಕವೇ ಚಾಟಿ ಬೀಸಿದ ಕಿಚ್ಚ ಮತ್ತೊಮ್ಮೆ ತಾವೇಕೆ ಬೆಸ್ಟ್​ ನಿರೂಪಕ ಎಂದು ತೋರಿಸಿಕೊಟ್ಟಿದ್ಧಾರೆ.

ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್​ ವಿಡಿಯೋ ಮಾಡಿ ರಾಜಕಾರಣಿ, ಪೊಲೀಸರು ಹಾಗೂ ಸೆಲೆಬ್ರಿಟಿಗಳಿಗೆ ಏಕವಚನದಲ್ಲೇ ಮಾತನಾಡಿ ನಿಂದಿಸುವ ಮೂಲಕವೇ ಖ್ಯಾತಿ ಪಡೆದಿದ್ದ ಜಗದೀಶ್​ ಈ ಬಾರಿ ಬಿಗ್​ಬಾಸ್​ ಮನೆಗೆ ಕಂಟೆಸ್ಟೆಂಟ್​ ಆಗಿ ಎಂಟ್ರಿ ಕೊಟ್ಟಿದ್ದಾರೆ ಆರಂಭದಲ್ಲಿ ಸ್ವಲ್ಪ ಸೈಲೆಂಟಾಗಿ ಇದ್ದ ಜಗದೀಶ್​ ಆ ಬಳಿಕ ಬಿಗ್​ಬಾಸ್ಗೆ ಬೆದರಿಕೆ ಹಾಕಿ ಸ್ಫರ್ಧಿಗಳಿಗೆ ಏಕವಚನದಲ್ಲೇ ನಿಂದಿಸುವ ಮೂಲಕ ವಿವಾದಾವನ್ನೇ ಹುಟ್ಟು ಹಾಕಿದ್ದರು. ಇದೀಗ ವಾರಾಂತ್ಯದಲ್ಲಿ ನಿರೂಪಕ ಕಿಚ್ಚ ಸುದೀಪ್​ ಅವರು ಜಗದೀಶ್​ರನ್ನು ಹ್ಯಾಂಡಲ್​ ಮಾಡಿದ ರೀತಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ನಾನು ತಪ್ಪು ಮಾಡಿದ್ದೀನಿ, ಕ್ಷಮಿಸಿ ಎಂದು ಜಗದೀಶ್​ ಅವರಿಂದಲೇ ಹೇಳಿಸಿದ್ದಾರೆ.

ಮೊದಲಿಗೆ ಜಗದೀಶ್ ಬಗ್ಗೆ ಇರುವ ದೂರುಗಳನ್ನು ಕೇಳಿದ ಸುದೀಪ್, ಎಲ್ಲರೂ ತಮಗೆ ಇರುವ ದೂರುಗಳನ್ನು ಹೇಳಿದರು. ಬಳಿಕ ಜಗದೀಶ್​ಗೆ ಆ ಬಗ್ಗೆ ಸ್ಪಷ್ಟನೆ ನೀಡುವಂತೆ ಹೇಳಿದರು. ಜಗದೀಶ್​ ನೀಡಿದ ಸ್ಪಷ್ಟನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಸುದೀಪ್​ ಜಗದೀಶ್​ ಅವರು ಮಾಡಿದ ತಪ್ಪುಗಳನ್ನು ವಿವರವಾಗಿ ಹೇಳುತ್ತ ಬಂದರು. ಇದಲ್ಲದೆ ಬಿಗ್​ಬಾಸ್​ಗೆ ಬೆದರಿಕೆ ಹಾಕಿದ ವಿಷಯದ ಬಗ್ಗೆ ಮಾತನಾಡಿದ ಸುದೀಪ್, ನೀವು ಬೆದರಿಕೆ ಹಾಕಿದರೆ ಅದು ವಿಶೇಷ ಅನ್ನಿಸಲಿಲ್ಲ, ಬಿಗ್​ಬಾಸ್ ಮನೆಯಲ್ಲಿ ಸಾಕಷ್ಟು ತಮಾಷೆ ನಡೆಯುತ್ತಿರುತ್ತದೆ. ನೀವು ಬೆದರಿಕೆ ಹಾಕಿದ್ದು ಸಹ ಜೋಕ್ ಮಾತ್ರ. ಆ ದೃಶ್ಯವನ್ನು ನಾನು ನೋಡಿದಾಗ ನಾನು ಬಿದ್ದು ಬಿದ್ದು ನಕ್ಕೆ ಎಂದು ಹೇಳುವ ಮೂಲಕ ಜಗದೀಶ್​ಗೆ ಚಾಟಿ ಬೀಸಿದರು.

ಬಿಗ್​ಬಾಸ್ ಶೋ ಅದ್ಭುತವಾದ ಶೋ, ಒಳ್ಳೆಯ ವೇದಿಕೆ, ಈ ವೇದಿಕೆಯಿಂದ ಸಾಕಷ್ಟು ಜನರ ಜೀವನ ಬದಲಾಗಿದೆ. ಆದರೆ ಇದನ್ನು ಮಣ್ಣು ಮಾಡಿಬಿಡುತ್ತೀನಿ ಎಂದರೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ ಎಂದು ಹೇಳಿದರು. ಆ ಬಳಿಕ ಮಾತನಾಡಿದ ಜಗದೀಶ್​ ಹೌದು, ನಾನು ಮಾಡಿದ್ದು ತಪ್ಪು, ನಾನು ಹಾಗೆ ಮಾಡಬಾರದಿತ್ತು, ನನ್ನನ್ನು ಕ್ಷಮಿಸಿ ಎಂದು ಹೇಳಿದರು. ಒಟ್ಟಿನಲ್ಲಿ ಜಗದೀಶ್​ ಹಾರಾಟಕ್ಕೆ ಕೊಂಚ ಮಟ್ಟಿಗೆ ನಿರೂಪಕ ಸುದೀಪ್​ ಬ್ರೇಕ್​ ಹಾಕಿದ್ದು, ಮುಂದಿನ ದಿನಗಳಲ್ಲಿ ಅವರು ಹೇಗೆ ಇರಲಿದ್ಧಾರೆ ಎಂದು ಕಾದು ನೋಡಬೇಕಿದೆ.