ನ್ಯೂಸ್

ಗರ್ಭಿಣಿ ಆನೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ: ಮರಣೋತ್ತರ ವರದಿಯಲ್ಲಿ ನೋವಿನ ಸಂಗತಿ

ತಿರುವನಂತಪುರಂ: ಪೈನಾಪಲ್​ನಲ್ಲಿ ಸಿಡಿಮದ್ದು ಇಟ್ಟು ಗರ್ಭಿಣಿ ಆನೆ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಟ್ವೀಟ್​ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್​​, ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಅರಣ್ಯ ಮತ್ತು ಪೊಲೀಸ್​ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿವೆ. ಅಪರಾಧಿಗಳನ್ನು ಬಂಧಿಸಿ ಮೂಕ ಪ್ರಾಣಿಯ ಸಾವಿಗೆ ನ್ಯಾಯ ಒದಗಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.

ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಏನಿದೆ?

ಗುರುವಾರ ಬಹಿರಂಗವಾದ ಮೃತ ಗರ್ಭಿಣಿ ಆನೆಯ ಮರಣೋತ್ತರ ವರದಿಯಲ್ಲಿ ಆನೆಯ ಬಾಯಿಯಲ್ಲಿ ಸಿಡಿಮದ್ದು ಸ್ಪೋಟಗೊಂಡಿದ್ದರಿಂದ ಕುಡಿಯಲು ಮತ್ತು ತಿನ್ನಲು ಆಗದೇ, ಅನೇಕ ಸಮಯದವರೆಗೂ ನೀರಿನಲ್ಲಿ ನಿಂತು ಕೊನೆಗೆ ನೀರಿನಲ್ಲಿಯೇ ಮುಳುಗಿ ಸಾವಿಗೀಡಾಗಿದೆ ಎಂಬ ನೋವಿನ ವಿಚಾರ ತಿಳಿದುಬಂದಿದೆ. ಸಾವಿಗೂ ಮುನ್ನ ಆನೆ ತುಂಬಾ ನೋವನ್ನು ಅನುಭವಿಸಿದೆ. ಕಳೇಬರ ಪರೀಕ್ಷೆಯನ್ನು ಮನ್ನಾರ್​ಕಾಡ್​ ಅರಣ್ಯ ವಿಭಾಗೀಯ ಆಸ್ಪತ್ರೆಯಲ್ಲಿ ನಡೆಸಲಾಯಿತು.

ಘಟನೆ ಹಿನ್ನೆಲೆ

ಉತ್ತರ ಕೇರಳದ ಮಲಪ್ಪುರಂ ಜಿಲ್ಲೆಯ ಸೈಲೆಂಟ್​ ವ್ಯಾಲಿಯಲ್ಲಿ ಆಹಾರ ಹುಡುಕುತ್ತಾ ಗ್ರಾಮವೊಂದರ ಸಮೀಪಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಪೈನಾಪಲ್​ನಲ್ಲಿ ಸ್ಪೋಟಕ ತುಂಬಿ ತಿನ್ನಲು ಕೊಟ್ಟ ಆನೆಯ ದಾರುಣ ಸಾವಿಗೆ ಕಾರಣರಾಗಿ ಕ್ಷಮಿಸಲಾರದಂತಹ ಪ್ರಮಾದವೆಸಗಿದ್ದಾರೆ. ಈ ಮನಕಲಕುವ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿದಿದ್ದು, ದುಷ್ಟರ ಅಟ್ಟಹಾಸಕ್ಕೆ ಒಕ್ಕೊರಲಾಗಿ ಒತ್ತಾಯಿಸಿದ್ದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೇರಳದ ಚೀಫ್​ ವೈಲ್ಡ್​ಲೈಫ್​ ವಾರ್ಡನ್​ ಸುರೇಂದ್ರ ಕುಮಾರ್​, ಇದೊಂದು ಉದ್ದೇಶಪೂರ್ವಕ ಕೃತ್ಯವಾಗಿದ್ದು, ಇದೇ ದೃಷ್ಟಿಕೋನದಲ್ಲಿ ಇಲಾಖೆಯು ಸಹ ತನಿಖೆ ಕೈಗೊಂಡಿದೆ. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆದಷ್ಟು ಬೇಗೆ ಅವರ ಬಂಧನ ಸುದ್ದಿಯನ್ನು ಕೇಳುತ್ತೀರಾ ಎಂದು ಭರವಸೆ ನೀಡಿದ್ದರು. (ಏಜೆನ್ಸೀಸ್​)