

ತಿರುವನಂತಪುರಂ: ಪೈನಾಪಲ್ನಲ್ಲಿ ಸ್ಫೋಟಕ ಇಟ್ಟು ಗರ್ಭಿಣಿ ಆನೆಯನ್ನು ಕೊಂದ ಘಟನೆ ಬಗ್ಗೆ ಇಡೀ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಈ ರೀತಿ ಆನೆಗಳನ್ನು ಕೊಲ್ಲುವುದು ಕೇರಳದಲ್ಲಿ ಮಾಮೂಲಿ ಎಂಬ ಆತಂಕಕಾರಿ ಅಂಶ ಹೊರಬಿದ್ದಿದೆ.
ಆನೆಗಳಿಗೆ ಅತ್ಯಂತ ಪ್ರಿಯವಾದ ಹಲಸು, ಪೈನಾಪಲ್ ಮತ್ತಿತರ ಹಣ್ಣುಗಳಲ್ಲಿ ಸ್ಫೋಟಕಗಳು ಅಥವಾ ವಿಷ ಇಟ್ಟು ಅವುಗಳಿಗೆ ತಿನ್ನಲು ಕೊಡುವುದು, ಅವು ಓಡಾಡುವ ಜಾಗಗಳಲ್ಲಿ ವಿದ್ಯುತ್ ಮಾರ್ಗ ಅಳವಡಿಸಿ ಕೊಲ್ಲುವುದು ಮುಂತಾದ ವಿಧಾನಗಳಲ್ಲಿ ಕೇರಳದಲ್ಲಿ ಹಲವು ದಶಕಗಳಿಂದ ಅನುಸರಿಸಲಾಗುತ್ತಿದೆ.
ಇದನ್ನೂ ಓದಿ ನಾಳೆ ಜಿಲ್ಲಾ ಗ್ರಂಥಾಲಯಕ್ಕೆ ಚಾಲನೆ
ಹತ್ತು ವರ್ಷಗಳ ಹಿಂದೆ ಕೊಚ್ಚಿಯಿಂದ 50 ಕಿಲೋಮೀಟರ್ ದೂರವಿರುವ ಕಲಾಡಿ ಅರಣ್ಯ ವಲಯದ ಬಾಳೆ ತೋಟದಲ್ಲಿ ಇಂಥ ಘಟನೆ ನಡೆದಿತ್ತು. ಹಣ್ಣುಗಳಲ್ಲಿ ಪಟಾಕಿಗಳನ್ನು ಇಟ್ಟು ಆನೆಗೆ ತಿನ್ನಿಸಲಾಗಿತ್ತು. ಸುಮಾರು 15 ವರ್ಷ ವಯಸ್ಸಿನ ಆ ಆನೆ ಕೂಡ ತುಂಬು ಗರ್ಭಿಣಿಯಾಗಿತ್ತು. ಅದು ಸ್ಥಳದಲ್ಲೇ ಮೃತಪಟ್ಟಿತ್ತು. ಈ ಬಾಳೆ ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿ, ತನಿಖೆ ನಡೆದಿದೆಯಾದರೂ 10 ವರ್ಷದ ಬಳಿಕವೂ ತನಿಖೆ ಮುಗಿದಿಲ್ಲ! ಇತ್ತೀಚೆಗಷ್ಟೆ, ಏಪ್ರಿಲ್ ತಿಂಗಳಲ್ಲಿ ಆನೆಯೊಂದು ಬಾಯಿಯಲ್ಲಾದ ಗಾಯಗಳಿಂದಾಗಿ ಮೃತಪಟ್ಟ ಘಟನೆ ಕೊಲ್ಲಂನಿಂದ ವರದಿಯಾಗಿತ್ತು.
‘ಕಾಡುಹಂದಿ ಮತ್ತಿತರ ಪ್ರಾಣಿಗಳನ್ನು ಕೊಲ್ಲಲು ಇಟ್ಟ ಸ್ಫೋಟಕ, ವಿಷ ತಿಂದು ಆನೆಗಳು ಸಾಯುವುದುಂಟು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಆದರೆ ಪ್ರಾಣಿಪ್ರಿಯರು ಹೇಳುವ ಪ್ರಕಾರ, ಇವು ಆನೆಗಳನ್ನೇ ಗುರಿಯಾಗಿಸಿಕೊಂಡು ನಡೆಯುವ ಕೃತ್ಯಗಳು.
‘‘ಬೆಳೆ ನಾಶಪಡಿಸುವ ಕಾಡುಹಂದಿಯಂತಹ ಪ್ರಾಣಿಗಳನ್ನು ಕೊಲ್ಲಲು ಮಾಂಸದಲ್ಲಿ ಸ್ಫೋಟಕ ಇಡುತ್ತಾರೆ. ಇತ್ತೀಚೆಗೆ ನಡೆದ ಗರ್ಭಿಣಿ ಆನೆ ಸಾವಿನ ಪ್ರಕರಣದಲ್ಲಿ ಸ್ಫೋಟಕಗಳನ್ನು ಪೈನಾಪಲ್ನಲ್ಲಿ ಇರಿಸಲಾಗಿತ್ತು. ಆದ್ದರಿಂದ ಆನೆಯನ್ನು ಕೊಲ್ಲುವುದೇ ದುಷ್ಕರ್ಮಿಗಳ ಉದ್ದೇಶವಾಗಿತ್ತು’’ ಎನ್ನುತ್ತಾರೆ ಕೇರಳ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಜಯಚಂದ್ರನ್.