

ಬೆಂಗಳೂರು: ತಾತನ ಅಂತ್ಯಸಂಸ್ಥಾರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಮೊಮ್ಮಗ ಮತ್ತು ಆತನ ಗೆಳೆಯ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬಂಗಾರಪೇಟೆ ತಾಲೂಕಿನ ಮಾದೇಶ (18) ಮತ್ತು ತಮಟಮಾಕನಹಳ್ಳಿ ಮುರಳಿ (22) ಮೃತರು. ಕೆ.ಆರ್.ಪುರ ಸಮೀಪ ಭಟ್ಟರಹಳ್ಳಿ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ 10.30ರಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಗಾರಪೇಟೆ ತಾಲೂಕಿನ ಮಾದೇಶ ಮತ್ತು ಮುರಳಿ, ಮಾರತ್‌ಹಳ್ಳಿ ಸಮೀಪ ಎಇಟಿಎಸ್ ಲೇಔಟ್‌ನಲ್ಲಿ ನೆಲೆಸಿದ್ದರು. ಮನೆ ಹತ್ತಿರದ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾದೇಶನ ತಾತ ಬುಧವಾರ ಸಂಜೆ ಮೃತಪಟ್ಟಿದ್ದರು.
ಸಾವಿನ ವಿಷಯ ತಿಳಿದು ದುಃಖತಪ್ತನಾದ ಮಾದೇಶ, ತಾತನ ಅಂತಿಮ ದರ್ಶನಕ್ಕೆ ಗೆಳೆಯ ಮುರಳಿ ಜತೆ ಬೈಕ್‌ನಲ್ಲಿ ತೆರಳುತ್ತಿದ್ದ. ಬೈಕ್ ಚಲಾಯಿಸುತ್ತಿದ್ದ ಮುರಳಿ, ಭಟ್ಟರಹಳ್ಳಿ ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ. ಅದೇ ವೇಳೆ ಹೊಸಕೋಟೆ ಕಡೆಯಿಂದ ಅತಿವೇಗವಾಗಿ ಬಂದ ಕ್ಯಾಂಟರ್ ಬೈಕ್‌ಗೆ ಗುದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ಮುಂದಾಗಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.