ಆನೇಕಲ್: ಶ್ರೀಲಂಕಾದ ಕೊಲಂಬೊದಲ್ಲಿ ನಿನ್ನೆ ಹೃದಯಾಘಾತಕ್ಕೆ ಒಳಗಾಗಿದ್ದ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಅವರನ್ನು ನಿನ್ನೆಯೇ ತುರ್ತಾಗಿ ಏರ್ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಗಿದ್ದು, ಇಂದು ಅವರಿಗೆ ಸ್ಟೆಂಟ್ ಅಳವಡಿಕೆ ಮಾಡಲಾಗಿದೆ. ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ.
ನಿನ್ನೆ ಶ್ರೀಲಂಕಾದಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಂತೆ ಅವರನ್ನು ವಿಮಾನದಲ ಮೂಲಕ ಎಚ್ಎಎಲ್ ವಿಮಾನನಿಲ್ದಾಣಕ್ಕೆ ಕರೆತರಲಾಗಿತ್ತು. ನಂತರ ಅಲ್ಲಿಂದ ಗ್ರೀನ್ ಕಾರಿಡಾರ್ ಮೂಲಕ ತ್ವರಿತವಾಗಿ ಬೆಂಗಳೂರಿನ ದೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ಕರೆದೊಯ್ದು ದಾಖಲಿಸಲಾಗಿತ್ತು.
ನಾರಾಯಣ ಹೆಲ್ತ್ ಸಿಟಿ ಮುಖ್ಯಸ್ಥ ಡಾ.ದೇವಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಿನ್ನೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಇಂದು ಡಾ.ದೇವಿ ಶೆಟ್ಟಿ ಸಲಹೆಯಂತೆ ಡಾ.ಭಗೀರಥ್ ರಘುರಾಮನ್, ಡಾ.ಉದಯ್ ಖನೋಲ್ಕರ್, ಡಾ.ಪ್ರವೀಣ್ ಕುಮಾರ್ ನೇತೃತ್ವದ ವೈದ್ಯರ ತಂಡದಿಂದ ಸ್ಟೆಂಟ್ ಅಳವಡಿಕೆ ಮಾಡಿ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮುಂದಿನ ವಾರದ ಹಾಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.