ಬೆಂಗಳೂರು: ಇಸ್ರೇಲ್ನಲ್ಲಿನ ಯುದ್ಧ ಪರಿಸ್ಥಿತಿಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಸ್ಟೇಟಸ್ ಹಾಕಿದ್ದ ಕರ್ನಾಟಕ ಮೂಲದ ವೈದ್ಯರೊಬ್ಬರು ಕೊನೆಗೆ ಸ್ಟೇಟಸ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದರೂ ಉದ್ಯೋಗ ಕಳೆದುಕೊಳ್ಳುವಂತಾಗಿದೆ.
ಡಾ.ಸುನೀಲ್ ಜೆ. ರಾವ್ ಎಂಬ ಈ ವೈದ್ಯರು ಬಹರೈನ್ನ ದ ರಾಯಲ್ ಬಹರೈನ್ ಆಸ್ಪತ್ರೆಯಲ್ಲಿ ವೃತ್ತಿಯಲ್ಲಿದ್ದು, ಪ್ಯಾಲೆಸ್ತೀನಿಯರ ವಿರುದ್ಧ ಎಕ್ಸ್ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.
ಡಾ.ಸುನಿಲ್ ರಾವ್ ಸ್ಟೇಟಸ್ ಅವರ ವೈಯಕ್ತಿಕ ಅಭಿಪ್ರಾಯ. ಅದಕ್ಕೂ ಆಸ್ಪತ್ರೆಗೂ ಸಂಬಂಧವಿಲ್ಲ. ಅದಾಗ್ಯೂ ಅವರು ಸಮಾಜಕ್ಕೆ ಅಪರಾಧ ಅನಿಸುವಂಥ ಸ್ಟೇಟಸ್ ಹಾಕಿರುವುದರಿಂದ ತಕ್ಷಣವೇ ಜಾರಿಗೆ ಬರುವಂತೆ ಅವರನ್ನು ಉದ್ಯೋಗದಿಂದ ತೆಗೆಯಲಾಗಿದೆ ಎಂದು ದ ರಾಯಲ್ ಬಹರೈನ್ ಆಸ್ಪತ್ರೆ ತಿಳಿಸಿದೆ.
ನನ್ನ ಮಾತು ಮತ್ತು ಕಾರ್ಯಗಳಿಗಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ನಾನು ಈ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಗಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಪ್ರಸ್ತುತ ಘಟನೆಯ ಸಂದರ್ಭದಲ್ಲಿ ಇದು ಸಂವೇದನಾರಹಿತವಾಗಿತ್ತು. ವೈದ್ಯನಾಗಿ ಹೇಳುತ್ತೇನೆ, ಎಲ್ಲ ಜೀವಗಳು ಮುಖ್ಯ ಎಂಬುದಾಗಿ ಡಾ.ಸುನೀಲ್ ಎಕ್ಸ್ನಲ್ಲಿ ಕ್ಷಮೆ ಯಾಚಿಸಿದ್ದರು. ಅಲ್ಲದೆ ನಾನು ಕಳೆದ ಹತ್ತು ವರ್ಷಗಳಿಂದ ಇಲ್ಲಿದ್ದು, ಈ ದೇಶ, ದೇಶದ ಜನರು ಮತ್ತು ಧರ್ಮವನ್ನು ಗೌರವಿಸುತ್ತೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಅದಾಗ್ಯೂ ಅವರ ಸ್ಟೇಟಸ್ ಬಗ್ಗೆ ಕೆಲವರೂ ಇನ್ನೂ ಕೋಪ ವ್ಯಕ್ತಪಡಿಸುತ್ತಿದ್ದಾರೆ.