ನ್ಯೂಸ್

ಕಾವೇರಿ ನದಿ ನೀರು ವಿವಾದ: ಇನ್ನೂ 15 ದಿನ ನಿತ್ಯ 2,600 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಆದೇಶ!

ನವದೆಹಲಿ: ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಉದ್ಭವಿಸಿರುವ ಸಂಘರ್ಷ ಮುಂದುವರಿದಿದ್ದು, ಕರ್ನಾಟಕಕ್ಕೆ ಇನ್ನೊಮ್ಮೆ ಹಿನ್ನಡೆ ಆದಂತಾಗಿದೆ. ಅರ್ಥಾತ್, ತಮಿಳುನಾಡಿಗೆ ಇನ್ನೂ ನೀರು ಹರಿಸುವುದು ಕರ್ನಾಟಕಕ್ಕೆ ಅನಿವಾರ್ಯವಾಗಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್​ಸಿ) 89ನೇ ಸಭೆಯಲ್ಲಿ ಇಂಥದ್ದೊಂದು ಆದೇಶ ಹೊರಬಿದ್ದಿದೆ. ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ಅಹವಾಲನ್ನು ಆಲಿಸಿದ ಬಳಿಕ ಸಮಿತಿ ಈ ಆದೇಶವನ್ನು ನೀಡಿದೆ.

ಸಿಡಬ್ಲ್ಯುಆರ್​ಸಿ ಹೊಸ ಆದೇಶದ ಪ್ರಕಾರ ಕರ್ನಾಟಕ ನ. 1ರಿಂದ 15ರ ವರೆಗೆ ಪ್ರತಿನಿತ್ಯ ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಹರಿಸಬೇಕಾಗಿದೆ. ಬಿಳಿಗುಂಡ್ಲು ಮೂಲಕ ಈ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಲಾಗಿದೆ.

ಜಲಾಶಯಗಳಿಗೆ ನೀರಿನ ಹರಿವು ಬಹುತೇಕ ಇಲ್ಲವಾಗಿರುವುದರಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತರುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಕರ್ನಾಟಕ ಮನವಿ ಮಾಡಿಕೊಂಡಿದ್ದರೂ ಈ ಆದೇಶ ಹೊರಬಿದ್ದಿದೆ ಎನ್ನಲಾಗಿದೆ.