ನ್ಯೂಸ್

ಬಾಯ್ಸ್​ ಹಾಸ್ಟೆಲ್​ನಲ್ಲಿ ಮಹಿಳೆಯ ಅಶ್ಲೀಲ ವರ್ತನೆ: ಅಡುಗೆ ಪಾತ್ರೆಯಲ್ಲೇ ಮೂತ್ರ ವಿಸರ್ಜನೆ, ವಿಡಿಯೋ ವೈರಲ್​

ಹೈದರಾಬಾದ್​: ತೆಲಂಗಾಣದ ಕರೀಮ್​ನಗರ ಜಿಲ್ಲೆಯಲ್ಲಿ ಖಾಸಗಿ ಬಾಯ್ಸ್​ ಹಾಸ್ಟೆಲ್​ನಲ್ಲಿ ಅಡುಗೆ ಕೆಲಸ ಮಾಡುವ ಮಹಿಳೆಯೊಬ್ಬಳ ವರ್ತನೆ ಎಲ್ಲರನ್ನು ನಿಬ್ಬೆರಗಾಗಿಸಿದೆ. ಅಡುಗೆ ಮಾಡುವ ಪಾತ್ರಯಲ್ಲಿಯೇ ಮಹಿಳೆ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯ ಹಾಸ್ಟೆಲ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆಹಾರದಲ್ಲಿ ಕೆಟ್ಟ ವಾಸನೆ

ಅಡುಗೆ ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿ, ಅದನ್ನು ಪಾತ್ರೆ ತೊಳೆಯುವ ಸಿಂಕ್​ನಲ್ಲಿ ಸುರಿದು ಬಳಿಕ ಅದೇ ಪಾತ್ರೆಯಲ್ಲಿ ಅಡುಗೆ ಮಾಡಿರುವುದು ವರದಿಯಾಗಿದೆ. ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದೆ. ಆಹಾರದಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಹುಡುಗರು ಅನುಮಾನಗೊಂಡು, ಹಾಸ್ಟೆಲ್​ ಆಡಳಿತ ಮಂಡಳಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮಹಿಳೆಯ ನಿಜ ಬಣ್ಣ ಬಯಲಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆಕೆಯ ವರ್ತನೆ ಬಯಲಾದ ಬಳಿಕ ಅಡುಗೆ ಮಾಡುವ ಪಾತ್ರೆಯಲ್ಲಿ ಯಾರಾದರೂ ಮೂತ್ರ ವಿಸರ್ಜನೆ ಮಾಡುತ್ತಾರಾ? ಎಂದು ಹುಡುಗರು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ

ಅಂದಹಾಗೆ ಈ ಘಟನೆ ಕರೀಮ್​ ನಗರ ಜಿಲ್ಲೆಯ ಮಂಕಮ್ಮತೋಟ ವಿವೇಕ್​ ಬಾಯ್ಸ್​ ಹಾಸ್ಟೆಲ್​ನಲ್ಲಿ ನಡೆದಿದೆ. ವಿಡಿಯೋ ನೋಡಿದ ಬಳಿಕ ಹಾಸ್ಟೆಲ್​ನಲ್ಲಿ ಊಟ ಮಾಡುವುದನ್ನೇ ಹುಡುಗರು ನಿಲ್ಲಿಸಿದ್ದಾರೆ. ಅಲ್ಲದೆ, ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಸ್ಟೆಲ್​ ಮ್ಯಾನೇಜ್​ಮೆಂಟ್​ ವಿರುದ್ಧ ಯಾವುದೇ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಹಾಸ್ಟೆಲ್​ ಅನ್ನು ಜಪ್ತಿ ಮಾಡುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.

ನಮಗೂ ಭಯ ಶುರುವಾಗಿದೆ

ಇದೆಲ್ಲದರ ನಡುವೆ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಮಹಿಳೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಸ್ಟೆಲ್​ನಲ್ಲಿ ತಂಗಿರುವ ವಿದ್ಯಾರ್ಥಿಗಳಿಗೆ ಇದೀಗ ಹೊಸ ಆತಂಕ ಎದುರಾಗಿದೆ. ವಿಡಿಯೋ ನಮಗೂ ಭಯ ಶುರುವಾಗಿದೆ ಎಂದು ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಇಂತಹ ಮಹಿಳೆಯರನ್ನು ಸುಮ್ಮನೆ ಬಿಡಬಾರದು ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಪಟ್ಟು ಹಿಡಿದಿದ್ದಾರೆ. (ಏಜೆನ್ಸೀಸ್​)